ಕರ್ನಾಟಕ ಅಬಕಾರಿ ಕಾಯ್ದೆ 1965 – ಕಾನೂನು ಮಾಹಿತಿ

ಕರ್ನಾಟಕ ರಾಜ್ಯದಲ್ಲಿ ಮದ್ಯದ ಸ್ವಾಧೀನತೆ, ಬಳಕೆ ಮತ್ತು ಮಾರಾಟ ಕುರಿತು ನಿಯಂತ್ರಣ ಮತ್ತು ನಿರ್ಬಂಧಗಳಿಗೆ ಸಮ್ಮಂದಪಟ್ಟAತೆ ಕರ್ನಾಟಕ ಅಬಕಾರಿ ಕಾಯ್ದೆ ೧೯೬೫ ಎಂಬ ಕಾನೂನು ನಮ್ಮ ರಾಜ್ಯದಲ್ಲಿ ಜ್ಯಾರಿಯಲ್ಲಿರುತ್ತದೆ. ಈ ಮೂಲ ಕಾನೂನನ್ನು ಸುಧಾರಣೆಗೊಳಿಸುವ ಉದ್ದೇಶದಿಂದ ೨೦೧೬ ರಲ್ಲಿ ಕರ್ನಾಟಕ ಅಬಕಾರಿ (ತಿದ್ದುಪಡಿ) ಅಧಿನಿಯಮ ೨೦೧೬ ಎಂಬ ಹೊಸ ಕಾನೂನು ಸಹಾ ಜ್ಯಾರಿಗೆ ಬಂದಿರುತ್ತದೆ.

ಇದರ ಅನ್ವಯ ತೆಂಗು ಬೆಳೆಗಾರರ ಆದಾಯವನ್ನು ಹೆಚ್ಚಿಸಲು ನೀರಾ ಉತ್ಪಾದನೆಯನ್ನು ಕಾನೂನಾತ್ಮಕವಾಗಿ ಅನುಮತಿಸಲಾಗಿದೆ. ನೀರಾ ಎಂದರೆ ತೆಂಗಿನ ಮರದಿಂದ ತೆಗೆಯಲಾಗುವ ಪಾರದರ್ಶಕವಾದ, ಪಾಕಯುತವಾದ, ವಾಸನೆ ಮತ್ತು ರುಚಿಯಲ್ಲಿ ಸಿಹಿಯಾಗಿರುವ, ತನ್ನ ಮೇಲ್ಪದರದಲ್ಲಿ ಯಾವುದೇ ನೊರೆಯನ್ನು ಹೊಂದದಿರುವ ಮತ್ತು ಯಾವುದೇ ಆಮ್ಲದೊಂದಿಗೆ ಸಂರಕ್ಷಿಸದೇ ಇರುವ ಕುಡಿಯಲು ಯೋಗ್ಯವಾಗಿರುವ ಪಾನೀಯವಾಗಿರುತ್ತದೆ. ಇದರಿಂದ ಬೆಲ್ಲ ಮುಂತಾದ ನೀರಾ ಉತ್ಪನ್ನಗಳನ್ನು ಸಹಾ ತಯಾರಿಸಬಹುದಾಗಿದೆ. ಆದರೆ ನೀರಾ ಮತ್ತು ನೀರಾ ಉತ್ಪನ್ನಗಳ ತಯಾರಿಕೆಗೆ ರಾಜ್ಯ ಸರ್ಕಾರದ ಸಮ್ಮಂದಪಟ್ಟ ಪ್ರಾಧಿಕಾರದಿಂದ ಲೈಸನ್ಸ್ ಪಡೆಯುವ ಅಗತ್ಯವಿದೆ.

