ಕಾರ್ಕಳ : ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಡೆಯುವ ಗೋಹತ್ಯೆಯನ್ನು ತಡೆಗಟ್ಟುವ ಸಲುವಾಗಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಿಂದೂ ಜಾಗರಣ ವೇದಿಕೆ ಮೇ 26ರಂದು ಮನವಿ ಸಲ್ಲಿಸಿದೆ.
ಗೋ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ, ನಂಬಿಕೆಗಳಿಗೆ ವಿರುದ್ಧವಾಗಿ ಇಲ್ಲಿನ ಮುಸಲ್ಮಾನರು ನಡೆದುಕೊಳ್ಳುತ್ತಿದ್ದಾರೆ. ಹಬ್ಬದ ಹೆಸರಿನಲ್ಲಿ ತಾಯಿಯ ಸ್ಥಾನದಲ್ಲಿರುವ ಗೋವನ್ನು ವಧೆ ಮಾಡುತ್ತಿದ್ದಾರೆ. ಗೋವು ನಮಗೆ ಒಂದು ಪ್ರಾಣಿ ಅಲ್ಲ, ಅದು ನಮ್ಮ ಶ್ರದ್ದೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವಿನ ಹತ್ಯೆ ನಡೆಯುವ ಶಂಕೆಯಿರುವುದರಿಂದ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಆಗ್ರಹಿಸಿದ್ದಾರೆ.
ಗೋ ಹತ್ಯೆ ಪ್ರತಿಬಂಧಕ ನಿಯಮ 2021ರ ಅಡಿಯಲ್ಲಿ ಗೋ ಹತ್ಯೆಯನ್ನು ಮಾಡುತ್ತಿರುವವರ, ಅವರಿಗೆ ಸಹಕಾರ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಮತ್ತು ಬಂಧನಕ್ಕೊಳಗಾಗುವ ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಬೇಕೆಂದು ಆಗ್ರಹಿಸಿರುವ ಹಿಂದೂ ಜಾಗರಣ ವೇದಿಕೆ ಬಕ್ರಿದ್ ಸಂದರ್ಭದಲ್ಲಿ ಯಾವುದೇ ಕಾನೂನು ವಿರೋಧಿ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳುವಂತೆ ವಿನಂತಿಸಿದೆ.
ಈ ಸಂದರ್ಭ ಹಿಂದೂ ಮುಖಂಡರಾದ ರಾಜೇಶ್ ಉಚ್ಚಿಲ, ರತ್ನಾಕರ ಅಮೀನ್, ರಮೇಶ್ ಕಲ್ಲೊಟ್ಟೆ, ಉಮೇಶ್ ಪಕ್ಕಳ, ಉಮೇಶ ಸೂಡ, ನಿಖಿಲ್ ಮಂಚಿ, ಹರೀಶ್ ಬಜಗೋಳಿ ಹಾಗೂ ಸುನಿಲ್ ಉಪಸ್ಥಿತರಿದ್ದರು.


























