ಎಂ. ಡಿ. ಅಧಿಕಾರಿ ಹಾಗೂ ಅವರ ಪತ್ನಿ ಕಮಲಾದೇವಿ ಸ್ವಾತಂತ್ಯ್ಯ ಹೋರಾಟಗಾರರಾಗಿ ಮುಂಚೂಣಿಯಲ್ಲಿ ಗುರುತಿಸಿಕೊಂಡವರು. ಇವರು ಕಾರ್ಕಳದ ವರಂಗ ಗ್ರಾಮದವರು.
ಹೊಸ ಕನ್ನಡದ ಮುಂಗೋಳಿ ಎಂದು ಪ್ರಸಿದ್ಧರಾದ ಕನ್ನಡ ಸಾಹಿತ್ಯ ಲೋಕದ ಮಹಾಕವಿ ಬಿರುದಾಂಕಿತ ಕವಿ ಮುದ್ದಣ (1870-1901) ಕಾರ್ಕಳ ತಾಲೂಕಿನ ನಂದಳಿಕೆಯವರು. ಲಕ್ಷ್ಮೀನಾರಣಪ್ಪ ಅವರ ಮೂಲ ಹೆಸರು. ಅನಾರೋಗ್ಯ, ಬಡತನದಿಂದ ಬಳಲಿದ್ದ ಮುದ್ದಣ ತನ್ನ 31ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಮುದ್ದಣ ತನ್ನ ಅಲ್ಪ ಜೀವಿತಾವಧಿಯಲ್ಲೇ ಅದ್ಭುತ ರಾಮಾಯಣ, ರತ್ನಾವತಿ ಕಲ್ಯಾಣ ಮೊದಲಾದ ಮಹಾ ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ಸಲ್ಲಿಸಿದ್ದರು.
ಉದಯ#ಪೂಜಾರಿ1999ರ ಕಾರ್ಗಿಲ್ ಯುದ್ಧದ ಬಳಿಕ ಗಡಿರಕ್ಷಣೆಯಲ್ಲಿ ನಿರತರಾಗಿದ್ದ ಹೆಬ್ರಿ ತಾಲೂಕಿನ ಸೋಮೇಶ್ವರ ದುಳ್ಳಿಯ ಉದಯ ಪೂಜಾರಿ ಉಗ್ರರ ಪೈಶಾಚಿಕ ಕೃತ್ಯಕ್ಕೆ ಬಲಿಯಾದರು. ಇವರ ಬಲಿದಾನ ಭಾರತ ಮಾತೆಯ ಪಾದಕ್ಕೆ ಅರ್ಪಣೆಯಾಗುತ್ತಿದ್ದಂತೆ ಹೆಬ್ರಿ ತಾಲೂಕು ವೀರಯೋಧನ ಊರು ಎಂಬ ಮನ್ನಣೆಗೆ ಪಾತ್ರವಾಯಿತು.
#ಹಲವಾರು#ಸಾಹಿತಿಗಳ#ತವರೂರು. ಭೈರವರಸರ ಆಸ್ಥಾನ ಕವಿಗಳಾಗಿದ್ದು, ಲೋಕಪ್ರಸಿದ್ಧರಾದ ಮಹಾಕವಿ ರತ್ನಾಕರವರ್ಣಿ ಮತ್ತು ಚದುರ ಚಂದ್ರಮ ಇಲ್ಲಿನವರು. ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೆ.ಬಿ. ಜಿನರಾಜ ಹೆಗ್ಡೆ ಕಾಂತಾವರದವರು. ಅಂಬಾತನಯ ಮುದ್ರಾಡಿ ಹೆಬ್ರಿಯ ಮುದ್ರಾಡಿಯವರು. ಕಾಂತಾವರದಲ್ಲಿ ನೆಲೆಸಿ ಕನ್ನಡ ಭವನ ಕಟ್ಟಿ , ಅಲ್ಲಮ ಪೀಠವನ್ನು ಸ್ಥಾಪಿಸಿರುವ, ಹಲವಾರು ದಶಕಗಳಿಂದ ಕನ್ನಡ ಸೇವೆಗೈಯುತ್ತಿರುವ ಡಾ| ನಾ. ಮೊಗಸಾಲೆ, ಕನ್ನಡ ಸಾಹಿತ್ಯ ಸಂಘ ಸ್ಥಾಪಿಸಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಸಾಹಿತ್ಯ ಚಟುವಟಿಕೆ ನಡೆಸಿಕೊಂಡು ಬಂದಿದ್ದ ಪ್ರೊ| ಎಂ. ರಾಮಚಂದ್ರ ಕಾರ್ಕಳದವರು. ಕನ್ನಡ ಸೇವೆಯ ಕೈಂಕರ್ಯದಲ್ಲಿ ಇವರೊಂದಿಗೆ ಹಲವಾರು ಮಂದಿ ಕೈಜೋಡಿಸಿಕೊಂಡಿರುತ್ತಾರೆ.
