LATEST ARTICLES

ಕುಲಾಲ ಕ್ರೀಡಾಕೂಟ – 2022ರ ಉದ್ಘಾಟನಾ ಕಾರ್ಯಕ್ರಮ

ಕಾರ್ಕಳ : ಕುಲಾಲ ಸಂಘ ನಾನಿಲ್ತಾರ್‌ ಇದರ ಯುವ ವೇದಿಕೆಯ ಆಶ್ರಯದಲ್ಲಿ ಡಿ. 4 ರಂದು ಸಂಘದ ಸ್ಥಾಪಕಾಧ್ಯಕ್ಷ ದಿ. ಸುಂದರ ಮೂಲ್ಯ ಕ್ರೀಡಾಂಗಣದಲ್ಲಿ ಕುಲಾಲ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ನ್ಯಾಯವ್ಯಾದಿ ಕುತ್ಯಾರು ಜಗದೀಶ್‌ ಮೂಲ್ಯ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಕುಶ ಆರ್.‌ ಮೂಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಲವ ಆರ್.‌ ಮೂಲ್ಯ, ಸದಾನಂದ ಮೂಲ್ಯ, ಸಂಘದ ಉಪಾಧ್ಯಕ್ಷ ಬೊಗ್ಗು ಮೂಲ್ಯ ಬೇಲಾಡಿ, ಮಾಜಿ ಅಧ್ಯಕ್ಷ ಮಂಜಪ್ಪ ಮೂಲ್ಯ, ಯುವ ವೇದಿಕೆ ಅಧ್ಯಕ್ಷ ದೀಪಕ್‌ ಬೆಳ್ಮಣ್‌, ಕಾರ್ಯದರ್ಶಿ ಸಂತೋಷ್‌, ಉಪಾದ್ಯಕ್ಷ ಗಿರೀಶ್‌ ಬೆಳ್ಮಣ್, ಜಯರಾಮ್‌ ಕುಲಾಲ್, ಗುತ್ತಿಗೆದಾರ ಬೊಗ್ಗು ಮೂಲ್ಯ ಬೆಳ್ಮಣ್‌, ಮಹಿಳಾ ಘಟಕದ ಅಧ್ಯಕ್ಷೆ ಪ್ರತಿಮಾ, ಬಿ. ವಾರಿಜ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ದಿನೇಶ್‌ ಕುಲಾಲ್‌ ಸ್ವಾಗತಿಸಿದರು. ಆಶಾ ವರದರಾಜ್‌ ಹಾಗೂ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಕಾಂತ್‌ ಕುಲಾಲ್‌ ವಂದಿಸಿದರು.

ಚಿನ್ನ ಬೆಳ್ಳಿ ಕೆಲಸಗಾರರ ಸಂಘ : ಅಭಾ ಕಾರ್ಡ್‌ ಹಾಗೂ ಅಂಚೆ ಇಲಾಖೆಯ ಅಪಘಾತ ವಿಮೆ ಮಾಹಿತಿ ಶಿಬಿರ

ಕಾರ್ಕಳ : ಡಿ. 4 ರಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರಿಗೆ ಅಭಾ ಕಾರ್ಡ್‌ ಹಾಗೂ ಅಂಚೆ ಇಲಾಖೆಯ ಅಪಘಾತ ವಿಮೆ ಮಾಹಿತಿ ಶಿಬಿರ ನಡೆಯಿತು. ಕಾರ್ಕಳ ಸರಕಾರಿ ಆಸ್ಪತ್ರೆ ವೈದ್ಯ ಡಾ. ಆನಂತ ಕಾಮತ್‌ ಮಾತನಾಡಿ, ಅಭಾ ಕಾರ್ಡ್‌ ಬಗ್ಗೆ ಮಾಹಿತಿ ನೀಡಿದರು ಮತ್ತು ಜನರ ಜೀವನ ಶೈಲಿಯು ಆರೋಗ್ಯದ ಮೇಲೆ ಬೀರುವ ಪ್ರಭಾವ ಹಾಗೂ ಸಾಂಕ್ರಾಮಿಕ ರೋಗ, ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಕುರಿತಾಗಿ ಜಾಗೃತಿ ಮೂಡಿಸಿದರು. ಕಾರ್ಕಳ ಅಂಚೆ ಇಲಾಖೆಯ ಮಾರ್ಕೆಟಿಂಗ್‌ ಎಕ್ಸಿಕ್ಯುಟಿವ್‌ ಗುರುಪ್ರಸಾದ್‌, ಅಂಚೆ ಇಲಾಖೆಯ ಸೌಲಭ್ಯಗಳಾದ ಉಳಿತಾಯ ಯೋಜನೆ, ಸುಕನ್ಯ ಸಮೃದ್ಧಿ, ಪ್ರಧಾನಮಂತ್ರಿ ಸುರಕ್ಷ ಯೋಜನೆ ಹಾಗೂ ನೂತನವಾಗಿ ಜಾರಿಗೆ ಬಂದಿರುವ ಅಪಘಾತ ವಿಮೆಯ ಕುರಿತಾಗಿ ಮಾಹಿತಿ ನೀಡಿದರು.

ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಎಂ. ರಮೇಶ್‌ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪ್ರಧಾನ ಅಂಚೆ ಕಚೇರಿ ಪೋಸ್ಟ್‌ ಮಾಸ್ಟರ್‌ ಪ್ರಸನ್ನಾ ಹೆಗ್ಡೆ, ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ, ಜೊತೆ ಮೊಕ್ತೇಸರ ಪಿ. ರವಿ ಆಚಾರ್ಯ, ಸುರೇಶ್‌ ಆಚಾರ್ಯ ನಿಟ್ಟೆ ಹಾಗೂ ಸಂಘದ ಗೌರವಾಧ್ಯಕ್ಷ ಕೆ. ಕಿಶೋರ್‌ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಸಂತೋಷ್‌ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಗಿರೀಶ್‌ ಆಚಾರ್ಯ ವಂದಿಸಿದರು.

ಪವರ್‌ ಗ್ರಿಡ್‌ನಲ್ಲಿ 800 ಹುದ್ದೆಗಳು

ಹೊಸದಿಲ್ಲಿ : ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ ಫೀಲ್ಡ್ ಇಂಜಿನಿಯರ್ ಮತ್ತು ಫೀಲ್ಡ್ ಸೂಪರ್‌ವೈಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು- 800
ಫೀಲ್ಡ್ ಇಂಜಿನಿಯರ್ (ಎಲೆಕ್ಟ್ರಿಕಲ್)- 50 ಹುದ್ದೆಗಳು
ಫೀಲ್ಡ್ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್)- 15 ಹುದ್ದೆಗಳು
ಫೀಲ್ಡ್ ಇಂಜಿನಿಯರ್ (ಐಟಿ)- 15 ಹುದ್ದೆಗಳು
ಫೀಲ್ಡ್ ಸೂಪರ್‌ವೈಸರ್ (ಎಲೆಕ್ಟ್ರಿಕಲ್)- 480 ಹುದ್ದೆಗಳು
ಫೀಲ್ಡ್ ಸೂಪರ್‌ವೈಸರ್ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್)- 240 ಹುದ್ದೆಗಳು
ಅರ್ಹತೆ: ಮಾನ್ಯತೆ ಪಡೆದ ಸಂಸ್ಥೆಯಿಂದ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಐಟಿ ಸಂಬಂಧಿತ ವಿಷಯದಲ್ಲಿ ಪದವಿ ಪಡೆದಿರಬೇಕು. ಅಲ್ಲದೆ 1 ವರ್ಷದ ಅನುಭವ ಹೊಂದಿರಬೇಕು.
ವಯೋಮಿತಿ: 29 ವರ್ಷದೊಳಗಿರಬೇಕು.
ಕೊನೇ ದಿನಾಂಕ : ಡಿಸೆಂಬರ್ 11, 2022
ವೆಬ್‌ಸೈಟ್‌ : powergrid.in

