ಭಾರತ ದೇಶದ ಸಂವಿಧಾನದ ವಿಧಿ 12 ರಿಂದ 35ರವರೆಗೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಮೂಲಭೂತ ಹಕ್ಕುಗಳನ್ನು ಪ್ರಸ್ತಾವಿಸಲಾಗಿದ್ದು ಸಂವಿಧಾನಿಕ ಹಕ್ಕುಗಳನ್ನು ರದ್ದುಪಡಿಸುವ ಅಧಿಕಾರ ಯಾರಿಗೂ ಇರುವುದಿಲ್ಲ. ಇದರ ಪ್ರಕಾರ ಮತ, ಜನಾಂಗ, ಜಾತಿ, ಲಿಂಗ ಮತ್ತು ಹುಟ್ಟಿದ ಸ್ಥಳ ಇವುಗಳ ಬಗ್ಗೆ ಯಾವುದೇ ರೀತಿಯ ತಾರತಮ್ಯ ಇಲ್ಲದೇ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವದೊಂದಿಗೆ ಎಲ್ಲರೂ ಸಾರ್ವಜನಿಕ ಅಂಗಡಿಗಳಿಗೆ, ಉಪಾಹಾರ ಗೃಹಗಳಿಗೆ, ಮನೋರಂಜನಾ ಸ್ಥಳಗಳಿಗೆ, ಸಾರ್ವಜನಿಕ ದೇವಾಲಯ, ಮಠಗಳಿಗೆ ಅಥವಾ ಸರಕಾರದ ಅನುದಾನದೊಂದಿಗೆ ನಡೆಸಲ್ಪಡುವ ಯಾವುದೇ ಸಾರ್ವಜನಿಕ ಪ್ರದೇಶಗಳಿಗೆ ಪ್ರವೇಶಿಸುವ ಹಕ್ಕನ್ನು ಪ್ರತಿಯೊಬ್ಬ ನಾಗರಿಕನು ಹೊಂದಿರುತ್ತಾನೆ. ಮಾತ್ರವಲ್ಲದೇ ಈ ನಿಟ್ಟಿನಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಮತ್ತು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗದವರ ಅಥವಾ ಜನರ ರಕ್ಷಣೆಗಾಗಿ ಮತ್ತು ಪರಿಶಿಷ್ಟ ಜಾತಿ ಅಥವಾ ಪಂಗಡ ವರ್ಗಕ್ಕೆ ಸೇರಿದವರ ಹಿತ ರಕ್ಷಣೆಗಾಗಿ ಅಗತ್ಯವಿರುವ ವಿಶೇಷವಾದ ಕಾನೂನುಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಸರಕಾರ ಹೊಂದಿರುತ್ತದೆ.
ಹೀಗೆ ಭಾರತೀಯ ಸಂವಿಧಾನದ ಪ್ರಕಾರ ಪ್ರಜೆಗಳ ಮತೀಯ ಸ್ವಾತಂತ್ರ್ಯದ ಹಕ್ಕು, ಸಂವಿಧಾನಿಕ ಪರಿಹಾರಗಳ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು, ಮಹಿಳೆಯರ ರಕ್ಷಣೆ ಮತ್ತು ಜೀವನಾಂಶದ ಹಕ್ಕು, ಮಾನವ ಹಕ್ಕು ಈ ರೀತಿಯ ವಿವಿಧ ಹಕ್ಕುಗಳ ರಕ್ಷಣೆಗಾಗಿ ಸರಕಾರವು ಜಾರಿಗೆ ತಂದಿರುವ ವಿವಿಧ ಶಾಸನಗಳ ಪೈಕಿ ಮಾನವ ಹಕ್ಕುಗಳ ರಕ್ಷಣಾ ಶಾಸನ ೧೯೯೩ ಎಂಬ ಕಾನೂನು ಪ್ರತಿಯೊಬ್ಬ ಮಾನವನು ಸಂವಿಧಾನದ ಪ್ರಕಾರ ಹೊಂದಿರುವ ರಕ್ಷಣೆಯ ನಿಟ್ಟಿನಲ್ಲಿ ಬಹಳ ಮಹತ್ವವನ್ನು ಹೊಂದಿರುತ್ತದೆ. ಈ ಕಾನೂನಿನ ಪ್ರಕಾರ ಎಲ್ಲಾ ಮಾನವ ಜೀವಿಗಳು ಹುಟ್ಟಿನಿಂದ ಘನತೆ ಮತ್ತು ಯಾವುದೇ ತಾರತಮ್ಯ ರಹಿತವಾದ ಸಮಾನ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯವನ್ನು ಕಾನೂನು ಬದ್ಧವಾಗಿ ಹೊಂದುವ ಉದ್ದೇಶಕ್ಕಾಗಿ ಪ್ರತಿಯೊಬ್ಬ ಸಮಾಜದಲ್ಲಿ ಈ ಕೆಳಗಿನಂತೆ ಹಕ್ಕುಗಳನ್ನು ಪಡೆದಿರುತ್ತಾನೆ.
ಜೀವಿಸುವ ಹಕ್ಕ, ಮಾನವ ಘನತೆ ಹಕ್ಕು, ಸಮಾನತೆಯ ಹಕ್ಕು, ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಗುಲಾಮಗಿರಿ ವಿರುದ್ಧ ಹಕ್ಕು, ಏಕಾಂತ ಗೌಪ್ಯ ಹಕ್ಕು, ಪ್ರಾಮಾಣಿಕ ವಿಚಾರಣೆಯ ಹಕ್ಕು, ಕಾರ್ಯೋತ್ತರ ಅಪರಾಧಿಕ ಕಾನೂನು ವಿರುದ್ಧದ ಹಕ್ಕು, ಸ್ವ ಅಪರಾಧಿಕರಣದ ವಿರುದ್ಧದ ಹಕ್ಕು, ಆರೋಗ್ಯ ಹಕ್ಕು, ಧರ್ಮದ ಸ್ವಾತಂತ್ರ್ಯದ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು, ಸಭೆ ಸೇರುವ ಹಕ್ಕು, ಸಂಚರಿಸುವ ಮತ್ತು ವಾಸಿಸುವ ಹಕ್ಕು, ಶಿಕ್ಷಣದ ಹಕ್ಕು, ಉಪಜೀವನದ ಹಕ್ಕು, ಪರಿಣಾಮಕಾರಿ ಪರಿಹಾರ ದೊರಕಿಸಿಕೊಳ್ಳುವ ಹಕ್ಕು, ಕಾನೂನಿನ ಮುಂದೆ ವ್ಯಕ್ತಿ ಗುರುತಿಸಿಕೊಳ್ಳುವ ಹಕ್ಕು, ಪ್ರಾಣ ರಕ್ಷಣೆಯ ಹಕ್ಕು, ನ್ಯಾಯ ದೊರಕಿಸಿಕೊಳ್ಳುವ ಹಕ್ಕು, ಸಾರ್ವಜನಿಕ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವ ಹಕ್ಕು, ಅನ್ಯಾಯಕ್ಕೆ ಒಳಗಾದವರಿಗೆ ಪರಿಹಾರ ಧನದ ಹಕ್ಕು ಹಾಗೂ ಯೋಗ್ಯ ಪರಿಸರವನ್ನು ಅನುಭವಿಸುವ ಹಕ್ಕು ಇತ್ಯಾದಿ ಮೂಲಭೂತ ಹಕ್ಕುಗಳನ್ನು ಅನುಭವಿಸಲು ಸ್ವತಂತ್ರಿಕನಾಗಿರುತ್ತಾನೆ.













































































