ಕಡತ ವಿಲೇವಾರಿ ವಿಳಂಬ – ಮೇ 25ರಂದು ಹೆಬ್ರಿ ತಾಲೂಕು ಕಚೇರಿ ವಠಾರದಲ್ಲಿ ಪ್ರತಿಭಟನೆ

ಕಾರ್ಕಳ : ರಾಜ್ಯ ಸರಕಾರದ ಯೋಜನೆಗಳು ಅನುಷ್ಠಾನವಾಗದೇ ಜನತೆಗೆ ಸಮಸ್ಯೆಯಾಗುತ್ತಿರುವ ಕುರಿತು ದಿ| ಗೋಪಾಲ ಭಂಡಾರಿ ಅಭಿಮಾನಿ ಬಳಗ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಹೆಬ್ರಿ ವತಿಯಿಂದ ಮೇ 25ರಂದು ಹೆಬ್ರಿ ತಾಲೂಕು ಕಚೇರಿ ಮುಂಭಾಗ ನಡೆಯಲಿರುವ ಪ್ರತಿಭಟನೆಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೆಬ್ರಿ ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್ ಹಾಗೂ ಬಿಜೆಪಿ ಕಾರ್ಕಳ ಮಂಡಲದ ಪ್ರಧಾನ ಕಾರ್ಯದರ್ಶಿ ಸುರೇಶ ಶೆಟ್ಟಿ ಶಿವಪುರ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಸರಕಾರ ಆಡಳಿತಕ್ಕೆ ಬಂದ ಬಳಿಕ ಕುರ್ಚಿ ಗಲಾಟೆಯಲ್ಲಿಯೇ ಕಾಲ ಕಳೆಯುತ್ತಿದ್ದು, ಆಡಳಿತ ವೈಫಲ್ಯದಿಂದ ಜನ ಹೈರಾಣರಾಗಿದ್ದಾರೆ. ರಾಜ್ಯದಲ್ಲಿ ಸರ್ಕಾರದ ಯೋಜನೆಗಳು ಕೇವಲ ಘೋಷಣೆಗೆ ಸೀಮಿತವಾಗಿದೆಯೇ ಹೊರತು ಯಾವುದೂ ಕೂಡ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದವರು ತಿಳಿಸಿದರು.

ಸರಕಾರಿ ಕಚೇರಿಗಳಿಗೆ ಜಡ ಹಿಡಿದಿದೆ
94 ಸಿ ಅರ್ಜಿ, ಅಕ್ರಮ ಸಕ್ರಮ ಕಡತ ವಿಲೇವಾರಿ, ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇ ನಡೆಸುವಲ್ಲಿ ವಿಳಂಬವಾಗುತ್ತಿದೆ. ಇವೆಲ್ಲವನ್ನು ಕಾರ್ಕಳ ಶಾಸಕರು ಕೆಡಿಪಿ ಸಭೆಗಳಲ್ಲಿ ಪ್ರಸ್ತಾವಿಸಿದ್ದರೂ ಯಾವುದೇ ಬದಲಾವಣೆಯಾಗಲಿಲ್ಲ. ಅದಲ್ಲದೆ ಶಾಸಕರು ತಾಲೂಕು ಮಟ್ಟದಲ್ಲಿ ಪರಿಶೀಲನಾ ಸಭೆಗಳನ್ನು ಕರೆದು ಜನರ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಯಾವುದೇ ಸುಧಾರಣೆ ಕಾಣುತ್ತಿಲ್ಲ, ಈ ಸರ್ಕಾರದ ನಿರಂಕುಶ ಆಡಳಿತದಲ್ಲಿ ಸರ್ಕಾರಿ ಕಚೇರಿಗಳು ಸಂಪೂರ್ಣ ಜಡ ಸ್ಥಿತಿ ತಲುಪಿದ್ದು, ಈ ನಿರ್ಜೀವ ಸರ್ಕಾರದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಲಕ್ಷ್ಮೀನಾರಾಯಣ ನಾಯಕ್‌ ಆರೋಪಿಸಿದರು.

ಮಾಸಿಕ ಪಿಂಚಣಿಯೂ ವಿಳಂಬ
ರಾಜ್ಯ ಸರಕಾರದ ದಿವಾಳಿತನದ ಬಿಸಿ ಈಗ ಸಾಮಾನ್ಯ ಜನರ ಜೀವನಕ್ಕೂ ತಟ್ಟಿದೆ. ಈ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಂತೂ ಪ್ರಚಾರದ ವಸ್ತುಗಳಾಗಿ ಕೇವಲ ಜಾಹಿರಾತುಗಳಿಗೆ ಸೀಮಿತವಾಗಿ ಬಿಟ್ಟಿವೆ. ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತಿತರ ಮಾಸಿಕ ಪಿಂಚಣಿಗಳು ಸಹಾ ಸಮಯ ಸರಿಯಾಗಿ ಪಾವತಿಯಾಗುತ್ತಿಲ್ಲ ಎಂದು ಜನರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದರು.

















































error: Content is protected !!
Scroll to Top