‘ಕರಾವಳಿ ಹೈಕೋರ್ಟ್‌ ಪೀಠಕ್ಕೆ ಹೋರಾಟ’ ಕಾರ್ಕಳದಲ್ಲಿ ಹಕ್ಕೊತ್ತಾಯ ಸಭೆ

ಕಾರ್ಕಳ: ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಕಾರ್ಕಳ, ತಾಲೂಕು ವಕೀಲರ ಸಂಘ ಕಾರ್ಕಳ ಸಹಯೋಗದಲ್ಲಿ ‘ಕರಾವಳಿ ಹೈಕೋರ್ಟ್‌ ಪೀಠ ಹೋರಾಟಕ್ಕೆ ನಿಮ್ಮ ಕೈಜೋಡಿಸಿ’ ಕಾರ್ಕಳ ತಾಲೂಕು ವಿವಿಧ ಸಂಘ ಸಂಸ್ಥೆಗಳ ಹಕ್ಕೊತ್ತಾಯ ಸಭೆ ಹೋಟೆಲ್ ಪ್ರಕಾಶ್ ಸಭಾಂಗಣ, ಅನಂತಶಯನ ಬಳಿ ಕಾರ್ಕಳದಲ್ಲಿ ಇಂದು ನಡೆಯಿತು.

ಈ ಸಭೆಯಲ್ಲಿ ಪ್ರೇಮ್ ಪ್ರಸಾದ್ ಶೆಟ್ಟಿ (ವಕೀಲರು ಹೈಕೋರ್ಟ್) ರವರು ಮಾತನಾಡಿ, ಕಳೆದ ಎರಡು ದಶಕಗಳಿಂದ ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆಯ ಕೂಗು ಕೇಳಿ ಬರುತ್ತಲೇ ಇದೆ.ಕಳೆದ ಆಗಸ್ಟ್ ತಿಂಗಳಿನಿಂದ ಉಡುಪಿ, ಕುಂದಾಪುರ, ಬೈಂದೂರು, ಬ್ರಹ್ಮಾವರದಲ್ಲಿ ಈಗಾಗಲೇ ಹಕ್ಕೊತ್ತಾಯ ಸಭೆ ನಡೆಸಿದ್ದೇವೆ. ಸೆಪ್ಟಂಬರ್ 29 ರಂದು ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆಯ ಪರಿಶೀಲನೆ ಮಾಡುವ ಬಗ್ಗೆ ತ್ರಿಸದಸ್ಯ ಪೀಠ ಸ್ಥಾಪಿಸಿದ್ದಾರೆ. ಇದು ನಮಗೆ ಸಿಕ್ಕಿದ ಮೊದಲ ಜಯ ಎಂದು ಹೇಳಿದರು.

ಉತ್ತರ ಕರ್ನಾಟಕದ ಧಾರವಾಡದಲ್ಲಿ, ಹೈದರಾಬಾದ್ ಕರ್ನಾಟಕದ ಕಲುಬುರ್ಗಿಯಲ್ಲಿ ಹೈ ಕೋರ್ಟ್ ಪೀಠ ಕಾರ್ಯಾಚರಿಸುತ್ತಿದೆ. ಇದು ವಕೀಲರ ಸಮಸ್ಯೆ ಇರಬಹುದು ಎಂಬ ಭಾವನೆ ಕೆಲವರಲ್ಲಿದೆ. ಆದರೆ ಇದು ಜನಸಾಮಾನ್ಯರ ಸಮಸ್ಯೆಯೇ ಹೊರತು ವಕೀಲರದ್ದಲ್ಲ. ಸಂವಿಧಾನದ ವಿಧಿ 14 ಹಾಗೂ 21 ರಲ್ಲಿ ಕಟ್ಟಕಡೆಯ ಪ್ರಜೆಗೂ ನ್ಯಾಯ ತ್ವರಿತವಾಗಿ ಅಗ್ಗವಾಗಿ ಸಿಗಬೇಕೆಂಬ ಆಶಯ ವ್ಯಕ್ತಪಡಿಸಿದೆ. ಕರ್ನಾಟಕದ ಎರಡನೇ ಹೆಚ್ಚಿನ ತೆರಿಗೆ ನೀಡುವ ಜಿಲ್ಲೆಗಳು ಕರಾವಳಿ ಜಿಲ್ಲೆಗಳು. ನಮಗೆ ನ್ಯಾಯ ಸಿಗಬೇಕಾದರೆ ಹೈಕೋರ್ಟ್ ಗೆ ತೆರಳಲು 900 ರಿಂದ 1000 ಕಿ.ಮೀ ಪ್ರಯಾಣಿಸ ಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಜಸ್ವಂತ್ ಸಿಂಗ್ ಕಮಿಟಿಯ ವರದಿಯ ಮೇರೆಗೆ ಬಹುತೇಕ ಸಂಚಾರಿ ಪೀಠ ಸ್ಥಾಪನೆಯಾಗಿರುವಂತದ್ದು. ಭೌಗೋಳಿಕ ವಾಗಿ ದೂರದಲ್ಲಿದ್ದರೆ,ಮೂಲ ಭೂತ ಸೌಕರ್ಯಗಳು ಹೊಂದಿದ್ದರೆ, ವೃತ್ತಿ ನಡೆಸಲು ಉತ್ತಮ ವಕೀಲರ ತಂಡ ಇದ್ದರೆ, ಸಾಕಷ್ಟು ಪ್ರಕರಣಗಳ ಸಂಖ್ಯೆ ಇದ್ದರೆ ಸಂಚಾರಿ ಪೀಠ ನೀಡ ಬಹುದು ಎಂದು ಈ ಕಮಿಟಿ ಹೇಳಿದೆ. ಆಯಾಯ ರಾಜ್ಯದ ಮುಖ್ಯ ನ್ಯಾಯಾಧೀಶರು ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಕಮಿಟಿ ಹೇಳಿದೆ. ಈಗಾಗಲೇ ರಾಜ್ಯದ ಮುಖ್ಯ ನ್ಯಾಯಾಧೀಶರು ಈ ಬಗ್ಗೆ ತ್ರಿಸದಸ್ಯ ಪೀಠ ರಚನೆ ಮಾಡಿದೆ. ಈಗಿರುವ ಪ್ರಕರಣದ ಇತ್ಯರ್ಥಕ್ಕೆ ಮುನ್ನೂರು ವರ್ಷ ಬೇಕಾಗಬಹುದು ಎಂಬ ಆತಂಕಕಾರಿ ಮಾಹಿತಿ‌ ನೀತಿ ಆಯೋಗ ಹೇಳಿದೆ. ವಿಳಂಬ ತಪ್ಪಿಸಲು ಕಾನೂನಿನ ತಿದ್ದುಪಡಿ, ನ್ಯಾಯಾಲಯ ಪೀಠ ಸ್ಥಾಪಿಸುವ ಬಗ್ಗೆ ಸೂಚನೆ ನೀಡಿದೆ ಎಂದರು.