#ಉನ್ನತ#ಸ್ಥಾನ#ಅಲಂಕರಿಸಿದ#ಕಾರ್ಕಳದವರು
ಪ್ರತಿಯೊಂದು ಕ್ಷೇತ್ರದಲ್ಲೂ ಕಾರ್ಕಳದವರ ಛಾಪು ಇದ್ದೇ ಇದೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗಿದ ಕಾರ್ಕಳ, ಹೆಬ್ರಿಯ ಅನೇಕರಿದ್ದಾರೆ. ಅವರಲ್ಲಿ ಪ್ರಮುಖರ ಹೆಸರು ಉಲ್ಲೇಖಿಸುವುದಾದರೆ, ಸುಪ್ರಿಂ ಕೋರ್ಟ್‌ನ ನ್ಯಾಯಾಧೀಶ ಹಾಗೂ ಲೋಕಸಭೆ ಸ್ಪೀಕರ್ ಆಗಿದ್ದ ಜಸ್ಟಿಸ್ ಕೆ.ಎಸ್. ಹೆಗ್ಡೆ ಹಾಗೂ ಅವರ ಮಗ ಲೋಕಾಯುಕ್ತರಾಗಿದ್ದ ಜಸ್ಟಿಸ್ ಸಂತೋಷ್ ಹೆಗ್ಡೆ ಕಾರ್ಕಳದ ಕೌಡೂರಿನವರು. ಸಂತೋಷ್ ಹೆಗ್ಡೆಯವರ ಅಣ್ಣ ವಿನಯ ಹೆಗ್ಡೆ ರಾಜ್ಯದ ವಿವಿಧೆಡೆ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ನಿಟ್ಟೆಯ ಹೆಸರು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದವರು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಾ| ಎಂ. ವೀರಪ್ಪ ಮೊಲಿ 6 ಬಾರಿ ಕಾರ್ಕಳ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸಿದವರು. ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ರತ್ನಪ್ರಭಾ(ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆಗೇರಿದ 3ನೇ ಮಹಿಳೆ) ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಅವರ ನಿಕಟವರ್ತಿ, ನಿವೃತ್ತ ಇಸ್ರೋ ವಿಜ್ಞಾನಿ ಇಡ್ಯ ಜನಾರ್ದನ್ ಹಾಗೂ ಅವರ ತಮ್ಮ ನಿವೃತ್ತ ಇಸ್ರೋ ವಿಜ್ಞಾನಿ ಇಡ್ಯ ವಸಂತ್, ಪ್ರಸ್ತುತ ಇಸ್ರೋದಲ್ಲಿರುವ ವೈ. ದೇವದಾಸ್ ಶೆಣೈ ಕಾರ್ಕಳದವರು. ಏರ್‌ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಹಾಗೂ ಅವರ ಸಹೋದರ ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಮಾಜಿ ಸಚೇತಕ ಕೆ.ಎಸ್. ಮಹಮ್ಮದ್ ಮಸೂದ್, ಪ್ರಸ್ತುತ ಸರಕಾರದ ಮುಖ್ಯ ಸಚೇತಕರಾಗಿರುವ ವಿ. ಸುನಿಲ್ ಕುಮಾರ್, ಪಕ್ಷಿ ತಜ್ಞ ಎಸ್.