ರೋಹಿಣಿ ಸಿಂಧೂರಿ ವಿರುದ್ಧ ಭೂ ಕಬಳಿಕೆ ಆರೋಪ

ಬಾಲಿವುಡ್‌ ಗಾಯಕ ಲಕ್ಕಿ ಅಲಿಯ ಜಮೀನು ರೋಹಿಣಿ ಕುಟುಂಬದವರಿಂದ ಅತಿಕ್ರಮಣ

ಬೆಂಗಳೂರು : ಬಾಲಿವುಡ್‌ನ ಖ್ಯಾತ ಗಾಯಕ ಹಾಗೂ ನಟ ಲಕ್ಕಿ ಅಲಿ ಕರ್ನಾಟಕದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜಮೀನು ಅತಿಕ್ರಮಣ ಮಾಡಿದ ಆರೋಪ ಹೊರಿಸಿದ್ದಾರೆ.
ಬೆಂಗಳೂರಿನ ಯಲಹಂಕ ಸಮೀಪದ ಕೆಂಚೇನಹಳ್ಳಿಯಲ್ಲಿರುವ ಆಸ್ತಿಯನ್ನು ಭೂ ಮಾಫಿಯಾ ಕಬಳಿಕೆ ಮಾಡುತ್ತಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತವರ ಪತಿ ಸುಧೀರ್‌ ರೆಡ್ಡಿ, ಮಧುಸೂದನ್‌ ರೆಡ್ಡಿ ಎಂಬವರು ನನ್ನ ಜಮೀನು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲಿಯ ಈ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ರೋಹಿಣಿಯ ಮಾವ ಮಧುಸೂದನ್ ರೆಡ್ಡಿ, ಅಲಿ ಎಂಬಾತ ನಮ್ಮ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆ. ಈ ಪ್ರಕರಣಕ್ಕೂ ರೋಹಿಣಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಈ ಮೂರು ಎಕರೆ ಆಸ್ತಿಯನ್ನು 2012ರಲ್ಲಿಯೇ ಲಕ್ಕಿ ಅಲಿಯ ಸಹೋದರ ಮನ್ಸೂರ್‌ ಎಂ. ಅಲಿ ಅವರ ಬಳಿ ಖರೀದಿ ಮಾಡಿದ್ದೇನೆ ಎಂದಿದ್ದಾರೆ.
ಈ ವಿವಾದ ಗೊಂದಲದ ಗೂಡಾಗುತ್ತಿದ್ದಂತೆ, ಸದ್ಯ ದುಬೈನಲ್ಲಿರುವ ಲಕ್ಕಿ ಅಲಿ, ಅಲ್ಲಿನಿಂದಲೇ ಸರಣಿ ಟ್ವಿಟ್‌ ಮೂಲಕ ಪ್ರಕರಣದ ಬಗ್ಗೆ ಹೇಳಿಕೊಂಡಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಮತ್ತು ಇನ್ಸ್‌ಪೆಕ್ಟರ್ ಜನರಲ್ (ಡಿಜಿ ಮತ್ತು ಐಜಿ) ಪ್ರವೀಣ್ ಸೂದ್ ಅವರಿಗೆ ದೂರು ಸಲ್ಲಿಸಿದ್ದಾರೆ. ನಾನು ಕೆಲಸದ ನಿಮಿತ್ತ ದುಬೈನಲ್ಲಿದ್ದೇನೆ. ಇದು ತುಂಬ ತುರ್ತಿನ ವಿಚಾರ ಆಗಿರುವ ಕಾರಣ, ಟ್ವಿಟರ್‌ ಮೂಲಕ ನಿಮ್ಮೆಲ್ಲರ ಗಮನಕ್ಕೆ ತರುತ್ತಿದ್ದೇನೆ. ಟ್ರಸ್ಟ್ ಪ್ರಾಪರ್ಟಿಯಾಗಿರುವ ನನ್ನ ಜಮೀನನ್ನು ಐಎಎಸ್ ಅಧಿಕಾರಿ ರಾಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಮತ್ತು ಅವರ ಸಹೋದರ ಮಧುಸೂದನ್ ರೆಡ್ಡಿ ಅತಿಕ್ರಮಿಸಿದ್ದಾರೆ ಎಂದು ಟ್ವಿಟ್‌ ಮಾಡಿದ್ದಾರೆ.
ಈ ಭೂ ಮಾಫಿಯಾ, ವೈಯಕ್ತಿಕ ಲಾಭಕ್ಕಾಗಿ ರಾಜ್ಯದ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಅಕ್ರಮವಾಗಿ ನನ್ನ ಫಾರ್ಮ್‌ಹೌಸ್‌ಗೆ ಪ್ರವೇಶಿಸಿದ್ದಾರೆ. ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಲೂ ನಿರಾಕರಿಸುತ್ತಿದ್ದಾರೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಈ ಭೂಮಾಫಿಯಾಗಳಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಅಲಿ ಆರೋಪಿಸಿದ್ದಾರೆ.
ಮತ್ತೊಂದು ವಿವಾದದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಿಲುಕಿದ್ದು, ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದಾಗ ಬಳಸಲು ನೀಡಿದ್ದ ಅತಿಥಿ ಗೃಹದ ಮಂಚ, ಹಾಸಿಗೆ , ದಿಂಬು ಇತ್ಯಾದಿ ವಸ್ತುಗಳು ಮಾಯವಾಗಿದೆ.ಒವೆಲ್ಲವನ್ನು ರೊಃಇಣಿ ಸಿಂಧೂರಿ ಸಾಗಿಸಿದ್ದಾರೆ, ಅತಿಥಿ ಗೃಹದ ಸಾಮಾಗ್ರಿಗಳನ್ನು ವಾಪಸ್‌ ಕೇಳಿ 2020ರಿಂದ ಮೂರು ಪತ್ರಗಳನ್ನು ಆಡಳಿತ ತರಬೇತಿ ಸಂಸ್ಥೆಯ ಅಧಿಕಾರಿಗಳು ಬರೆದಿದ್ದಾರೆ‌. ಆದರೆ ಅವರು ಅಧಿಕಾರಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಮುದ್ರಾಡಿ : ಎಂ. ಎನ್.‌ ಡಿ. ಎಸ್.‌ ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ಪರಿವರ್ತನಾ ಸಭೆ