ಕರಾವಳಿ ಜಿಲ್ಲೆಯಲ್ಲಿ 2025 ರಲ್ಲಿ 3500 ಪ್ರಕರಣ ದಾಖಲಾಗಿದೆ. 2024 ಕ್ಕೆ ಹೋಲಿಸಿದರೆ 10% ಪ್ರಕರಣ ದಾಖಲಾಗಿದೆ. ಅತೀ ವೇಗದಲ್ಲಿ ಬೆಳೆಯುವ ಜಿಲ್ಲೆಗಳಲ್ಲಿ ನಮ್ಮ ಅವಿಭಜಿತ ದ.ಕ ಜಿಲ್ಲೆಗಳೂ ಸೇರಿದೆ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಹೈಕೋರ್ಟ್ ಪೀಠ ಸ್ಥಾಪನೆ ಬಗ್ಗೆ ಕಂದಾಯ ಇಲಾಖೆಯಿಂದ ಜಾಗ ಒದಗಿಸುವಂತೆ ನಮ್ಮ ತಂಡ ಮನವಿ ಮಾಡಿದೆ. ಸಾಂವಿಧಾನಿಕ ಹಕ್ಕು ಉಲ್ಲಂಘನೆ ಆದಲ್ಲಿ ಹೈಕೋರ್ಟ್ ನಲ್ಲಿ ಸಾಮಾನ್ಯ ನಾಗರಿಕ ರಿಟ್ ಅರ್ಜಿ ಸಲ್ಲಿಸಬಹುದು. ರಿಟ್ ಅರ್ಜಿ ಸಲ್ಲಿಸುವ ಮೂಲಕ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಬಹುದು. ಕರಾವಳಿಯಲ್ಲಿ ವಿಶಿಷ್ಟ ಕಾನೂನು ಇದೆ. ಸಿ ಆರ್ ಝಡ್ ಪ್ರದೇಶ, ಅಳಿಯ ಸಂತಾನ, ಮೆರೈನ್ ಆಕ್ಟ್, ಭೂ ನ್ಯಾಯ ಮಂಡಳಿ ಬಗ್ಗೆ ಇರುವ ಪ್ರಕರಣದ ಬಗ್ಗೆ ಸ್ಥಳೀಯ ನ್ಯಾಯವಾದಿಗಳು ವಿಶೇಷ ರೀತಿಯಲ್ಲಿ ವಾದ ಮಂಡಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯು-ಆಕ್ಟ್ ಸಂಸ್ಥೆಯ ಮುಖ್ಯಸ್ಥರಾದ ಪ್ರೇಮ್ ಪ್ರಸಾದ್ ಶೆಟ್ಟಿ , ಉಡುಪಿ (ವಕೀಲರು ಹೈ ಕೋರ್ಟ್), ಹರೀಶ್ ಅಧಿಕಾರಿ (ಉಪಾಧ್ಯಕ್ಷರು ಕಾರ್ಕಳ ವಕೀಲರ ಸಂಘ), ಪದ್ಮಪ್ರಸಾದ್ ಜೈನ್ (ಕಾರ್ಯದರ್ಶಿ ಕಾರ್ಕಳ ತಾಲೂಕು ವಕೀಲರ ಸಂಘ), ಮುನಿಯಾಲು ಉದಯ್ ಕುಮಾರ್ ಶೆಟ್ಟಿ (ಮುಖಂಡರು ಕಾರ್ಕಳ ಕಾಂಗ್ರೆಸ್), ಶುಭಧ ರಾವ್ (ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಕಾರ್ಕಳ), ರವೀಂದ್ರ ಮೊಯ್ಲಿ (ವಕೀಲರು ಹಾಗೂ ಬಿಜೆಪಿ ವಕ್ತಾರರು ಕಾರ್ಕಳ), ನವೀನ್ ನಾಯಕ್ (ಕ್ಷೇತ್ರಾಧ್ಯಕ್ಷರು ಕಾರ್ಕಳ ಬಿಜೆಪಿ), ಪ್ರಸನ್ನ ಶೆಟ್ಟಿ (ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ), ರವೀಂದ್ರ ಶೆಟ್ಟಿ (ಅಧ್ಯಕ್ಷರು ರಾಜ್ಯ ಕ್ರಷರ್ ಹಾಗೂ ಕಲ್ಲು ಕೋರೆ ಮಾಲಕರ ಸಂಘ) ಮೊದಲಾದವರು ಉಪಸ್ಥಿತರಿದ್ದರು.

























































































































error: Content is protected !!
Scroll to Top