ಎ. ಹುಸೇನ್ ಕಾರ್ಕಳದವರು. ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಮಮತಾ ಪೂಜಾರಿ ಹೆರ್ಮುಂಡೆಯವರು. ಪ್ರೊ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ ಕುಕ್ಕುಜೆಯವರು, ಎನ್ ಕೌಂಟರ್ ಸ್ಪೇಷಲಿಸ್ಟ್ ದಯಾನಾಯಕ್ ಎಣ್ಣೆಹೊಳೆಯವರು. ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್, ಪ್ರಸ್ತುತ ಕಾರವಾರ ಡಿಸಿಯಾಗಿರುವ ಹೆರ್ಮುಂಡೆಯ ಹರೀಶ್ ಕುಮಾರ್, ಪ್ರಸ್ತುತ ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಇದೇ ತಾಲೂಕಿನವರು. ಎಸ್‌ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಡಾ| ಎಂ.ಎನ್. ರಾಜೇಂದ್ರ ಕುಮಾರ್ ವರಂಗ ಗ್ರಾಮದವರು. ಹೊಟೇಲ್ ಕಾರ್ಮಿಕನಾಗಿ ಸೇರಿ 150 ಹೊಟೇಲ್ ಮಾಲಿಕರಾದ ಜಯರಾಂ ಬನಾನ್ ಕಾರ್ಕಳದ ಜೋಡುಕಟ್ಟೆಯವರು. ರಾಷ್ಟ್ರಪತಿಗೆ ಸಲಹೆಗಾರರಾಗಿದ್ದ ಡಾ| ಎಂ. ಗೋಪಾಲ ಮುಗೆರಾಯ, ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಅವರಿಗೆ ಸಲಹೆಗಾರರಾಗಿದ್ದ ರಾಂ ಮೋಹನ್ ರಾವ್ ಇದೇ ತಾಲೂಕಿನವರು ಎನ್ನುವುದು ಹೆಮ್ಮೆಯ ವಿಚಾರ. ಮಾಧ್ಯಮ ಕ್ಷೇತ್ರದ ಸಾಧಕ ಮನೋಹರ್ ಪ್ರಸಾದ್, ತರಂಗದ ಕಾರ್ಯನಿರ್ವಾಹಕ ಸಂಪಾದಕಿ ಡಾ.ಯು.ಬಿ. ರಾಜಲಕ್ಷ್ಮೀ, ಭಾರತ ಕ್ರಿಕೆಟ್ ತಂಡದ ಆಟಗಾರರಾಗಿದ್ದ ನಾರಾಯಣ ಪೈ ಕಾರ್ಕಳದವರು. ಪ್ರಸ್ತುತ ಭಾರತ ತಂಡದ ಕೋಚ್ ಆಗಿರುವ ರವಿಶಾಸ್ತ್ರಿಗೂ ಕಾರ್ಕಳದ ನಂಟಿದೆ. ಬಾಲಿವುಡ್ ಬೆಡಗಿ ಶಿಲ್ಪಾಶೆಟ್ಟಿ ಮೂಲತಃ ಕೌಡೂರಿನವರು. ಬಾಲಿವುಡ್ ನಿರ್ದೇಶಕ ಯಜ್ಞೇಶ್ ಶೆಟ್ಟಿ ನಿಂಜೂರಿನವರು. ಇವರಲ್ಲದೇ ಅದೆಷ್ಟೋ ಸಾಧಕರು ಕಾರ್ಕಳದಲ್ಲಿದ್ದಾರೆ. ಸಾಧ್ಯವಾದಷ್ಟು, ಗೊತ್ತಾದ ಹೆಸರನ್ನು ಮಾತ್ರ ಉಲ್ಲೇಖಿಸಿರುತ್ತೇವೆ. ಹೆಸರು ನಮೂದಿಸುವಲ್ಲಿ ಮರೆತಲ್ಲಿ ಕ್ಷಮೆ ಇರಲಿ.