ಮಂಗಳೂರು : ಕೆಎಸ್‌ ಪರೀಕ್ಷೆ ಬರೆಯಲು ಬಂದ ಮಹಿಳಾ ಅಭ್ಯರ್ಥಿಗಳಿಗೆ ತಪಾಸಣೆ ಸಂದರ್ಭ ಅವಮಾನ ಆರೋಪ

ಹಿಜಾಬ್‌ ಧರಿಸಲು ಅವಕಾಶ ಕೊಡಲಿಲ್ಲ; ಅನಗತ್ಯ ದೈಹಿಕ ತಪಾಸಣೆ ಮಾಡಿದ್ದಾರೆ ಎಂದ ಮಹಿಳಾ ಅಭ್ಯರ್ಥಿಗಳು

ಮಂಗಳೂರು : ಮಂಗಳೂರಿನಲ್ಲಿ ಕರ್ನಾಟಕ ಆಡಳಿತ ಸೇವೆ (KAS) ಪರೀಕ್ಷೆ ಬರೆಯಲು ಬಂದಿದ್ದ ಮಹಿಳಾ ಅಭ್ಯರ್ಥಿಗಳಿಗೆ ಭದ್ರತಾ ತಪಾಸಣೆಯ ಸಂದರ್ಭದಲ್ಲಿ ಮುಜುಗರ ಉಂಟುಮಾಡಲಾಗಿ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಭ್ಯರ್ಥಿಗಳ ಬಟ್ಟೆಯೊಳಗೆ ಕೈಹಾಕಿ ಪರಿಶೀಲನೆ ನಡೆಸಿದ್ದಲ್ಲದೆ, ಮಹಿಳೆಯರಿಗೆ ಹಿಜಾಬ್ ಧರಿಸಲೂ ಅವಕಾಶ ನೀಡಿಲ್ಲ ಎನ್ನಲಾಗಿದೆ.

ನಗರದ ಕಾರ್ ಸ್ಟ್ರೀಟ್‌ನ ಸರಕಾರಿ ಮಹಿಳಾ ಪಪೂ ಕಾಲೇಜಿನಲ್ಲಿ ನ.15ರಂದು ನಡೆದ ಕರ್ನಾಟಕ ಲೋಕಸೇವಾ ಆಯೋಗದ ಕೆಎಎಸ್ ಪರೀಕ್ಷೆಯ ಸಂದರ್ಭ ಈ ಘಟನೆ ನಡೆದಿದೆ.ಸುಮಾರು 100 ಮಹಿಳಾ ಅಭ್ಯರ್ಥಿಗಳನ್ನು ಪಿಎಸ್‌ಐ ಶ್ರೇಣಿಯ ಐವರು ಮಹಿಳಾ ಪೊಲೀಸ್ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಭ್ಯರ್ಥಿಗಳ ಪ್ಯಾಂಟ್‌ಗಳನ್ನು ಎಳೆದು ಒಳಭಾಗವನ್ನು ಪರಿಶೀಲಿಸಲಾಗಿದೆ.

