ಆಹಾರ ಗುಣಮಟ್ಟ ಸುರಕ್ಷತೆ ಬಗ್ಗೆ ಬೋಳಾಸ್ ಕಂಪನಿ ಹೇಳಿದ್ದೇನು?

ಅಧಿಕಾರಿಗಳ ಪರಿಶೀಲನಾ ವರದಿಗಳ ಬಗ್ಗೆ ಬೋಳಾಸ್ ಸ್ಪಷ್ಟನೆ

ಮಂಗಳೂರು: ಬೈಕಂಪಾಡಿಯಲ್ಲಿರುವ ನಮ್ಮ ಖಾದ್ಯ ತೈಲ ಸಂಸ್ಕರಣೆ ಹಾಗೂ ಪ್ಯಾಕಿಂಗ್ ಘಟಕದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ತಪಾಸಣೆಗೆ ಸಂಬಂಧಿಸಿದಂತೆ,ದ ಕೆಲವು ತಪ್ಪು ಹಾಗೂ ವಾಸ್ತವಾಂಶಗಳಿಗೆ ವಿರುದ್ಧವಾದ ವರದಿಗಳ ಕುರಿತು ಬೋಳಾಸ್ ಕಂಪನಿ ಸ್ಪಷ್ಟನೆ ನೀಡಿದೆ.

ತಪಾಸಣೆ ವೇಳೆ ಅಧಿಕಾರಿಗಳು ನಮ್ಮ ಘಟಕದ ಸ್ವಚ್ಛತೆ, ನೈರ್ಮಲ್ಯ ಹಾಗೂ ಇತರ ಕಾರ್ಯಾಚರಣೆಯ ಪರಿಸ್ಥಿತಿಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಸ್ವಚ್ಛತೆ, ನೈರ್ಮಲ್ಯ ಅಥವಾ ಖಾದ್ಯ ತೈಲದ ಗುಣಮಟ್ಟ ಹಾಗೂ ಸುರಕ್ಷತೆಗೆ ಸಂಬಂಧಿಸಿದ ಯಾವುದೇ ಲೋಪಗಳನ್ನು ಸೂಚಿಸಿಲ್ಲ. ಈ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ನೋಟಿಸ್ ಕೂಡ ನೀಡಲಾಗಿಲ್ಲ.

ತಪಾಸಣಾಧಿಕಾರಿಗಳು ಗಮನಿಸಿದ ಏಕೈಕ ವಿಷಯವೆಂದರೆ ಲೇಬಲ್‌ನಲ್ಲಿನ ಘೋಷಣೆಗೆ ಸಂಬಂಧಿಸಿದ ವ್ಯತ್ಯಾಸ. ನಾವು ಮಾರುಕಟ್ಟೆಯಿಂದ ಕಡಲೆಕಾಯಿ ಎಣ್ಣೆಯನ್ನು ಖರೀದಿಸಿ, ನಮ್ಮ ಬ್ರ್ಯಾಂಡ್ ಹೆಸರಿನಲ್ಲಿ ಗ್ರಾಹಕರ ಬಳಕೆಗೆ ಪೌಚ್‌ಗಳು ಹಾಗೂ ಕ್ಯಾನ್‌ಗಳಲ್ಲಿ ಮರುಪ್ಯಾಕಿಂಗ್ ಮಾಡುತ್ತೇವೆ. ನಮ್ಮ ಪ್ರಸ್ತುತ ಲೇಬಲ್‌ಗಳಲ್ಲಿ “Processed and Packed by Bolas Agro” ಎಂದು ನಮೂದಿಸಲಾಗಿತ್ತು. ಆದರೆ ಎಣ್ಣೆಯನ್ನು ಮರುಪ್ಯಾಕಿಂಗ್ ಮಾಡುತ್ತಿರುವುದರಿಂದ, ಸೂಕ್ತ ಘೋಷಣೆ “Packed by Bolas Agro” ಎಂದು ಇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಅದರಂತೆ, ಮುಂದಿನ ಪ್ಯಾಕಿಂಗ್‌ಗಳಲ್ಲಿ ಲೇಬಲ್‌ನಲ್ಲಿರುವ ಘೋಷಣೆಯನ್ನು ತಿದ್ದುಪಡಿ ಮಾಡಬೇಕೆಂದು ನಮಗೆ ಸೂಚಿಸಲಾಗಿದೆ. ಈ ತಿದ್ದುಪಡಿ ಹಾಗೂ ಪ್ಯಾಕೇಜಿಂಗ್ ವಿನ್ಯಾಸದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವವರೆಗೆ, ಕೆಲವು ಪ್ಯಾಕಿಂಗ್ ಸಾಮಗ್ರಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮರುಬಳಕೆ ಮಾಡಿದ ಅಥವಾ ಬಳಕೆಗೆ ಯೋಗ್ಯವಲ್ಲದ ಖಾದ್ಯ ತೈಲವನ್ನು ಬಳಸಿರುವುದು, ಕಲಬೆರಕೆ ಮಾಡಿರುವುದು, ಒಂದು ವಿಧದ ಎಣ್ಣೆಯನ್ನು ಮತ್ತೊಂದು ವಿಧದ ಎಣ್ಣೆಯೆಂದು ಬದಲಿಸಿ ಮಾರಾಟ ಮಾಡಿರುವುದು ಅಥವಾ ಇಂತಹ ಯಾವುದೇ ಆಹಾರ ಸುರಕ್ಷತಾ ಉಲ್ಲಂಘನೆ ಕುರಿತು ತಪಾಸಣಾಧಿಕಾರಿಗಳು ಆರೋಪ ಮಾಡಿಲ್ಲ ಎಂಬುದನ್ನು ನಾವು ಸ್ಪಷ್ಟವಾಗಿ ತಿಳಿಸುತ್ತೇವೆ.

