ಮೂಡುಬಿದಿರೆ: ತ್ಯಾಜ್ಯವನ್ನು ಸಮಸ್ಯೆಯಾಗಿ ನೋಡದೆ, ಮರುಬಳಕೆಯ ಮೂಲಕ ಸಂಪತ್ತಾಗಿ ಪರಿವರ್ತಿಸುವ ವೈಜ್ಞಾನಿಕ ಮನೋಭಾವವನ್ನು ಸಮಾಜದಲ್ಲಿ ಬೆಳೆಸುವ ಉದ್ದೇಶದಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಹಸಿರು ಸಂವಾದದ ಅಂಗವಾಗಿ ನಡೆದ ‘ತ್ಯಾಜ್ಯದಿಂದ ಸಂಪತ್ತು: ಆಹಾರ, ಇಂಧನ, ಗೊಬ್ಬರ ಮತ್ತು ಸಂಪನ್ಮೂಲ ಭದ್ರತೆಗೆ ವೃತ್ತಾಕಾರ ಆರ್ಥಿಕತೆ’ ಕುರಿತ ಕಾರ್ಯಕ್ರಮದಲ್ಲಿ ಆಳ್ವಾಸ್ನಲ್ಲಿ ವಿಶೇಷ ತ್ಯಾಜ್ಯ ನಿರ್ವಹಣಾ ಜ್ಞಾನ ಕೇಂದ್ರ ಸ್ಥಾಪಿಸುವ ಹಾಗೂ ವಿದ್ಯಾರ್ಥಿಗಳನ್ನು ಇಂದೋರ್ಗೆ ಕ್ಷೇತ್ರ ಅಧ್ಯಯನಕ್ಕೆ ಕಳುಹಿಸುವ ಯೋಜನೆಯನ್ನು ರೂಪಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿಪ್ಟನ್ ವೇಸ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಇಂದೋರ್ನ ನಿರ್ದೇಶಕ ಸುಧೀರ್ ಪುಲೋರಿಯಾ, ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಸೂಕ್ತ ಸ್ಥಳದಲ್ಲಿ ಸಂಗ್ರಹಿಸಿ, ಸಮರ್ಪಕವಾಗಿ ಸಂಸ್ಕರಿಸಿದಾಗ ಮಾತ್ರ ಅದಕ್ಕೆ ಸಂಪನ್ಮೂಲದ ಮೌಲ್ಯ ದೊರೆಯುತ್ತದೆ. ಇಲ್ಲವಾದಲ್ಲಿ ಮರುಬಳಕೆಯ ಸಾಮರ್ಥ್ಯ ಹೊಂದಿರುವ ವಸ್ತುಗಳೂ ಪರಿಸರಕ್ಕೆ ಹಾನಿ ಉಂಟುಮಾಡುವ ತ್ಯಾಜ್ಯವಾಗಿ ಪರಿಣಮಿಸುತ್ತವೆ. ಹೀಗಾಗಿ ತ್ಯಾಜ್ಯ ವಿಲೇವಾರಿಯಲ್ಲಿ ಜವಾಬ್ದಾರಿಯುತ ನಡವಳಿಕೆ ಹಾಗೂ ವೈಜ್ಞಾನಿಕ ನಿರ್ವಹಣಾ ವ್ಯವಸ್ಥೆ ಅತ್ಯಗತ್ಯ ಎಂದರು.
ಸಾಂಪ್ರದಾಯಿಕ ‘ಉತ್ಪಾದನೆ–ಬಳಕೆ–ವಿಲೇವಾರಿ’ ಆರ್ಥಿಕ ವ್ಯವಸ್ಥೆಯ ಬದಲಿಗೆ ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡಿ, ಬಳಕೆಯಲ್ಲಿರುವ ವಸ್ತುಗಳ ಮೌಲ್ಯವನ್ನು ಉಳಿಸಿಕೊಳ್ಳುವ ವೃತ್ತಾಕಾರ ಆರ್ಥಿಕ ವ್ಯವಸ್ಥೆಯ ಅಗತ್ಯವನ್ನು ವಿವರಿಸಿದರು. ತೇವ, ಒಣ, ಗೃಹಬಳಕೆಯ ಅಪಾಯಕಾರಿ ಮತ್ತು ಸ್ಯಾನಿಟರಿ ತ್ಯಾಜ್ಯವನ್ನು ಮೂಲದಲ್ಲಿಯೇ ಪ್ರತ್ಯೇಕಿಸುವುದು ಪರಿಣಾಮಕಾರಿ ನಿರ್ವಹಣೆಯ ಮೊದಲ ಹೆಜ್ಜೆಯಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದ ಮರುಸಂಸ್ಕರಣೆ ಹಾಗೂ ಸಾವಯವ ತ್ಯಾಜ್ಯದಿಂದ ಕಾಂಪೋಸ್ಟ್ ಮತ್ತು ಜೈವಿಕ ಅನಿಲ ಉತ್ಪಾದನೆಯ ಮೂಲಕ ತ್ಯಾಜ್ಯವನ್ನು ಉಪಯುಕ್ತ ಸಂಪನ್ಮೂಲವಾಗಿ ಪರಿವರ್ತಿಸಬಹುದು ಎಂದು ಹೇಳಿದರು.
ತ್ಯಾಜ್ಯ ನಿರ್ವಹಣೆ ಯಶಸ್ವಿಯಾಗಲು ಸಂಸ್ಕರಣಾ ಘಟಕಗಳ ಸ್ಥಾಪನೆಯಷ್ಟೇ ಸಾಕಾಗುವುದಿಲ್ಲ. ಮೂಲ ವಿಂಗಡಣೆ, ಪ್ರತ್ಯೇಕ ಸಂಗ್ರಹಣೆ, ವೈಜ್ಞಾನಿಕ ಸಂಸ್ಕರಣೆ, ಉತ್ಪನ್ನಗಳ ಗುಣಮಟ್ಟ ಮತ್ತು ಅವುಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವವರೆಗೆ ಸಮಗ್ರ ವ್ಯವಸ್ಥೆ ರೂಪುಗೊಳ್ಳಬೇಕು. ಇದಕ್ಕೆ ಸ್ಥಳೀಯ ಸಂಸ್ಥೆಗಳು, ಉದ್ಯಮಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಮಾತನಾಡಿ, ಹಸಿರು ಸಂವಾದದ ಆಶಯಕ್ಕೆ ಅನುಗುಣವಾಗಿ ಪರಿಸರ ಸಂರಕ್ಷಣೆಯನ್ನು ಜನಾಂದೋಲನವಾಗಿಸುವುದು, ತ್ಯಾಜ್ಯ ನಿರ್ವಹಣೆಯಲ್ಲಿ ಸಮುದಾಯದ ಹೊಣೆಗಾರಿಕೆಯನ್ನು ಹೆಚ್ಚಿಸುವುದು ಹಾಗೂ ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಹತ್ವದ್ದಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮೂಡುಬಿದಿರೆ ಸುತ್ತಮುತ್ತಲಿನ ವಿವಿಧ ಉದ್ಯಮಗಳು ಮುಖ್ಯಸ್ಥರು, ಪರಿಸರ ಹೋರಾಟಗಾರರು, ಹಸಿರು ಸಂವಾದ ಆಂದೋಲನದ ಕಾರ್ಯಕರ್ತರು ಇದ್ದರು.





























































