83 ಶೇ. ಪಶ್ಚಿಮ ಘಟ್ಟ ಅರಣ್ಯ ಪ್ರದೇಶ ಸಂರಕ್ಷಿತ : ಅರಣ್ಯ ಒತ್ತುವರಿ ತೆರವು

ಕಾರ್ಕಳ : ಪಶ್ಚಿಮ ಘಟ್ಟದ ಶೇ. 83 ಅರಣ್ಯ ಪ್ರದೇಶ ಸಂರಕ್ಷಿತವಾಗಿದೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಅವರು ಮೇ 25 ರಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ‌ ಕುದುರೆಮುಖ ವನ್ಯಜೀವಿ ಉಪವಿಭಾಗ ಕಾರ್ಕಳ ಹಾಗೂ ವಲಯ ಅರಣ್ಯಾಧಿಕಾರಿ ಪ್ರಾದೇಶಿಕ ವಲಯ ಕಾರ್ಕಳ ಇದರ ಕಚೇರಿ ಕಟ್ಟಡ ಉದ್ಘಾಟಿಸಿ ಬಳಿಕ ಮಾಧ್ಯಮದವರಿಗೆ ತಿಳಿಸಿದರು.
ಮೀಸಲು ಅರಣ್ಯ, ವನ್ಯಜೀವಿಧಾಮಗಳು, ರಾಷ್ಟ್ರೀಯ ಉದ್ಯಾವನಗಳು, ನದಿ ಮೂಲಗಳು, ವಿವಿಧ ಪ್ರಬೇಧದ ಸಸ್ಯಗಳು, ಪಕ್ಷಿ, ಪ್ರಾಣಿ ಸಂಕುಲಗಳಿಂದ ಕೂಡಿರುವ ಶೇ. 83% ರಷ್ಟು ಪಶ್ಚಿಮ ಘಟ್ಟ ಪ್ರದೇಶ ಸುರಕ್ಷಿತವಾಗಿದೆ ಎಂದರು.

ಒತ್ತುವರಿ ತೆರವು
ಅರಣ್ಯ, ಪರಿಸರ, ಪ್ರಕೃತಿ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ವಿಶ್ವದಲ್ಲೇ ಎಂಟನೇ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿರುವ ಪಶ್ಚಿಮ ಘಟ್ಟವನ್ನು ವಿವಿಧ ಹಂತದಲ್ಲಿ ಸಂರಕ್ಷಿಸಲಾಗಿದೆ. ರಾಜ್ಯದ ವಿವಿಧ ಅರಣ್ಯ ಭಾಗದಲ್ಲಿ ಒತ್ತುವರಿಯಾದ ಪ್ರದೇಶವನ್ನು ತೆರವು ಮಾಡಲಾಗುತ್ತಿದೆ. ಪ್ರಾಣಿ ಮಾನವ ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಗಣಿಗಾರಿಕೆಯಿಲ್ಲ
ಕುದುರೆಮುಖ ಕಬ್ಬಿಣದ ಅದಿರು ಕಂಪನಿ (KIOCL) ವಿರುದ್ಧ ದಂಡದ ಕ್ರಮ ಕೈಗೊಳ್ಳಲಾಗಿದ್ದು, ದಂಡ ಪಾವತಿಗೆ ಸಮಯವನ್ನು ನೀಡಲಾಗಿದೆ ಎಂದ ಅವರು ಕುದುರೆಮುಖ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ, ಮುಂದೆಯೂ ನಡೆಯುವುದಿಲ್ಲ ಎಂದರು.

ಹಿಂದಿನ ಸರಕಾರದ ತಪ್ಪು
ಯಾವ ಭೂಮಿ ಯಾವ ವ್ಯಾಪ್ತಿಗೊಳಪಡುತ್ತದೆ ಎಂಬುದನ್ನು ಸರಿಯಾಗಿ ಸಮೀಕ್ಷೆ ಮಾಡದೇ 2022ರಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆ ಗಡಿಬಿಡಿಯಲ್ಲಿ ಸಮೀಕ್ಷೆ ನಡೆಸಿ ಸರ್ವೋಚ್ಛ ನ್ಯಾಯಾಲಯಕ್ಕೆ 3 ಲಕ್ಷ 30 ಸಾವಿರ ಹೆಕ್ಟೇರ್ ಡೀಮ್ಡ್ ಫಾರೆಸ್ಟ್‌ ಎಂದು ವರದಿ ನೀಡಿದೆ. ಈ ಹಿಂದಿನ ಸರಕಾರ ಮಾಡಿರುವಂತಹ ಈ ತಪ್ಪಿನಿಂದಾಗಿ ಸಮಸ್ಯೆ ತಲೆದೋರಿದೆ. ಅನೇಕ ಗ್ರಾಮಗಳು, ಸರಕಾರಿ ವಸತಿ ನಿಲಯಗಳು, ಶಾಲೆಗಳು, ಅಂಗನವಾಡಿಗಳು ಸೇರಿದಂತೆ ಪಟ್ಟಣ ಪ್ರದೇಶ ಪಕ್ಕದಲ್ಲಿರುವ ಭೂಮಿಯೆಲ್ಲಾ ಡೀಮ್ಡ್‌ ಆಗಿದ್ದು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ, ಪ್ರಾದೇಶಿಕ ಮಟ್ಟದಲ್ಲಿ ಪ್ರಾದೇಶಿಕ ಆಯುಕ್ತರ ಮತ್ತು ರಾಜ್ಯ ಮಟ್ಟದಲ್ಲಿ ಅರಣ್ಯ ಇಲಾಖೆಯ ಅಪರ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಮಾಡಬೇಕೆಂದು ಈಗಾಗಲೇ ಆದೇಶಿಸಲಾಗಿದೆ. ಇದೀಗ ಶೇ. 65ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಸಮೀಕ್ಷೆ ಪೂರ್ಣಗೊಂಡ ಬಳಿಕ ಡೀಮ್ಡ್‌ ಫಾರೆಸ್ಟ್‌ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ರಾಜ್ಯ ಕೀಟ – ರಾಜ್ಯ ಉಭಯಜೀವಿ
ಮರಗಂತಿ ಕಪ್ಪೆಯನ್ನು ರಾಜ್ಯ ಉಭಯ ಜೀವಿ ಮತ್ತು ತುಡುವೆ ಜೇನನ್ನು ರಾಜ್ಯ ಕೀಟ ಎಂಬುದಾಗಿ ಅಧಿಕೃತವಾಗಿ ಘೋಷಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು.