ಹೆಬ್ರಿ : ಪ್ರತಿಯೊಬ್ಬ ವಿದ್ಯಾರ್ಥಿಯೂ ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು. ಈ ಗುರಿಯನ್ನು ಸಾಧಿಸಲು ಸತತ ಪ್ರಯತ್ನ ಅವಶ್ಯ. ಈ ಕಾರ್ಯದಲ್ಲಿ ಆಧುನಿಕ ಜೀವನ ಶೈಲಿಗೆ ಮಾರುಹೋಗದೆ ಭಾರತೀಯ ಸಂಸ್ಕೃತಿಯ ಉನ್ನತ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಸಂಸ್ಕಾರದ ಶಿಕ್ಷಣವನ್ನು ನೀಡುವುದು ಹೆತ್ತವರ ಪ್ರಮುಖ ಜವಾಬ್ದಾರಿ ಎಂದು ಪ್ರಖರ ವಾಗ್ಮಿ ಅಕ್ಷಯ ಗೋಖಲೆ ಅಭಿಪ್ರಾಯಪಟ್ಟರು. ಅವರು ಮುದ್ರಾಡಿ ಎಂ. ಎನ್.‌ ಡಿ. ಎಸ್.‌ ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ಡಿ. 2 ರಂದು ನಡೆದ ಪರಿವರ್ತನಾ ಎಂಬ ಪೋಷಕರ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಮಕ್ಕಳಿಗೆ ಕಷ್ಟದ ಅರಿವಿದ್ದಾಗ ಅವರು ಸರಿದಾರಿಯಲ್ಲಿ ನಡೆಯುತ್ತಾರೆ. ಮಕ್ಕಳು ಅತಿಯಾಗಿ ಮೊಬೈಲ್‌ ಬಳಕೆಗೆ ದಾಸರಾಗದೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದು ಒಳ್ಳೆಯ ಜ್ಞಾನವನ್ನು ನೀಡುವುದರ ಜೊತೆಗೆ ಮೌಲ್ಯಯುತ ಪ್ರಜೆಗಳಾಗಿ ಬದುಕುವ ಕಲೆಯನ್ನು ಕಲಿಸುತ್ತದೆ. ಈ ರೀತಿಯಾದ ಕಲಿಕಾ ವಾತವರಣವನ್ನು ಒದಗಿಸು0ವಲ್ಲಿ ಶಿಕ್ಷಕರ ಜೊತೆಗೆ ಪೋಷಕರು ಸಹಕರಿಸಬೇಕು ಎಂದರು. ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷ ಸುರೇಶ್‌ ಕುಲಾಲ್‌ ಕಾರ್ಯಕ್ರಮ ಉದ್ಘಾಟಿಸಿ ಸಂದರ್ಭೋಚಿತವಾಗಿ ಮಾತನಾಡಿದರು.

