ಕಾರ್ಕಳ : ಕಾರ್ಕಳ ಶ್ರೀ ಭುವನೇಂದ್ರ ಪದವಿ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ಪದ್ಮನಾಭ ಗೌಡ (75) ಶನಿವಾರ ಮುಂಜಾನೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೂಲತಃ ಸುಳ್ಯ ತಾಲೂಕು ಬಿಳಿಮಲೆಯವರಾಗಿರುವ ಪದ್ಮನಾಭ ಗೌಡ ಅವರು ಎಂ.ಎಸ್ಸಿ ಪದವಿ ಬಳಿಕ ಶ್ರೀ ಭುವನೇಂದ್ರ ಪದವಿ ಕಾಲೇಜಿನಲ್ಲಿ ಗಣಿತ ಶಾಸ್ತ್ರ ಪ್ರಾಧ್ಯಾಪಕರಾಗಿ ಸೇರ್ಪಡೆಗೊಂಡರು. ಎಂ.ಫಿಲ್ ಪದವಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದ ಪದ್ಮನಾಭ ಗೌಡರು ಬಳಿಕ ಗಣಿತ ಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ, ಪ್ರಾಂಶುಪಾಲರಾಗಿ ಸುಮಾರು 10 ವರ್ಷಗಳ ಅವಧಿ ಕರ್ತವ್ಯ ಸಲ್ಲಿಸಿದ್ದರು.
ಕಾಲೇಜಿನ ವಿದ್ಯಾರ್ಥಿ ನಿಲಯಪಾಲಕರಾಗಿ, ಪ್ರಾಂಶುಪಾಲರಾಗಿ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಕಾಲೇಜಿನ ಯಕ್ಷಗಾನ ಕೇಂದ್ರ ಇಂದ್ರಪ್ರಸ್ಥದ ಸ್ಥಾಪನೆಗೂ ಕಾರಣಿಕರ್ತರಾಗಿದ್ದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಪದ್ಮನಾಭ ಗೌಡರು ಸಾಹಿತ್ಯ, ಯಕ್ಷಗಾನದಲ್ಲಿ ಸಕ್ರಿಯರಾಗಿದ್ದರು. ಯುವಪೀಳಿಗೆಗೆ ಯಕ್ಷಗಾನ ಕುರಿತು ಆಸಕ್ತಿ ಮತ್ತು ತರಬೇತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಕಳ ಯಕ್ಷಕಲಾ ರಂಗ ಸ್ಥಾಪಿಸಿರುವ ಪದ್ಮನಾಭ ಗೌಡರು, ಕಾರ್ಕಳ ಒಕ್ಕಲಿಗ ಗೌಡ ಸಂಘ, ಲಯನ್ಸ್ ಕ್ಲಬ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.
ಪ್ರೊ. ಎಂ. ರಾಮಚಂದ್ರ ಅವರ ನಿಕಟವರ್ತಿಯಾಗಿದ್ದ ಪದ್ಮನಾಭ ಗೌಡರು ಸಾಹಿತ್ಯ ಸಂಘ ಕಾರ್ಕಳದ ಮೂಲಕ ನೂರಾರು ಸಾಹಿತ್ಯಿಕ, ಸಾಂಸ್ಕೃತಿಕ, ವಿಜ್ಞಾನಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಕೈಜೋಡಿಸಿದ್ದರು. ಎಂ. ರಾಮಚಂದ್ರ ಅವರ ಕಾಲನಂತರ ಸಾಹಿತ್ಯ ಸಂಘವನ್ನು ಮುನ್ನಡೆಸುವಲ್ಲಿ ಪ್ರಮುಖಪಾತ್ರ ವಹಿಸಿದ್ದರು. ಎಲ್ಲ ವಯೋಮಾನದವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಪದ್ಮನಾಭ ಗೌಡರು ಓರ್ವ ಶ್ರೇಷ್ಠ, ಆದರ್ಶ ವ್ಯಕ್ತಿಯಾಗಿ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು.
ಮೃತರು ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನಕ್ಕಾಗಿ ತೆಳ್ಳಾರು 12ನೇ ಅಡ್ಡ ರಸ್ತೆಯಲ್ಲಿರುವ ಸ್ವಗೃಹದಲ್ಲಿ 2 ಗಂಟೆ ವೇಳೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.





























































