ಕಾಪು: ಗ್ರಾಮೀಣ ಕಾಂಗ್ರೆಸ್ ಸಮಿತಿಯ ಕಾರ್ಯಕ್ರಮಕ್ಕೆ ಸರ್ಕಾರಿ ಬಣ್ಣ ಬಳಿಯುವುದು ಯಾಕೆ? ಸಾರ್ವಜನಿಕರಲ್ಲಿ ಇಂತಹ ಗೊಂದಲ ಸೃಷ್ಟಿಸುವ ಅಗತ್ಯವೇನು? ಕಾಪು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ಜನರನ್ನು ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ KYC ಮಾಡುವ ನೆಪದಲ್ಲಿ ಸಮಾವೇಶಕ್ಕೆ ಆಹ್ವಾನಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಪ್ರಶ್ನೆ ಮಾಡಿದ್ದಾರೆ.
ಸಮಾವೇಶಕ್ಕೆ ಹಾಜರಾಗದಿದ್ದರೆ ಗೃಹಲಕ್ಷ್ಮೀ ಮುಂದಿನ ಕಂತಿನ ಹಣ ಬರುವುದಿಲ್ಲ ಎಂಬ ರೀತಿಯಲ್ಲಿ ಸಾರ್ವಜನಿಕರಲ್ಲಿ ಭಯ ಮತ್ತು ಗೊಂದಲ ಮೂಡಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಹಕ್ಕು. ಅದಕ್ಕೂ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಭಾಗವಹಿಸುವುದಕ್ಕೂ ಯಾವುದೇ ಸಂಬಂಧವಿಲ್ಲ. ಸಮಾವೇಶಕ್ಕೆ ಹಾಜರಾಗದ ಕಾರಣಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣ ಸ್ಥಗಿತಗೊಳ್ಳುತ್ತದೆ ಎಂಬುದಕ್ಕೆ ಅಧಿಕೃತ ಆದೇಶ ಅಥವಾ ಆಧಾರವಿದೆಯೇ? ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ರಾಜ್ಯ ಸರ್ಕಾರವೇ ಗ್ಯಾರಂಟಿ ಸಮಿತಿಗಳನ್ನು ರಚಿಸಿರುವಾಗ, ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡುವ ಅಗತ್ಯವೇನಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸಮಾವೇಶವೆಂದರೆ ಜನರು ಬರುವುದಿಲ್ಲ ಎಂಬ ಕಾರಣಕ್ಕೆ ಗ್ಯಾರಂಟಿ ಯೋಜನೆಗಳ KYC ನೆಪವೊಡ್ಡಿ ಜನರನ್ನು ಸಮಾವೇಶಕ್ಕೆ ಕರೆತರುವ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷ ತಲುಪಿದೆಯೇ? ರಾಜಕೀಯ ಪಕ್ಷದ ಸಮಾವೇಶಕ್ಕೆ ಜನರು ಸ್ವಯಂಪ್ರೇರಿತರಾಗಿ ಬರಬೇಕು. ಆದರೆ ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಜನರಲ್ಲಿ ತಪ್ಪು ಮಾಹಿತಿ ನೀಡಿ, ಮುಂದಿನ ಕಂತಿನ ಹಣ ನಿಲ್ಲುತ್ತದೆ ಎಂಬ ಭೀತಿ ಮೂಡಿಸಿ ಜನರನ್ನು ಸೇರಿಸುವ ಪ್ರಯತ್ನ ನಡೆಯುತ್ತಿರುವುದು ನಾಚಿಕೇಡಿನ ಸಂಗತಿ! ಜನರ ವಿಶ್ವಾಸ ಗಳಿಸಿ ಸಮಾವೇಷದಲ್ಲಿ ಜನರನ್ನು ಸೇರಿಸಬೇಕೇ ಹೊರತು, ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಗೊಂದಲ ಮತ್ತು ಭೀತಿ ಸೃಷ್ಟಿಸಿ ಜನರನ್ನು ಸೇರಿಸುವುದಲ್ಲ ಎಂದು ಟೀಕಿಸಿದ್ದಾರೆ.





























































