ದ.ಕ. ಜಿಲ್ಲೆಯಲ್ಲಿ ಋತುತಾರೆ ಯೋಜನೆ ಪ್ರಾಯೋಗಿಕ ಆರಂಭಕ್ಕೆ ಆರೋಗ್ಯ ಇಲಾಖೆಯಿಂದ ಚಿಂತನೆ

ಬೆಂಗಳೂರು: ಸ್ತ್ರೀಯರಿಗೆ ಋತುಬಂಧದ ಸಂದರ್ಭದಲ್ಲಿ ಉಂಟಾಗುವ ದೈಹಿಕ ಸಮಸ್ಯೆ, ಮಾನಸಿಕ ಒತ್ತಡ ನಿರ್ವಹಣೆಗಾಗಿ ರೂಪಿಸಲಾದ ‘ಋತುತಾರೆ’ ಯೋಜನೆಯನ್ನು ಪ್ರಾಯೋಗಿಕವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಈ ಯೋಜನೆ ಜಾರಿಗೆ ಸಂಬಂಧಿಸಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆ ಮತ್ತು ಗುರುತಿಸಲಾದ ವೈದ್ಯಕೀಯ ಕಾಲೇಜು, ಆಯುಷ್ಮಾನ್ ಆರೋಗ್ಯ ಮಂದಿರ, ತಾಲೂಕು ಆಸ್ಪತ್ರೆ ಸೇರಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸೌಲಭ್ಯಗಳ ವಿವರ ಸಂಗ್ರಹಿಸಿ ನಕ್ಷೆ ತಯಾರಿಸಬೇಕು. 35 ವರ್ಷ, ಮೇಲ್ಪಟ್ಟ ಅರ್ಹ ಮಹಿಳೆಯರನ್ನು ಗುರುತಿಸಬೇಕು. ಆಶಾ ಕಾರ್ಯಕರ್ತೆಯರು, ಆರೋಗ್ಯಾಧಿಕಾರಿಗಳು ಯೋಜನೆಯಲ್ಲಿ ಭಾಗಿಯಾಗಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತಿ ಬುಧವಾರ ವಿಶೇಷ ಚಿಕಿತ್ಸಾ ಶಿಬಿರ, ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ಶನಿವಾರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಬೇಕು ಎಂಬಿತ್ಯಾದಿ ಸೂಚನೆ ತಿಳಿಸಲಾಗಿದೆ.

ಪ್ರತಿ ಅರ್ಹ ಮಹಿಳೆಗೂ ಮಧ್ಯ ವಯಸ್ಕ ಆರೋಗ್ಯ ಕಾರ್ಡ್ ಸಿಗಲಿದ್ದು ಆರೋಗ್ಯ ತಪಾಸಣೆ, ವೈದ್ಯಕೀಯ ಮೌಲ್ಯಮಾಪನ, ಸಮಾಲೋಚನೆ, ಚಿಕಿತ್ಸೆ ನೀಡಲಾಗುತ್ತದೆ. 3 ತಿಂಗಳ ಪ್ರಾಯೋಗಿಕ ಹಂತ ಮುಕ್ತಾಯದ ನಂತರ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ.

ನಟಿ ರಮ್ಯಾ ರಾಯಭಾರಿಯಾಗಿದ್ದು ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

























































































































error: Content is protected !!
Scroll to Top