ಪಾದಪೂಜೆ ಕಾರ್ಯಕ್ರಮ
ಈ ಸಂದರ್ಭ ಮಕ್ಕಳು ಪೋಷಕರನ್ನು ಗೌರವಿಸುವಂತಹ ಪಾದಪೂಜೆ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿಗಳಾದ ರಚಿತಾ ಮತ್ತು ಶೋಧನ್‌ ಶೆಟ್ಟಿಗಾರ್‌, ಪೋಷಕರಾದ ಜಯಂತ ಹೆಬ್ಬಾರ್‌ ಮತ್ತು ಸುರೇಶ್‌ ಕುಲಾಲ್‌ ಹಾಗೂ ಹಳೆ ವಿದ್ಯಾರ್ಥಿನಿ ಪವಿತ್ರಾ ಅನಿಸಿಕೆ ವ್ಯಕ್ತಪಡಿಸಿದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಅಶೋಕ್‌ ಕುಮಾರ್‌ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶಿಕ್ಷಕರಾದ ರಘುಪತಿ ಭಟ್‌, ಮಹೇಶ್‌ ನಾಯ್ಕ ಕೆ., ಮಹೇಶ್‌ ಎಂ. ಹಾಗೂ ರಕ್ಷಕ ಶಿಕ್ಷಕ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ ಸ್ವಾಗತಿಸಿದರು. ಶಿಕ್ಷಕರಾದ ಪಿ. ವಿ ಆನಂದ ಸಾಲಿಗ್ರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಲ್ಲಾಡಿ ಚಂದ್ರಶೇಖರ್‌ ಭಟ್‌ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮಲಾ ಕೊಠಾರಿ ವಂದಿಸಿದರು.