ಪರೀಕ್ಷೆಯಲ್ಲಿ ನಕಲು ಮಾಡಲು ಚೀಟಿಗಳನ್ನು ತಂದಿರಬಹುದೆಂಬ ಅನುಮಾನದ ಮೇಲೆ ಅಭ್ಯರ್ಥಿಗಳ ಕುರ್ತಿಗಳ ಒಳಗೆ ಹಾಗೂ ಒಳಉಡುಪಿಗೆ ಕೈಹಾಕಿ ತಪಾಸಣೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಇತರ ಅಭ್ಯರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ಎದುರಿನಲ್ಲೇ ಇಂತಹ ಪರಿಶೀಲನೆ ನಡೆದಿದ್ದು, ಮಹಿಳಾ ಅಭ್ಯರ್ಥಿಗಳು ತೀವ್ರ ಮುಜುಗರ ಮತ್ತು ಅವಮಾನ ಅವಮಾನ ಅನುಭವಿಸಿದ್ದಾರೆ. ತಮ್ಮ ಗೌಪ್ಯತೆಗೆ ಧಕ್ಕೆಯಾಗುತ್ತಿರುವುದರ ಬಗ್ಗೆ ಅಭ್ಯರ್ಥಿಗಳು ಪ್ರಶ್ನಿಸಿದಾಗ, ಮುಖ್ಯಮಂತ್ರಿ ಕಠಿಣ ತಪಾಸಣೆಗೆ ಆದೇಶಿಸಿದ್ದಾರೆ ಎಂದು ಸಿಬ್ಬಂದಿ ಸಮರ್ಥಿಸಿಕೊಂಡಿದ್ದಾರೆ. ‘ನಿಮ್ಮ ದೇಹವನ್ನು ನೋಡುವ ಆಸಕ್ತಿ ನಮಗೇನೂ ಇಲ್ಲ’ ಎಂಬ ಅಸಂಬದ್ಧ ಮಾತುಗಳನ್ನಾಡಿ ಆಕ್ಷೇಪಣೆಗಳಿಗೆ ಕ್ಯಾರೇ ಮಾಡಲಿಲ್ಲ ಎಂದು ಮಹಿಳಾ ಅಭ್ಯರ್ಥಿಯೊಬ್ಬರು ಆರೋಪಿಸಿದ್ದಾರೆ.

ತಪಾಸಣೆಯನ್ನು ತರಗತಿಯ ಒಳಗಡೆ ನಡೆಸಿದ್ದರೂ, ಭದ್ರತೆಯ ಹೆಸರಿನಲ್ಲಿ ಮಹಿಳೆಯರ ಬಟ್ಟೆಯೊಳಗೆ ಕೈಹಾಕಿ ಪರಿಶೀಲಿಸುವ ಅಗತ್ಯವಿತ್ತೇ? ಇಂತಹ ತಪಾಸಣೆ ನಡೆಸುವ ಬಗ್ಗೆ ಅಭ್ಯರ್ಥಿಗಳಿಗೆ ಮುಂಚಿತವಾಗಿ ಮಾಹಿತಿ ನೀಡದೆ, ಅವರ ಒಪ್ಪಿಗೆಯನ್ನೂ ಪಡೆಯದೆ ಕ್ರಮ ಕೈಗೊಂಡಿರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಗಳನ್ನು ಆಕಾಂಕ್ಷಿಯೊಬ್ಬರು ಕೇಳಿದ್ದಾರೆ.

