ನವದೆಹಲಿ: ವಿವಾದಾತ್ಮಕ ಇಸ್ಲಾಮಿಕ್ ಧರ್ಮಪ್ರಚಾರಕ ಝಾಕಿರ್ ನಾಯಕ್‌ನ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (IRF) ಸಂಘಟನೆಯ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಮತ್ತೆ ಐದು ವರ್ಷಗಳ ಕಾಲ ವಿಸ್ತರಿಸಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ ಮತ್ತು ವೈಮನಸ್ಸು ಹರಡುವ ಚಟುವಟಿಕೆಗಳಿಗೆ ಸಂಘಟನೆ ಮತ್ತು ಅದರ ಸ್ಥಾಪಕ ಝಾಕಿರ್ ನಾಯಕ್ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬುದು ಸರ್ಕಾರದ ಆರೋಪ. ಇಂತಹ ಚಟುವಟಿಕೆಗಳು ದೇಶದ ಕೋಮು ಸೌಹಾರ್ದತೆ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟುಮಾಡಬಹುದು ಎಂದು ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದೆ.
ಐಆರ್‌ಎಫ್ ಸಂಘಟನೆಯ ಮೇಲಿನ ನಿಷೇಧ ಇನ್ನೂ ಐದು ವರ್ಷ ಮುಂದುವರಿಯಲಿದೆ. ಸಂಘಟನೆಯ ಹೆಸರಿನಲ್ಲಿ ಭಾರತದಲ್ಲಿ ಕಾನೂನುಬದ್ಧವಾಗಿ ಚಟುವಟಿಕೆ ನಡೆಸಲು ಸಾಧ್ಯವಿರುವುದಿಲ್ಲ. ಸಂಘಟನೆಯ ಚಟುವಟಿಕೆಗಳು ಮತ್ತು ಸದಸ್ಯರ ವಿರುದ್ಧದ ಆರೋಪಗಳ ಮೇಲೆ ಕಾನೂನು ಪ್ರಕ್ರಿಯೆಗಳು ಮುಂದುವರೆಯಬಹುದು.

2016ರಲ್ಲಿ ಆರಂಭವಾದ ಐಆರ್‌ಎಫ್ ಮೇಲಿನ ನಿಷೇಧಕ್ಕೆ ಈಗ ಮೂರನೇ ಬಾರಿ ವಿಸ್ತರಣೆ ದೊರೆತಿದೆ. ರಾಷ್ಟ್ರೀಯ ಭದ್ರತೆ ಮತ್ತು ಕೋಮು ಸೌಹಾರ್ದತೆಯ ವಿಚಾರಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.



























































