ರಕ್ತ ಚಂದನ

ರಕ್ತ ಚಂದನ ಅಥವಾ ಕೆಂಪು ಚಂದನ ಆಯುರ್ವೇದದಲ್ಲಿ ಬಹಳ ಪವಿತ್ರ ಹಾಗೂ ಔಷಧೀಯ ಮರ. ಇದರ ವೈಜ್ಞಾನಿಕ ಹೆಸರು Pterocarpus santalinus. ಬಿಳಿ ಚಂದನಕ್ಕಿಂತ ಇದು ಬೇರೆ. ಬಿಳಿ ಚಂದನಕ್ಕೆ ಸುಗಂಧ ಇದೆ, ಆದರೆ ರಕ್ತ ಚಂದನಕ್ಕೆ ಪರಿಮಳ ಇಲ್ಲ.
ರಕ್ತ ಚಂದನದ ಗುಣಗಳು
ರಸ – ತಿಕ್ತ – ಕಹಿ, ಕಷಾಯ – ಒಗರು
ಗುಣ – ಲಘು – ಹಗುರ, ರೂಕ್ಷ – ಒಣಗಿಸುವ
ಪಿತ್ತ ಮತ್ತು ಕಫ ಶಾಮಕ. ವಾತವನ್ನು ಸ್ವಲ್ಪ ಹೆಚ್ಚಿಸಬಹುದು.

ಉಪಯೋಗ
ಮೊಡವೆ, ಕಲೆ, ಬಿಸಿಲಿನಿಂದ ಆಗುವ ಸುಟ್ಟ ಕಲೆ, ತುರಿಕೆಗೆ ಇದರ ಲೇಪ ಉತ್ತಮ. ರಕ್ತ ಚಂದನದ ಪುಡಿಗೆ ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಪಿತ್ತದಿಂದ ಆಗುವ ಮೊಡವೆಗೆ ತುಂಬಾ ಒಳ್ಳೆಯದು. ಇದಕ್ಕೆ “ರಕ್ತ ಶೋಧಕ” ಅಂತ ಹೆಸರು. ದೇಹದಲ್ಲಿ ಸೇರಿದ ವಿಷ, ಪಿತ್ತದ ತೀಕ್ಷ್ಣತೆ ಕಡಿಮೆ ಮಾಡಿ ರಕ್ತವನ್ನು ಶುದ್ಧ ಮಾಡುತ್ತೆ. ಚರ್ಮದ ಖಾಯಿಲೆ, ಸೋರಿಯಾಸಿಸ್, ಎಕ್ಸಿಮಾಗೆ ಕಷಾಯ ರೂಪದಲ್ಲಿ ಸೇವಿಸಬೇಕು.

ಕಣ್ಣು ಉರಿ, ಕೆಂಪಾಗುವುದು, ನೇತ್ರಾಭಿಷ್ಯಂದಕ್ಕೆ ರಕ್ತ ಚಂದನದ ಕಷಾಯದಿಂದ ಕಣ್ಣು ತೊಳೆಯಬಹುದು. ಆದರೆ ವೈದ್ಯರ ಸಲಹೆ ಇಲ್ಲದೆ ಮಾಡಬಾರದು. ಗಾಯವನ್ನು ಬೇಗ ಮಾಯಿಸುವ ಗುಣ ಹೊಂದಿದೆ. ರಕ್ತಸ್ರಾವ ನಿಲ್ಲಿಸುತ್ತದೆ. ಲೇಪ ರೂಪದಲ್ಲಿ ಹಚ್ಚಿದರೆ ಊತ ಕಡಿಮೆಯಾಗುತ್ತೆ. ಹಿಂದಿನ ಕಾಲದಲ್ಲಿ ರಾಣಿಯರು ರಕ್ತ ಚಂದನದ ಲೇಪ ಹಚ್ಚಿಕೊಳ್ಳುತ್ತಿದ್ದರು. ಇದು ಮುಖದ ಕಾಂತಿ ಹೆಚ್ಚಿಸಿ, ಬಿಸಿಲಿನ ಕಲೆ ನಿವಾರಿಸಿ, ಚರ್ಮವನ್ನು ತಂಪಾಗಿಡುತ್ತೆ. “ವರ್ಣ್ಯ” ದ್ರವ್ಯಗಳಲ್ಲಿ ಇದೂ ಒಂದು.

  1. ಮೊಡವೆಗೆ ರಕ್ತ ಚಂದನ ಪುಡಿ 1 ಚಮಚ + ಅರಿಶಿನ ಚಿಟಿಕೆ + ಜೇನುತುಪ್ಪ ಬೆರೆಸಿ ಹಚ್ಚಿ
  2. ಬಿಸಿಲು ಕಲೆಗೆ ರಕ್ತ ಚಂದನ + ಸೌತೆಕಾಯಿ ರಸ + ಮೊಸರು ಬೆರೆಸಿ ಲೇಪ
  3. ಶ್ರೀಗಂಧದ ಜೊತೆ ರಕ್ತ ಚಂದನ ಅರೆದು ಹಣೆಗೆ ಹಚ್ಚಿದರೆ ಪಿತ್ತದ ತಲೆನೋವು ಕಡಿಮೆ.
  4. ದೇಹದ ಉರಿಗೆ ರಕ್ತ ಚಂದನ ಪುಡಿ 1/2 ಚಮಚ + ಕಲ್ಲುಸಕ್ಕರೆ + ನೀರು ಬೆರೆಸಿ ಕುಡಿಯುವುದು.

ಯಾರು ಉಪಯೋಗಿಸಬಾರದು
ವಾತ ಪ್ರಕೃತಿಯವರು ಮೈ ಕೈ ನೋವು, ಕೀಲು ನೋವು ಜಾಸ್ತಿ ಇರುವವರು ಸೇವನೆ ಕಡಿಮೆ ಮಾಡಬೇಕು. ಏಕೆಂದರೆ ಇದು ಶೀತ ಮತ್ತು ರೂಕ್ಷ ಗುಣ ಹೊಂದಿದೆ.
ಗರ್ಭಿಣಿಯರು ವೈದ್ಯರ ಸಲಹೆ ಇಲ್ಲದೆ ಸೇವನೆ ಮಾಡಬಾರದು.
ಮಾರುಕಟ್ಟೆಯಲ್ಲಿ ಖರೀದಿಸುವಾಗ ಎಚ್ಚರ- ನಕಲಿ ರಕ್ತ ಚಂದನ ಜಾಸ್ತಿ ಸಿಗುತ್ತಿದೆ. ಇದಕ್ಕೆ ಇಟ್ಟಿಗೆ ಪುಡಿ, ಬಣ್ಣ ಬೆರೆಸಿರುತ್ತಾರೆ. ನೀರಿನಲ್ಲಿ ಹಾಕಿದರೆ ಅಸಲಿ ರಕ್ತ ಚಂದನ ಮುಳುಗುತ್ತೆ, ಬಣ್ಣ ಬಿಡಲ್ಲ. ನಾಲಿಗೆಗೆ ಹಚ್ಚಿದರೆ ಒಗರು-ಕಹಿ ರುಚಿ ಇರುವುದು. ಯಾವುದೇ ಚೂರ್ಣ, ಕಷಾಯವನ್ನು ದೀರ್ಘಕಾಲ ತೆಗೆದುಕೊಳ್ಳುವ ಮುನ್ನ ಆಯುರ್ವೇದ ವೈದ್ಯರ ಸಲಹೆ ಪಡೆಯುವುದು ಅವಶ್ಯ.







error: Content is protected !!
Scroll to Top