ಡ್ರಗ್‌ ದಂಧೆ : 27 ಮಂದಿ ಬಂಧನ

ಪಶ್ಚಿಮ ಬಂಗಾಳದ ವ್ಯಕ್ತಿ ಕಿಂಗ್‌ಪಿನ್‌

ಬೆಂಗಳೂರು : ಆನ್‌ಲೈನ್‌ಮೂಲಕ ಮೂಲಕ ಡ್ರಗ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ 27 ಜನರನ್ನು ಬಂಧಿಸಿದೆ. ಬಂಧಿತ 27 ಜನರಲ್ಲಿ ಪೆಡ್ಲರ್‌ಗಳು ಮತ್ತು ಮಾದಕ ವಸ್ತುಗಳ ಬಳಕೆದಾರರೂ ಸೇರಿದ್ದಾರೆ.
ಈ ಡ್ರಗ್‌ ದಂಧೆ ಹಿಂದೆ ವ್ಯಕ್ತಿ ಪಶ್ಚಿಮ ಬಂಗಾಳದ ವ್ಯಕ್ತಿಯಿದ್ದು, ಆತನೇ ಕಿಂಗ್‌ಪಿನ್‌ ಎಂದು ಎನ್‌ಸಿಬಿ ಪತ್ತೆಮಾಡಿದೆ.
ಹೈಡ್ರೋಪೋನಿಕ್ ಗಾಂಜಾ, ಕೊಕೇನ್ ಮತ್ತು ಎಲ್‌ಎಸ್‌ಡಿಯಂತಹ ಮಾದಕ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದರು. ಇದನ್ನು ಡಾರ್ಕ್ ವೆಬ್, ಟೆಲಿಗ್ರಾಮ್ ಮತ್ತು ವಾಟ್ಸಾಪ್‌ನಂತಹ ವೇದಿಕೆಗಳ ಬಳಕೆದಾರರಿಗೆ ನೀಡುವ ವ್ಯಾಪಾರ ನಡೆಸಲಾಗುತ್ತಿತ್ತು.
ಈ ಮಾದಕ ವಸ್ತುಗಳನ್ನು ದೇಶದೊಳಗೆ ಆಮದು ಮಾಡಿಕೊಳ್ಳಲು ಮತ್ತು ಮಾದಕವಸ್ತು ಬಳಕೆದಾರರಿಗೆ ಕಳುಹಿಸಲು ಕೆಲವು ಅಂತಾರಾಷ್ಟ್ರೀಯ ಕೊರಿಯರ್ ಸೇವೆಗಳನ್ನು ಸಹ ಬಳಸಲಾಗಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ ತಿಳಿಸಿದೆ.
ಬಂಧಿತರಲ್ಲಿ ಹೆಚ್ಚಿನವರು 20 ರಿಂದ 25 ವರ್ಷದೊಳಗಿನ ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳು.ಕೆಲವು ಕಲಾವಿದರು ಮತ್ತು ಒಬ್ಬ ಇರಾನ್ ಪ್ರಜೆ ಇದ್ದಾನೆ.
ಎನ್‌ಸಿಬಿ ಬೆಂಗಳೂರು ಘಟಕದ ನಿರ್ದೇಶಕ ಪಿ ಅರವಿಂದನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಅಕ್ಟೋಬರ್‌ನಲ್ಲಿ ಕಾರ್ಯಾಚರಣೆ ಪ್ರಾರಂಭವಾಗಿತ್ತು.

2023 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2022-23ನೇ ಸಾಲಿನ ಕರ್ನಾಟಕ ಎಸ್​ಎಸ್​ಎಲ್​ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. 2023ರ ಮಾರ್ಚ್-ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಡಿ. 5 ರಂದು ಪ್ರಕಟಿಸಿದ್ದು, ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆಗಳು ನಡೆಯಲಿವೆ.

2022-23ನೇ ಸಾಲಿನ ಎಸ್​ಎಸ್​ಎಲ್​ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅ. 29 ಪ್ರಕಟಿಸಿತ್ತು. ಏಪ್ರಿಲ್ 1ರಿಂದ ಏ, 15ರವರೆಗೆ ಪರೀಕ್ಷೆ ನಡೆಸಲು ದಿನಾಂಕ ‌ನಿಗದಿ ಮಾಡಿದ್ದು, ಈ ಬಗ್ಗೆ ಏನಾದರೂ ಆಕ್ಷೇಪಣೆಗಳು ಇದ್ದರೆ ನವೆಂಬರ್ 28ರವರೊಳಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿತ್ತು. ಇದೀಗ ಅಂತಿಮವಾಗಿ ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಫೈನಲ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅಂತಿಮ ವೇಳಾಪಟ್ಟಿ
31-03-2023 – ಪ್ರಥಮ ಭಾಷೆ ಪರೀಕ್ಷೆ ( ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ)
04-04-2023 – ಗಣಿತ
06-04-2023 – ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
10-04-2023 – ವಿಜ್ಞಾನ
12-04-2023 – ತೃತೀಯ ಭಾಷೆ (ತೃತೀಯ ಭಾಷೆ ಪರೀಕ್ಷೆ ತೃತೀಯ ಭಾಷೆ-ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು
15-04-2023 – ಸಮಾಜ ವಿಜ್ಞಾನ