40 ಲಕ್ಷ ರೂ. ವೆಚ್ಚ
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ‌ ಕುದುರೆಮುಖ ವನ್ಯಜೀವಿ ಉಪವಿಭಾಗ ಕಾರ್ಕಳ ಹಾಗೂ ವಲಯ ಅರಣ್ಯಾಧಿಕಾರಿ ಪ್ರಾದೇಶಿಕ ವಲಯ ಕಟ್ಟಡಗಳು ತಲಾ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ.

ಚೆಂಡೆ ತಂಡದೊಂದಿಗೆ ಕುಶಲೋಪರಿ
ಸಮಾರಂಭದಲ್ಲಿ ಚೆಂಡೆ ಬಾರಿಸಲು ಆಗಮಿಸಿದ ಶ್ರೀ ವಿಷ್ಣುಮೂರ್ತಿ ಮಹಿಳಾ ಚೆಂಡೆ ಬಳಗದ ಬಳಿ ತೆರಳಿದ ಖಂಡ್ರೆಯವರು ತಾವೇನು ಮಾಡುತ್ತಿದ್ದೀರಿ ? ಪೂರ್ಣ ಅವಧಿ ಇದೇ ಉದ್ಯೋಗವೇ ಎಂದು ಆತ್ಮೀಯತೆಯಿಂದಲೇ ವಿಚಾರಿಸಿದರು. ಈ ವೇಳೆ ಅಲ್ಲಿದ್ದ ಅರಣ್ಯ ಅಧಿಕಾರಿಯೋರ್ವರಲ್ಲಿ ಚೆಂಡೆ ತಂಡಕ್ಕೆ ಎಷ್ಟು ಪಾವತಿ ಮಾಡುತ್ತೀರಿ ಎಂದು ಕೇಳಿದರು. ಆಗ 10 ಸಾವಿರ ರೂ. ಎಂದು ಉತ್ತರಿಸಿದಾಗ (6 ಸಾವಿರಕ್ಕೆ ನಿಗದಿಯಾಗಿದ್ದು) ಇನ್ನೈದು ಸಾವಿರ ಸೇರಿಸಿ 15 ಸಾವಿರ ರೂ. ನೀಡಿ ಎಂದು ತಿಳಿಸಿದ ಸಚಿವರು ಬಳಿಕ ಚೆಂಡೆ ಬಾರಿಸಿ ಸಂಭ್ರಮಿಸಿದರು. ಸಚಿವರು ತಮ್ಮ ಬಳಿ ಬಂದು ಕುಶಲೋಪರಿ ಮಾತನಾಡಿಸಿ ಚೆಂಡೆ ಬಾರಿಸಿರುವುದು ಚೆಂಡೆ ತಂಡ ಸದಸ್ಯರನ್ನೂ ಪುಳಕಿತಗೊಳಿಸಿತು.

ಮನವಿ
ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ಇಂಟಕ್‌ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ ಅವರು ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ ಪರಿಹರಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.

ಆರ್‌ಎಫ್‌ಓ ಪ್ರಭಾಕರ್‌ ಕುಲಾಲ್‌ ಅವರಿಗೆ ಅಭಿನಂದನೆ

ಕಾರ್ಕಳ ತಹಶೀಲ್ದಾರ್‌ ಪ್ರದೀಪ್‌ ಆರ್‌., ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ತ್ರಿಪಾಠಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಳನ್ ಮತ್ತು ಕಮಲಾ ಕರಿಕಳನ್ ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್‌ ಹೆಗ್ಡೆ ಮಾಳ,‌ ಕುಂದಾಪುರ ಉಪ ಅರಣ್ಯ ಸಂರಣ್ಯಾಧಿಕಾರಿ ರುತ್ರೇನ್‌, ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು, ಮೂಡುಬಿದಿರೆ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ‌ ಪಿ. ಶ್ರೀಧರ್, ಕುದುರೆಮುಖ ವನ್ಯಜೀವಿ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ‌ ಹಾಗೂ ತಾಂತ್ರಿಕ ಸಹಾಯಕ ಸತೀಶ್‌ ಎನ್.‌, ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶುಭದ ರಾವ್‌, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಪಿನಾಥ್‌ ಭಟ್‌, ಕಾರ್ಕಳ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಅರುಣ್‌ ಸಿ., ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಸುಬ್ರಮಣ್ಯ ಆಚಾರ್ಯ, ವಿವಿಧ ಇಲಾಖಾ ಅಧಿಕಾರಿಗಳು, ಅರಣ್ಯ ಇಲಾಖಾ ಸಿಬ್ಬಂದಿ ಉಪಸ್ಥಿತರಿದ್ದರು.









































































error: Content is protected !!
Scroll to Top