ಸರ್ಕಾರಿ ಕೆಲಸ ಇದ್ದರೂ ರೇಷನ್ ಅಕ್ಕಿ ಪಡೆಯುವವರಿಗೆ ರೈಲ್ವೆ ಇಲಾಖೆ ಕೊಟ್ಟ ಖಡಕ್ ವಾರ್ನಿಂಗ್ ಏನು ಗೊತ್ತಾ?

ನವದೆಹಲಿ: ಸರ್ಕಾರಿ ಹುದ್ದೆಯಲ್ಲಿದ್ದು, ಒಳ್ಳೆಯ ಸಂಬಳ ಪಡೆಯುತ್ತಿದ್ದರೂ, ಬಡವರಿಗಾಗಿ ಇರುವ ರಿಯಾಯಿತಿ ದರದ ಪಡಿತರ (Ration) ಸೌಲಭ್ಯವನ್ನು ಪಡೆಯುತ್ತಿರುವ 1.82 ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಅಂತಹವರಿಗೆ ರೈಲ್ವೆ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ರೈಲ್ವೆ ಮಂಡಳಿಯು ತಕ್ಷಣವೇ ತನಿಖೆಗೆ ಆದೇಶಿಸಿದ್ದು, ರೇಷನ್ ಅಕ್ಕಿ ಪಡೆಯಲು ಅನರ್ಹ ಫಲಾನುಭವಿಗಳಾಗಿರುವ ನೌಕರರು ತಮ್ಮ ರೇಷನ್ ಕಾರ್ಡ್‌ಗಳನ್ನು ಸ್ವಯಂಪ್ರೇರಿತವಾಗಿ ಹಿಂದಿರುಗಿಸುವಂತೆ ತಿಳಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (NFSA) ಪ್ರಯೋಜನಗಳು ಕೇವಲ ಅರ್ಹ ಬಡ ಕುಟುಂಬಗಳಿಗೆ ಮಾತ್ರ ತಲುಪುವಂತೆ ಮಾಡಲು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ದೇಶಾದ್ಯಂತ ವಿಶೇಷ ಪರಿಶೀಲನಾ ಅಭಿಯಾನ ನಡೆಸಿತ್ತು. ಈ ಪ್ರಕ್ರಿಯೆಯಲ್ಲಿ ದೇಶಾದ್ಯಂತ ಸೇವೆಯಲ್ಲಿರುವ 1,82,283 ರೈಲ್ವೆ ನೌಕರರ ಹೆಸರುಗಳು ಪಡಿತರ ಚೀಟಿದಾರರ ಪಟ್ಟಿಯೊಂದಿಗೆ ಹೊಂದಾಣಿಕೆಯಾಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಮಂಡಳಿಯು ನ. 11ರಂದು ಅಧಿಕೃತ ಸುತ್ತೋಲೆಯನ್ನು ಹೊರಡಿಸಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬಡ ಮತ್ತು ಅಗತ್ಯವಿರುವ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ. ಆದರೆ ಇದಕ್ಕೆ ನಿರ್ದಿಷ್ಟ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿಯಮಗಳ ಪ್ರಕಾರ, ಸರ್ಕಾರಿ ಇಲಾಖೆಗಳು, ಸಾರ್ವಜನಿಕ ವಲಯದ ಉದ್ಯಮಗಳು (PSU), ಸ್ವಾಯತ್ತ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳ ನೌಕರರನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ. ಉತ್ತಮ ವೇತನ ಪಡೆಯುತ್ತಿದ್ದರೂ ನಿಯಮ ಮೀರಿ ರೇಷನ್ ಕಾರ್ಡ್ ಹೊಂದಿರುವ ನೌಕರರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಸದ್ಯ 1.82 ಲಕ್ಷ ನೌಕರರನ್ನು ಪ್ರಾಥಮಿಕ ದತ್ತಾಂಶಗಳ ಹೊಂದಾಣಿಕೆಯ ಆಧಾರದ ಮೇಲೆ ಗುರುತಿಸಲಾಗಿದೆ. ಇದರರ್ಥ ಇವರೆಲ್ಲರೂ ನಿಯಮ ಉಲ್ಲಂಘಿಸಿ ಪಡಿತರ ಪಡೆಯುತ್ತಿದ್ದಾರೆ ಎಂದಲ್ಲ. ವಿವಿಧ ರಾಜ್ಯಗಳಲ್ಲಿ ಅರ್ಹತಾ ನಿಯಮಗಳು ಭಿನ್ನವಾಗಿರಬಹುದು. ಆದ್ದರಿಂದ ಪಟ್ಟಿಯಲ್ಲಿರುವ ನೌಕರರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ರೈಲ್ವೆ ಮಂಡಳಿ ಸೂಚಿಸಿದೆ. ಪರಿಶೀಲನೆಯ ನಂತರವಷ್ಟೇ ಯಾರು ಅರ್ಹರು ಮತ್ತು ಯಾರು ಅನರ್ಹರು ಎಂಬುದು ಸ್ಪಷ್ಟವಾಗಲಿದ್ದು, ನಿಯಮಗಳ ಪ್ರಕಾರ ಅನರ್ಹರಾಗಿರುವ ನೌಕರರು ತಕ್ಷಣವೇ ರೇಷನ್ ಕಾರ್ಡ್ ಒಪ್ಪಿಸುವಂತೆ ಸಲಹೆ ನೀಡಲಾಗಿದೆ.

























































































































error: Content is protected !!
Scroll to Top