ಇಂದಿನಿಂದ ದತ್ತ ಜಯಂತಿ : ಬಿಗು ಬಂದೋಬಸ್ತು


ಚಿಕ್ಕಮಗಳೂರು : ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ಹಮ್ಮಿಕೊಂಡಿರುವ ಮೂರು ದಿನಗಳ ದತ್ತಜಯಂತಿ ಉತ್ಸವಕ್ಕೆ ಮಂಗಳವಾರ ಅಧಿಕೃತ ಚಾಲನೆ ಸಿಗಲಿದೆ. ಶಾಸಕ ಸಿ.ಟಿ.ರವಿ, ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಚಾಲಕ ರಘು ಸಕಲೇಶಪುರ ಸೇರಿ ರಾಜ್ಯಾದ್ಯಂತ ಸಂಘ ಪರಿವಾರದ ಮುಖಂಡರು ಹಾಗೂ ಕಾರ್ಯಕರ್ತರು ದತ್ತಮಾಲೆ ಧರಿಸಿದ್ದಾರೆ.
ಈ ಬಾರಿ ದತ್ತ ಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಭಾಗವಹಿಸುವ ನಿರೀಕ್ಷೆಯಿರುವುದರಿಂದ ಬಂದೋಬಸ್ತಿಗಾಗಿ 3500 ಪೊಲೀಸರ ನಿಯೋಜನೆ ಮಾಡಿ, 46 ಚೆಕ್‌ಪೋಸ್ಟ್‌ ತೆರೆಯಲಾಗಿದೆ.
ಇದೇ ಮೊದಲ ಬಾರಿಗೆ ದತ್ತಪೀಠದಲ್ಲಿ ಅರ್ಚಕರಿಂದ ಪೂಜೆ ನಡೆಸಲು ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ದತ್ತಪೀಠದಲ್ಲಿ ದತ್ತ ಜಯಂತಿ ವೇಳೆ ಪೂಜೆ ಸಲ್ಲಿಸಲು ತಾತ್ಕಾಲಿಕವಾಗಿ ನೇಮಕಗೊಂಡಿರುವ ಬಾಗೇಪಲ್ಲಿಯ ಅರ್ಚಕರಾದ ಪಿ.ಎಂ.ಸಂದೀಪ್‌ ಹಾಗೂ ಶೃಂಗೇರಿ ತಾಲೂಕಿನ ಬೊಮ್ಮನಕುಡಿಗೆಯ ಕೆ.ಶ್ರೀಧರ್‌ ಅವರು ದತ್ತಪೀಠದ ವ್ಯವಸ್ಥಾಪನಾ ಸಮಿತಿ ಸದಸ್ಯರೊಂದಿಗೆ ಸೋಮವಾರ ದತ್ತಪೀಠಕ್ಕೆ ಭೇಟಿ ನೀಡಿದ್ದರು.
ಮಂಗಳವಾರ ನಡೆಯಲಿರುವ ಅನಸೂಯ ಮಾತೆ ಪೂಜಾ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯಿಂದ ಬರುವ ಸುಮಾರು 5 ಸಾವಿರ ಮಾತೆಯರು ಭಾಗವಹಿಸಲಿದ್ದಾರೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಚಾಲಕ ರಘು ಸಕಲೇಶಪುರ ತಿಳಿಸಿದ್ದಾರೆ.

ಭಾರಿ ಕುಸಿತ : ಬಸ್‌ ಮಣ್ಣಿನಡಿ ಸಮಾಧಿ

ಕೊಲಂಬಿಯದಲ್ಲಿ ನಡೆದ ಘಟನೆಯಲ್ಲಿ 34 ಸಾವು

ಕೊಲಂಬಿಯ : ಕೊಲಂಬಿಯದಲ್ಲಿ ಭಾರೀ ಭೂಕುಸಿತ ಸಂಭವಿಸಿ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ. ಪ್ರಯಾಣಿಕರಿದ್ದ ಬಸ್ ಮಣ್ಣಿನಡಿಯಲ್ಲಿ ಸಿಲುಕಿ ಸಮಾಧಿಯಾಗಿದೆ. ಉತ್ತರ ಪ್ರಾಂತ್ಯದ ಚೋಕೊಗೆ ಹೋಗುವ ರಸ್ತೆಯಲ್ಲಿ ಭಾನುವಾರ ಮುಂಜಾನೆ ಭೂಕುಸಿತ ಸಂಭವಿಸಿದೆ. ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಘಟನೆ ಸಂಬಂಧ ಟ್ವೀಟ್‌ ಮಾಡಿ 27 ಜನ ಶವಗಳನ್ನು ಮಣ್ಣಿನಲ್ಲಿ ಸಿಲುಕಿರುವ ಬಸ್​ನಿಂದ ಹೊರ ತೆಗೆಯಲಾಗಿದೆ ಎಂದಿದ್ದಾರೆ.
ರಾಜಧಾನಿ ಬೊಗೋಟಾದಿಂದ ಸುಮಾರು 230 ಕಿ.ಮೀ. ದೂರದ ರಿಸಾರಾಲ್ಡಾದ ಪ್ಯೂಬ್ಲೋ ರಿಕೊದಲ್ಲಿ ಘಟನೆ ಸಂಭವಿಸಿದೆ.

