ನಲ್ಮೆಯ ಓದುಗರೇ,
ಕಾರ್ಕಳಕ್ಕೊಂದು ನಿಷ್ಪಕ್ಷಪಾತ, ಜನಾನುರಾಗಿ, ಸಶಕ್ತ ಮತ್ತು ಸಮಾಜದ ಓರೆಕೋರೆಗಳನ್ನು ತಿದ್ದಿ ತೀಡುವ, ವಾಸ್ತವ ವಿಚಾರವನ್ನು ಹಾಗೆಯೇ ಸಮಾಜದ ಮುಂದಿಡುವ ಮಾಧ್ಯಮದ ಅವಶ್ಯಕತೆಯನ್ನು ಮನಗಂಡು ಕ್ರಿಯಾಶೀಲತೆಯ ಕುರುಹಾಗಿ newskarkala.com ಎಂಬ ವೆಬ್ ನ್ಯೂಸ್ ತಾಣವನ್ನು ವಿನ್ಯಾಸಗೊಳಿಸಿದ್ದೇವೆ. ಒಂದು ಹೊಸಚಿಂತನೆ, ನೂತನ ಪ್ರಯೋಗ, ವಿನೂತನ ಕಾರ್ಯಶೈಲಿಯೊಂದಿಗೆ ನಿಮ್ಮ ಮುಂದೆ ಬರುತ್ತಿದ್ದು, ತಾಲೂಕಿನ ಸುದ್ದಿಗಳನ್ನು ಸಮಗ್ರವಾಗಿ ಮತ್ತು ಕ್ಷಿಪ್ರವಾಗಿ ತಲುಪಿಸುವ ಕಾರ್ಯವನ್ನು ಮಾಡಲಿದ್ದೇವೆ. ಇವುಗಳ ಜತೆಗೆ ದೇಶ, ವಿದೇಶದ ಮಹತ್ವದ ವಿದ್ಯಮಾನಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ಇದರೊಂದಿಗೆ ನಮ್ಮ ಕಾರ್ಕಳದ ಸಂಸ್ಕೃತಿಯ ಭವ್ಯತೆ, ನಮ್ಮೂರಿನ ಅರಳು ಪ್ರತಿಭೆಗಳ ಪರಿಚಯವನ್ನೂ ಮಾಡಿಕೊಡುತ್ತ, ಓದುಗರ ಅಪೇಕ್ಷೆಗೆ ತಕ್ಕಂತೆ ವಸ್ತುನಿಷ್ಠ ವರದಿಯೊಂದಿಗೆ ಪ್ರಚಲಿತ ವಿದ್ಯಮಾನಗಳ ಕುರಿತು ಬೆಳಕು ಹರಿಸಲಿದ್ದೇವೆ.
‘ಜನತೆಯ ನಾಡಿಮಿಡಿತ’ ಎಂಬ ಧ್ಯೇಯದೊಂದಿಗೆ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಪ್ರತಿ ಗ್ರಾಮಗಳ ಸಮಗ್ರ ಸುದ್ದಿಗಳನ್ನು ವಿಶ್ವಾಸಾರ್ಹತೆ, ವಸ್ತುನಿಷ್ಠತೆ, ನಿಖರತೆಯೊಂದಿಗೆ ಪಸರಿಸಲಿದ್ದೇವೆ. ದೇಶ -ವಿದೇಶಗಳಲ್ಲಿ ನೆಲೆಸಿರುವ ಕಾರ್ಕಳದ ಬಂಧುಗಳಿಗೂ ತಮ್ಮೂರಿನ ವಿದ್ಯಮಾನಗಳ ಮಾಹಿತಿಯನ್ನು ನೀಡುತ್ತ, ಊರಿನ ನೆನಪನ್ನು ಸದಾ ಹಸಿರಾಗಿಡಲು ಪ್ರಯತ್ನಿಸುತ್ತೇವೆ. ನಮ್ಮ ನ್ಯೂಸ್ ತಾಣ ಜನ-ಮನ ಬೆಸೆಯುವ ವೈವಿಧ್ಯಮಯ ಸುದ್ದಿ ಜಾಲವಾಗಿಯೂ ಮೂಡಿಬರಲಿದೆ. ಮಾತ್ರವಲ್ಲದೇ ತಾಲೂಕಿಗೆ ಸಂಬಂಧಿಸಿದಂತೆ ಅಗತ್ಯ, ಉಪಯುಕ್ತ ಮಾಹಿತಿ, ವಿವಿಧ ಇಲಾಖೆ, ಜನಪ್ರತಿನಿಧಿಗಳ ಸಂಪರ್ಕ ಸಂಖ್ಯೆಯನ್ನು ವೆಬ್ ತಾಣದಲ್ಲಿ ಅಳವಡಿಸುವ ಮೂಲಕ ಎಲ್ಲರನ್ನೂ ಬೆಸೆಯುವ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ.
