ಸಿ ಎಂ ಡಿ.ಕೆ. ಶಿವಕುಮಾರ್ ಲಿಖಿತ ಭರವಸೆ ನೀಡುವವರೆಗೂ ಸ್ಥಳದಿಂದ ಕದಲಲ್ಲ ಎಂದು ಮಹಿಳೆಯರ ಪಟ್ಟು
ಬೆಂಗಳೂರು: ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ರಾಜಧಾನಿ ಬೆಂಗಳೂರಿನಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಸಂಜೆಯಿಂದ ಬೆಳಗ್ಗೆವರೆಗೂ ಕೊರೆಯುವ ಚಳಿಯ ವಾತಾವರಣವಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಆಶಾ ಕಾರ್ಯಕರ್ತೆಯರು ತಮ್ಮ ಪುಟ್ಟ ಮಕ್ಕಳ ಜೊತೆ ರಸ್ತೆಯಲ್ಲಿ ರಾತ್ರಿಯಿಡೀ ಮಲಗಿದ್ದಾರೆ. 15,000 ರೂಪಾಯಿ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಈ ಕಠಿಣ ಪ್ರತಿಭಟನೆ ನಡೆಸುತ್ತಿದ್ದಾರೆ.

ನಮ್ಮ ಬೇಡಿಕೆಗಳು ಈಡೇರಬೇಕು. ಸಿಎಂ ಡಿ.ಕೆ. ಶಿವಕುಮಾರ್ ಲಿಖಿತ ಭರವಸೆ ನೀಡುವವರೆಗೂ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಪುಟ್ಟ ಪುಟ್ಟ ಮಕ್ಕಳನ್ನು ಹಾಸಿಗೆ ಇಲ್ಲದೇ, ತಕ್ಕಂತಹ ಬೆಡ್ಶೀಟ್ಗಳಿಲ್ಲದೇ ಎದೆಗೆ ಅಪ್ಪಿಕೊಂಡು ತಾಯಂದಿರು ಮಲಗಿಸುತ್ತಿರುವ ದೃಶ್ಯ ಎಂತವರಿಗೂ ಮನ ಕಲಕುವಂತಿತ್ತು. ಚಳಿ, ಅನ್ನಾಹಾರ, ಬಾತ್ರೂಮ್ಗಳ ಸಮಸ್ಯೆಯಿಂದ ಕಂಗಾಲಾದರೂ ಮಹಿಳಾಮಣಿಗಳು ಕಣ್ಣೀರಿಡುತ್ತಲೇ ದಿನಕಳೆದಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಶಾ ಕಾರ್ಯಕರ್ತೆಯರಿಗೆ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದ್ದು, ಆರ್ಥಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಕೋರಿದ್ದಾರೆ. ಪ್ರೋತ್ಸಾಹ ಧನ ಸೇರಿದಂತೆ 8 ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದಿರುವ ಸಿಎಂ, ಬೇಡಿಕೆಗಳ ಬಗ್ಗೆ ಒಂದೇ ದಿನದಲ್ಲಿ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಸಿಎಂ ಮನವಿಗೆ ಜಗ್ಗದ ಆಶಾ ಕಾರ್ಯಕರ್ತೆಯರು, ಲಿಖಿತ ಭರವಸೆ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಣೆ ಮಾಡಿದ್ದಾರೆ.




























