ಅಧಿಕಾರಿಗಳ ಗಮನಕ್ಕೆ ಬಂದಿರುವ ವಿಷಯವು ಲೇಬಲ್‌ನಲ್ಲಿನ ಘೋಷಣೆಗೆ ಮಾತ್ರ ಸೀಮಿತವಾಗಿದೆ.

ಆದರೆ, ನಮ್ಮ ಘಟಕದಲ್ಲಿ ಮರುಬಳಕೆ ಮಾಡಿದ ಖಾದ್ಯ ತೈಲ ಪತ್ತೆಯಾಗಿದೆ ಅಥವಾ ಬೋಳಾಸ್ ಅಗ್ರೋ ಒಂದು ವಿಧದ ಎಣ್ಣೆಯನ್ನು ಮತ್ತೊಂದು ವಿಧದ ಎಣ್ಣೆಯೆಂದು ಹೇಳಿ ಗ್ರಾಹಕರನ್ನು ವಂಚಿಸುತ್ತಿದೆ ಎಂಬ ಗಂಭೀರ ಹಾಗೂ ಆಧಾರರಹಿತ ಆರೋಪಗಳನ್ನು ಒಳಗೊಂಡ ಕೆಲವು ಸುದ್ದಿಗಳು ಪ್ರಕಟವವಾಗಿದ್ದು ಇದು ಸತ್ಯಕ್ಕೆ ದೂರವಾಗಿದೆ ಎಂದು ಬೋಳಾಸ್ ತಿಳಿಸಿದೆ.

ಇಂತಹ ವರದಿಗಳು ತಪಾಸಣಾಧಿಕಾರಿಗಳು ನಮಗೆ ತಿಳಿಸಿದ ವಾಸ್ತವಾಂಶಗಳಿಗೆ ಹೊಂದಿಕೆಯಾಗುವುದಿಲ್ಲ.
ಇಂತಹ ತಪ್ಪಾದ ವರದಿಗಳು ಗ್ರಾಹಕರಲ್ಲಿ ಅನಗತ್ಯ ಆತಂಕವನ್ನು ಉಂಟುಮಾಡುವುದರ ಜೊತೆಗೆ ನಮ್ಮ ಸಂಸ್ಥೆಯ ಪ್ರತಿಷ್ಠೆಗೆ ಅನಾವಶ್ಯಕ ಹಾನಿಯನ್ನುಂಟುಮಾಡುತ್ತವೆ. ಹೀಗಾಗಿ ವಸ್ತು ಸ್ಥಿತಿಯ ಬಗ್ಗೆ ಜನತೆ ತಿಳಿದು ಕೊಳ್ಳಬೇಕು.
ನಾವು ಈ ಸ್ಪಷ್ಟನೆಯಲ್ಲಿ ತಿಳಿಸಿರುವ ವಾಸ್ತವಾಂಶಗಳನ್ನು ದೃಢೀಕರಿಸಲು ತಪಾಸಣೆಗೆ ಸಂಬಂಧಿಸಿದ ನೋಟಿಸ್‌ಗಳು ಹಾಗೂ ಇತರ ಅಗತ್ಯ ದಾಖಲೆಗಳ ಪ್ರತಿಗಳನ್ನು ಹಂಚಿಕೊಳ್ಳಲು ಸಿದ್ಧರಿದ್ದೇವೆ.

ಆದ್ದರಿಂದ, ನಿಮ್ಮ ಸುದ್ದಿ ಸಂಸ್ಥೆಯು ವಾಸ್ತವಾಂಶಗಳನ್ನು ಪರಿಶೀಲಿಸಿ, ತಪ್ಪಾದ ಆರೋಪಗಳನ್ನು ಹಿಂಪಡೆದು, ಓದುಗರಿಗೆ ನಿಜವಾದ ತಪಾಸಣಾ ವರದಿಯ ಬಗ್ಗೆ ತಪ್ಪು ಮಾಹಿತಿ ಹೋಗದಂತೆ ಸೂಕ್ತ ಸ್ಪಷ್ಟನೆ ಅಥವಾ ತಿದ್ದುಪಡಿ ಪ್ರಕಟಿಸಬೇಕೆಂದು ವಿನಂತಿಸುತ್ತೇವೆ.

ಬೋಳಾಸ್ ಅಗ್ರೋ ಸಂಸ್ಥೆಯು ಆಹಾರ ಸುರಕ್ಷತೆ, ಗುಣಮಟ್ಟ, ಸ್ವಚ್ಛತೆ, ನೈರ್ಮಲ್ಯ ಹಾಗೂ ಕಾನೂನು ನಿಯಮಗಳ ಪಾಲನೆಗೆ ಸದಾ ಬದ್ಧವಾಗಿದೆ ಎಂದು ಬೋಳಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ ತಿಳಿಸಿದೆ.



























































































































error: Content is protected !!
Scroll to Top