ಡಿಜಿಟಲ್ ಯುಗ
ಪ್ರಸ್ತುತ ನಾವು ಡಿಜಿಟಲ್ ಯುಗದಲ್ಲಿದ್ದೇವೆ. ಪ್ರತಿಯೊಂದು ಕ್ಷೇತ್ರವೂ ಆಧುನಿಕ ತಂತ್ರಜ್ಞಾನ, ತಂತ್ರಾಂಶಗಳ ಮೂಲಕ ವೇಗವಾಗಿ ಬದಲಾಗುತ್ತಿದೆ. ಮಾಧ್ಯಮ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಮೊಬೈಲ್‌ನಲ್ಲೇ ಪ್ರತಿಯೊಂದು ಮಾಹಿತಿ, ವರ್ತಮಾನ ಪಡೆಯುವಂತಾದ ಬಳಿಕ ಯುವ ಜನಾಂಗ ಸೇರಿದಂತೆ ಎಲ್ಲ ವಯೋಮಾನದ ಓದುಗರೂ ವೆಬ್ ತಾಣಗಳತ್ತ ಆಕರ್ಷಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ಪುಟ್ಟ ಹೆಜ್ಜೆಯಿಡುತ್ತಿದ್ದೇವೆ.
ಮಾಹಿತಿನೀಡಿ
ನಮ್ಮ ಸುದ್ದಿ ಜಾಲಕ್ಕೆ ಓದುಗರೇ ಬಲ. ನಿಮ್ಮೂರಿನಲ್ಲಿ ಜರಗುವ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಇತ್ಯಾದಿಗಳ ಕುರಿತಾಗಿಯೂ ಸಚಿತ್ರವಾಗಿ ಬರೆದು ಕಳುಹಿಸಿದಲ್ಲಿ, ನಾವು ಅದನ್ನು ಹತ್ತೂರಿಗೆ ಬಿತ್ತರಿಸುವ ಕೆಲಸ ಮಾಡಲಿದ್ದೇವೆ. ನಿಮ್ಮೂರಿನ ಸಮಸ್ಯೆಗಳಿಗೂ ನಾವು ಧ್ವನಿಯಾಗುತ್ತೇವೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆದು ಅವುಗಳ ಪರಿಹಾರಕ್ಕೂ ಪ್ರಾಮಾಣಿಕವಾಗಿ ಪ್ರಯತ್ನಿಸಲಿದ್ದೇವೆ. ಉಭಯ ತಾಲೂಕುಗಳ ನಾಡಿಮಿಡಿತಕ್ಕೆ ನಮ್ಮ ವೆಬ್ ತಾಣ ಸದಾ ಸ್ಪಂದಿಸಲಿದೆ. ಜಾಲ ನಮ್ಮದಾದರೂ ಅದಕ್ಕೆ ಬಲ ನೀವೇ ಆಗಿರುತ್ತೀರಿ.