ಹಿಜಾಬ್ ಧರಿಸಲೂ ಅವಕಾಶ ನೀಡಲಿಲ್ಲ

ತಪಾಸಣೆಯ ವಿವಾದದ ಜತೆಗೆ ಮುಸ್ಲಿಮ್ ಮಹಿಳಾ ಅಭ್ಯರ್ಥಿಗಳ ಹಿಜಾಬ್ ಮೇಲಿನ ನಿರ್ಬಂಧ ಕೂಡ ಆಕ್ಷೇಪಕ್ಕೆ ಕಾರಣವಾಗಿದೆ. ಅಭ್ಯರ್ಥಿಗಳು ತಲೆಯನ್ನು ಮುಚ್ಚಿಕೊಳ್ಳಬಾರದು, ಕೂದಲು ಮತ್ತು ಕಿವಿಗಳು ಎಲ್ಲರಿಗೂ ಕಾಣುವಂತೆ ಇರಬೇಕು ಎಂದು ಭದ್ರತಾ ಸಿಬ್ಬಂದಿ ಸೂಚಿಸಿದ್ದರು ಎಂದು ಆರೋಪಿಸಲಾಗಿದೆ.
ಅಭ್ಯರ್ಥಿಗಳನ್ನು ಕೂಲಂಕಷವಾಗಿ ದೈಹಿಕ ತಪಾಸಣೆಗೆ ಒಳಪಡಿಸಿದ ಬಳಿಕವೂ ಹಿಜಾಬ್ ಧರಿಸಲು ಅವಕಾಶ ನೀಡಿರಲಿಲ್ಲ. ಅಲ್ಲದೆ, ENT ವೈದ್ಯರಿಂದ ಕಿವಿಗಳನ್ನೂ ಪರಿಶೀಲಿಸಲಾಗಿತ್ತು. ಇಷ್ಟೆಲ್ಲ ತಪಾಸಣೆ ನಡೆಸಿದ ನಂತರವೂ ತಲೆಯನ್ನು ಮುಚ್ಚಿಕೊಳ್ಳದಂತೆ ನಿರ್ಬಂಧ ವಿಧಿಸುವ ಅಗತ್ಯವೇನಿತ್ತು ಎಂಬ ಪ್ರಶ್ನೆಯನ್ನು ಆಕಾಂಕ್ಷಿ ಮುಂದಿಟ್ಟಿದ್ದಾರೆ. ವರ್ಷಗಟ್ಟಲೆ KAS ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಕೆಲವೇ ಕ್ಷಣಗಳಿರುವಾಗ ಇಂತಹ ಅವಮಾನಕರ ಅನುಭವ ಎದುರಾಗಿದೆ. ಇದರಿಂದ ಅವರು ತೀವ್ರ ಮುಜುಗರ ಮತ್ತು ಮಾನಸಿಕ ವೇದನೆ ಅನುಭವಿಸಿದ್ದಾರೆ ಎಂದು ಆಕಾಂಕ್ಷಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಮೊದಲ ಪತ್ರಿಕೆಯ ಪರೀಕ್ಷೆ ಮುಗಿದ ಬಳಿಕ ತಪಾಸಣೆಯ ವಿಧಾನದ ಬಗ್ಗೆ ಹಿರಿಯ ಅಧಿಕಾರಿಯೊಬ್ಬರ ಗಮನಕ್ಕೆ ತರಲಾಗಿತ್ತು. ಆದರೆ, ಎರಡನೇ ಪತ್ರಿಕೆಯ ಪರೀಕ್ಷೆಯ ಸಂದರ್ಭದಲ್ಲಿಯೂ ಅದೇರೀತಿಯ ರೀತಿಯ ತಪಾಸಣೆ ಮುಂದುವರಿದಿತ್ತು. ದೂರು ನೀಡಿದ ಬಳಿಕವೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಆರೋಪಿಸಲಾಗಿದೆ.

ಪರೀಕ್ಷೆಗೆ ಭದ್ರತೆ ಅಗತ್ಯವಾದರೂ, ಅದರ ಹೆಸರಿನಲ್ಲಿ ಅಭ್ಯರ್ಥಿಗಳ ವೈಯಕ್ತಿಕ ಗೌಪ್ಯತೆ ಮತ್ತು ಘನತೆಗೆ ಧಕ್ಕೆ ತರುವುದು ಸರಿಯಲ್ಲ. ಭದ್ರತಾ ಕ್ರಮಗಳು ಅಭ್ಯರ್ಥಿಗಳ ಹಕ್ಕುಗಳನ್ನು ಗೌರವಿಸುವಂತಿರಬೇಕು. ಮುಸ್ಲಿಮ್ ಮಹಿಳೆಯರ ಧಾರ್ಮಿಕ ಸ್ವಾತಂತ್ರ್ಯವನ್ನು ಕಡೆಗಣಿಸುವ ರೀತಿಯಲ್ಲಿ ನಿರ್ಬಂಧ ವಿಧಿಸಿರುವುದು ಗಂಭೀರ ಕಳವಳಕ್ಕೆ ಕಾರಣವಾಗಿದೆ. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು, ಪರೀಕ್ಷಾ ಸಿಬ್ಬಂದಿಗೆ ನೀಡಲಾಗಿದ್ದ ಸೂಚನೆಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು KPSC ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು KAS ಆಕಾಂಕ್ಷಿಗಳು ಒತ್ತಾಯಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬರುವ ಅಭ್ಯರ್ಥಿಗಳು ತಮ್ಮ ಘನತೆಗೆ ಧಕ್ಕೆ ತರುವಂತಹ ಅನುಭವ ಎದುರಿಸಬಾರದು ಎಂದು ಆಗ್ರಹಿಸಿದ್ದಾರೆ.

























































































































error: Content is protected !!
Scroll to Top