ದತ್ತಪೀಠಕ್ಕೆ ಇಬ್ಬರು ಹಿಂದೂ ಅರ್ಚಕರ ನೇಮಕ

ಚಿಕ್ಕಮಗಳೂರು : ಚಿಕ್ಕಮಗಳೂರಿನ ಬಾಬಾ ಬುಡನ್​ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್​ ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಡಿ. 6ರಿಂದ 8ರವರೆಗೆ ದತ್ತ ಜಯಂತಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದತ್ತಪೀಠಕ್ಕೆ ಇಬ್ಬರು ಹಿಂದೂ ಅರ್ಚಕರನ್ನು ನೇಮಕ ಮಾಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯವರಾದ ಆಗಮೋಕ್ತದಲ್ಲಿ ಪಾರಂಗತರಾದ ಡಾ.ಸಂದೀಪ್ ಶರ್ಮಾ ಮತ್ತು ಶ್ರೀಧರ್ ಭಟ್ ಅರ್ಚಕರಾಗಿ ನೇಮಕಗೊಂಡಿದ್ದಾರೆ.
ಸಂದೀಪ್ ಶರ್ಮಾ ಅವರು ಮಂಗಳವಾರದಿಂದ ಪೀಠದಲ್ಲಿ ದತ್ತ ಜಯಂತಿಯ ಧಾರ್ಮಿಕ ಆಚರಣೆಗಳನ್ನು ಪ್ರಾರಂಭಿಸುತ್ತಾರೆ, ದತ್ತ ಪಾದುಕೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಮತ್ತು ಕೊನೆಯ ದಿನದಂದು ಹೋಮ ಮತ್ತು ಹವನವನ್ನು ಮಾಡುತ್ತಾರೆ. ಈ ಕುರಿತು ಬಜರಂಗದಳದ ಕಾರ್ಯಕರ್ತ ರಘು ಸಕಲೇಶಪುರ ಮಾತನಾಡಿ, ಇದು ನಾಲ್ಕು ದಶಕಗಳ ಹೋರಾಟಕ್ಕೆ ಸಂದ ಜಯವಾಗಿದ್ದು, ದತ್ತ ಜಯಂತಿ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಅರ್ಚಕರನ್ನು ನೇಮಿಸುವ ಬದಲು ಕಾಯಂ ಆಗಿ ನೇಮಿಸುವಂತೆ ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಶಾಸಕ ಸಿ.ಟಿ.ರವಿ ಮಾತನಾಡಿ, ದತ್ತಪೀಠದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಮುಸ್ಲಿಂ ಅರ್ಚಕರು ಮಾಡಲು ಪಡೆಯಲು ಸಾಧ್ಯವಿಲ್ಲ, ಆದ್ದರಿಂದ ರಾಜ್ಯ ಸರ್ಕಾರವು ಹಿಂದೂ ಸಮಾಜದ ಆಶಯಕ್ಕೆ ಮಣಿದು ಹಿಂದೂ ಅರ್ಚಕರನ್ನು ನೇಮಿಸಿದೆ. ದತ್ತ ದೇವರಿಗೆ ಹಾಗೂ ಜಿಲ್ಲೆಯ ಜನತೆಗೆ ಹಿಂದಿನ ಕಾಂಗ್ರೆಸ್ ಸರಕಾರ ಅನ್ಯಾಯ ಮಾಡಿದ್ದರೂ ಬಿಜೆಪಿ ಸರಕಾರ ಕೊಟ್ಟ ಭರವಸೆಯನ್ನು ಈಡೇರಿಸಿದೆ ಎಂದು ಹೇಳಿದರು.