ಕರ್ನಾಟಕ ಅಬಕಾರಿ ಕಾಯ್ದೆ ೧೯೬೫ ರ ಕಲಂ ೧೦ ರ ಪ್ರಕಾರ ಮದ್ಯದ ಸಾಗಣೆಯನ್ನು ನಿಷೇಧಿಸುವ ಅಥವಾ ನಿಯಂತ್ರಿಸುವ ಅಧಿಕಾರವನ್ನು ರಾಜ್ಯ ಸರ್ಕಾರವು ಹೊಂದಿರುತ್ತದೆ. ಇದರಂತೆ ಯಾವುದೇ ವ್ಯಕ್ತಿ ಸೂಕ್ತ ಅನುಮತಿ ಪಡೆಯದೆ ಅನಧಿಕೃವಾಗಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮದ್ಯವನ್ನು ಸಾಗಿಸುವುದು ಅಪರಾಧವಾಗಿರುತ್ತದೆ. ಮಾತ್ರವಲ್ಲದೆ ಸೂಕ್ತ ಅಬಕಾರಿ ಲೈಸನ್ಸ್ ಇಲ್ಲದೆ ಮದ್ಯ ಮಾರಾಟ ಮಾಡುವುದು ಸಹಾ ಕಾನೂನು ಬಾಹಿರವಾಗಿರುತ್ತದೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ ಯಾವುದೇ ವ್ಯಕ್ತಿ ಮದ್ಯಪಾನ ಸೇವನೆ ಮಾಡಿ ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು ಮದ್ಯಪಾನ ಸೇವನೆ ಮಾಡಿದ ವ್ಯಕ್ತಿಯನ್ನು ವೈಜ್ಞಾನಿಕವಾಗಿ ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ ಆತನ ರಕ್ತದಲ್ಲಿ ೧೦೦ ಮಿ.ಲೀ ಗೆ ೩೦ಮಿ.ಗ್ರಾಂ ಮೀರಿದ ಆಲ್ಕೋಹಾಲ್ ಕಂಡುಬಂದಲ್ಲಿ ಆತನು ಶಿಕ್ಷಾರ್ಹ ಅಪರಾಧ ನಡೆಸಿದಂತಾಗುತ್ತದೆ ಮತ್ತು ಈ ಸಂದರ್ಭದಲ್ಲಿ ಮೊದಲ ಅಪರಾಧಕ್ಕೆ ಆರು ತಿಂಗಳ ವರೆಗೆ ಜೈಲು ಶಿಕ್ಷೆ ಅಥವಾ ರೂಪಾಯಿ ಹತ್ತುಸಾವಿರ ದಂಡನೆ ಪಾವತಿ ಅಥವಾ ಇವೆರಡರಿಂದಲೂ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಮಾತ್ರವಲ್ಲದೆ ಇಂತಹ ಅಪರಾಧವನ್ನು ಮುಂದುವರಿಸಿದಲ್ಲಿ ಪುನರಾವರ್ತಿತ ಅಪರಾಧಕ್ಕೆ ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ ರೂಪಾಯಿ ಹದಿನೈದು ಸಾವಿರ ದಂಡನೆ ಪಾವತಿ ಅಥವಾ ಇವೆರಡರಿಂದಲೂ ಶಿಕ್ಷೆಗೆ ಒಳಪಡಬೇಕಾಗುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ವ್ಯಕ್ತಿ ಮದ್ಯಪಾನ ಮಾಡುವುದು ಅಥವಾ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕರಿಗೆ ತೊಂದರೆ ನೀಡುವುದು ಸಹಾ ಅಪರಾಧವಾಗಿರುತ್ತದೆ. ಹೀಗಾಗಿ ಪರವಾನಗಿ ಹೊಂದಿರುವ ಬಾರ್ ಅಥವಾ ಮದ್ಯ ಮಾರಾಟದ ಸ್ಥಳಗಳಲ್ಲಿ ಮಾತ್ರ ಸರ್ಕಾರವು ನೀಡಿದ ಲೈಸನ್ಸ್ ನ ಶರ್ತಗಳಿಗೆ ಅನುಗುಣವಾಗಿ ಮದ್ಯ ಸೇವನೆ ಮಾಡಬಹುದಾಗಿದೆ. ಕರ್ನಾಟಕ ಅಬಕಾರಿ ಪರವಾನಗಿಗಳ ಸಾಮಾನ್ಯ ಶರತ್ತುಗಳ ನಿಯಮ ೧೯೬೭ ರ ನಿಯಮ ೧೦ ರಂತೆ ಮದ್ಯ ಮಾರಾಟಗಾರರು ೨೧ ವರ್ಷಗಳ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ಮದ್ಯ ವನ್ನು ಮಾರಾಟ ಅಥವಾ ಸರಬರಾಜು ಮಾಡಿದಲ್ಲಿ ಮದ್ಯ ಮಾರಾಟಗಾರರು ತಾವು ಹೊಂದಿರುವ ಮದ್ಯ ಮಾರಾಟ ಲೈಸನ್ಸ್ ನ ಶರತ್ತನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಮಾತ್ರವಲ್ಲದೆ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವ ವ್ಯಕ್ತಿಗಳಿಗೆ, ಕರ್ತವ್ಯದಲ್ಲಿರುವ ಕೆಲವು ಸರ್ಕಾರಿ ಅಧಿಕಾರಿಗಳಿಗೆ ಮತ್ತು ಪೋಲೀಸ್ ಸಿಬ್ಬಂದಿಗಳಿಗೆ ಮದ್ಯ ಮಾರಾಟ ಮಾಡುವುದನ್ನು ಹಾಗೂ ಸರ್ಕಾರವು ಘೋಷಿಸುವ ಮದ್ಯ ಮಾರಾಟದ ನಿಷೇಧದ ಸಂದರ್ಭದಲ್ಲಿ ಮದ್ಯ ಮಾರಾಟ ಮಾಡುವುದು ಸಹಾ ಮದ್ಯ ಮಾರಾಟ ಲೈಸನ್ಸ್ ನ ಶರ್ತದ ಉಲ್ಲಂಘನೆಯಾಗುತ್ತದೆ.

























































































































error: Content is protected !!
Scroll to Top