ಇ-ಪೇಪರ್
ಕ್ಷಣಕ್ಷಣದ ಸುದ್ದಿಗಳನ್ನು ವೆಬ್ ತಾಣದಲ್ಲಿ ಪ್ರಕಟಿಸುವುದರೊಂದಿಗೆ ಕಾರ್ಕಳದ ಇಡೀ ದಿನದ ಪ್ರಮುಖ ಸುದ್ದಿಗಳನ್ನು ಸಂಜೆ 7 ಗಂಟೆಗೆ ಇ-ಪೇಪರ್ ಮೂಲಕ ಪ್ರಕಟಿಸಲಿದ್ದೇವೆ. ಓದುಗರು ತಮಗೆ ಬೇಕಾದ ಸುದ್ದಿಯನ್ನು ಚಿತ್ರರೂಪದಲ್ಲಿ ಡೌನ್‌ಲೋಡ್ ಮಾಡಿಕೊಂಡು ತಮ್ಮ ಸ್ನೇಹಿತರು, ಬಂಧುಗಳ ವೀಕ್ಷಣೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಿದ್ದೇವೆ.
ಬೆಂಬಲವಿರಲಿ
ಕಾರ್ಕಳದ ಸಮಗ್ರ ಸುದ್ದಿ ನೀಡುವ ನಮ್ಮ ಆಶಯಕ್ಕೆ ತಮ್ಮೆಲ್ಲರ ಬೆಂಬಲ ಯಾಚಿಸುತ್ತೇವೆ. ಯಾವುದೇ ಮಾಧ್ಯಮವೂ ಯಶಸ್ಸು ಕಾಣುವಂತಾಗಲು ಜಾಹೀರಾತು ಅತೀ ಮುಖ್ಯ. ಮದುವೆ, ಮದುವೆ ವಾರ್ಷಿಕೋತ್ಸವ, ಜನ್ಮದಿನ, ಶಾಲಾ-ಕಾಲೇಜು ಹಾಗೂ ಸಂಘ-ಸಂಸ್ಥೆಗಳ ವಾರ್ಷಿಕೋತ್ಸವ, ಸಾಧಕರಿಗೆ ಅಭಿನಂದನೆ, ಶಿಲಾನ್ಯಾಸ, ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದ ಜಾಹೀರಾತು, ಶ್ರದ್ಧಾಂಜಲಿ ಜಾಹೀರಾತು ನಮ್ಮ ವೆಬ್ ಸೈಟ್ ಗೆ ನೀಡುವ ಮೂಲಕ ವೆಬ್ ತಾಣ ಬೆಳೆಸಿ, ಬೆನ್ನೆಲುಬಾಗಿ ನಿಲ್ಲುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಓದುಗರ ಸಲಹೆ, ಅಭಿಪ್ರಾಯಗಳಿಗೆ ಸದಾ ಸ್ವಾಗತ.
ನ್ಯೂಸ್ ಕಾರ್ಕಳ ಟೀಮ್
ನ್ಯೂಸ್ ಕಳುಹಿಸಲು ಇ –ಮೇಲ್ ಐಡಿ
nk.newskarkala@gmail.com
ವಾಟ್ಸಪ್ ನಂಬರ್: 6363666197
ನಮ್ಮವಿಳಾಸ:
ನ್ಯೂಸ್ ಕಾರ್ಕಳ ಕಚೇರಿ
ಎರಡನೇ ಮಹಡಿ
ಹೊಟೇಲ್ ಜೈನ್ ಕಟ್ಟಡ
ಸರ್ವಜ್ಞ ವೃತ್ತ, ಕಾರ್ಕಳ-574104
Address
News Karkala
Second Floor
Hotel Jain Building
Sarvajna circle
Karkala – 574104
E-mail – nk.newskarkala@gmail.com
WhatsApp: 6363666197
