ಫ್ರೀಡಂಪಾರ್ಕ್ನಲ್ಲಿ ಕೊರೆವ ಚಳಿಯಲ್ಲೂ ಅಹೋರಾತ್ರಿ ಧರಣಿ
ಬೆಂಗಳೂರು: ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಪ್ರತಿಭಟನೆ 3ನೇ ದಿನಕ್ಕೆ ಕಾಲಿಟ್ಟಿದೆ. ಮಾಸಿಕ 15,000 ಗೌರವಧನ, 5 ಲಕ್ಷ ನಿವೃತ್ತಿ ಇಡಗಂಟು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ. ರಾಜ್ಯಾದ್ಯಂತದ ಸಾವಿರಾರು ಆಶಾ ಕಾರ್ಯಕರ್ತೆಯರು ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಲಿಖಿತ ಭರವಸೆ ನೀಡುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ. ಇಂದಿನ ಸಚಿವ ಸಂಪುಟ ಸಭೆಯತ್ತ ಆಶಾ ಕಾರ್ಯಕರ್ತೆಯರ ಚಿತ್ತ ನೆಟ್ಟಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬೆಂಗಳೂರಿನ ಫ್ರೀಡಂಪಾರ್ಕ್ ಆವರಣದಲ್ಲಿ ಜಾಗ ಸಾಲದಂತಾಗಿದೆ. ಇದರಿಂದಾಗಿ ಆಶಾ ಕಾರ್ಯಕರ್ತೆಯರು ಫ್ರೀಡಂಪಾರ್ಕ್ ಪಕ್ಕದ ಕಾಳಿದಾಸ ರಸ್ತೆ ಮತ್ತು ಮುಂಭಾಗದ ಶೇಷಾದ್ರಿ ರಸ್ತೆ ಮೇಲೆಯೇ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ. ಅಲ್ಲದೆ ರಾತ್ರಿ ಕೊರೆವ ಚಳಿಯನ್ನೂ ಲೆಕ್ಕಿಸದೆ ಕಂಬಳಿ ಹೊದ್ದು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಕೊರೆವ ಚಳಿಯಲ್ಲೂ ಬೀದಿಯಲ್ಲಿ ಪುಟಾಣಿ ಮಕ್ಕಳನ್ನು ಕಟ್ಟಿಕೊಂಡು ಪ್ರತಿಭಟಿಸುತ್ತಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆ ಬಗ್ಗೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಮುಖ್ಯ ಬೇಡಿಕೆಯಾದ 15,000 ಮಾಸಿಕ ವೇತನ ನಿಗದಿಪಡಿಸುವ ಬಗ್ಗೆ ಇಂದಿನ ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕರಾದ ರಜನಿ ತಿಳಿಸಿದ್ದಾರೆ ಎನ್ನಲಾಗಿದೆ. ಸದ್ಯ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಸುವುದಾಗಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಘೋಷಿಸಿದೆ.
ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳು
– 15,000 ರೂಪಾಯಿ ನಿಶ್ಚಿತ ಮಾಸಿಕ ಗೌರವಧನ
– ಸಮಸ್ತ ಆ್ಯಪ್ ಮೂಲಕ ಒತ್ತಾಯದ ಮೊಬೈಲ್ ಕೆಲಸ ಕೈಬಿಡಬೇಕು
– ನಿವೃತ್ತರಾಗಿರುವವರಿಗೆ ಬಾಕಿ ಇಡಗಂಟು ಬಿಡುಗಡೆ ಮಾಡಬೇಕು
– ಆಶಾನಿಧಿ ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು
– ಸುಗಮಕಾರರ ಮರುನೇಮಕ & ಬಾಕಿ ವೇತನ ಪಾವತಿಸಬೇಕು
– ಎನ್ಐಒಎಸ್ ತರಬೇತಿ ಪ್ರೋತ್ಸಾಹಧನ ನೀಡಬೇಕು
– ತೀವ್ರ ಕಾಯಿಲೆ ಚಿಕಿತ್ಸಾ ಅವಧಿಯಲ್ಲಿ 3 ತಿಂಗಳ ಗೌರವಧನ ನೀಡಬೇಕು
– ಸೇವಾ ನಿವೃತ್ತಿ ಇಡಗಂಟನ್ನು ಬಂಗಾಳ ಮಾದರಿ 5 ಲಕ್ಷಕ್ಕೆ ಹೆಚ್ಚಿಸಬೇಕು
ಮಂಗಳೂರಿನಲ್ಲಿ ಈ ಬಗ್ಗೆ ಆರೋಗ್ಯ ಸಚಿವ ಯುಟಿ ಖಾದರ್ ಪ್ರತಿಕ್ರಿಯಿಸಿ ಬೇಡಿಕೆಗಳ ಬಗ್ಗೆ ಕೇಂದ್ರ ಸಚಿವರು ಮತ್ತು ಸಿಎಂ ಜೊತೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.




























































