ಡಿಸೆಂಬರ್‌ನಲ್ಲಿ ರೆಡಿಯಾಗಲಿದೆ ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ

0

ಉಡುಪಿ, ಜು. 27: ಬನ್ನಂಜೆಯಲ್ಲಿ 31.34 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮುಂಬರುವ ಡಿಸೆಂಬರ್‌ಗಾಗುವಾಗ ಸಿದ್ಧವಾಗಲಿದೆ. ಲಾಕ್‌ ಡೌನ್‌ ಸಡಿಲಿಕೆಯಾದ ಬಳಿಕ ಬಸ್‌  ನಿಲ್ದಾಣದ ಕಾಮಗಾರಿ  ಭರದಿಂದ ನಡೆಯುತ್ತಿದೆ.

ಉಡುಪಿ ನಗರಕ್ಕೆ ಸುಸಜ್ಜಿತ  ಸರಕಾರಿ ಬಸ್‌ ನಿಲ್ದಾಣ  ಬೇಕು  ಎನ್ನುವುದು  ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬನ್ನಂಜೆಯಲ್ಲಿ 2.5 ಎಕ್ಕರೆ ನಿವೇಶನವನ್ನು ಇದಕ್ಕಾಗಿ ಗುರುತಿಸಲಾಗಿತ್ತು.

ಇಂಗ್ಲೀಶ್ನ T ಅಕ್ಷರದ ಆಕಾರದಲ್ಲಿ ಎರಡು  ಮಹಡಿಯ ಆಕರ್ಷಣೀಯ ಬಸ್‌ ನಿಲ್ದಾಣ  ಕಟ್ಟಡ ನಿರ್ಮಾಣವಾಗುತ್ತಿದೆ.

ಪ್ರಸ್ತುತ ನಗರದೊಳಗೆ ಸರ್ವಿಸ್‌ ಬಸ್‌ ನಿಲ್ದಾಣದ ಹತ್ತಿರವೇ ಇರುವ ಸರಕಾರಿ ಬಸ್‌ ನಿಲ್ದಾಣ  ಬಹಳ ಇಕ್ಕಟ್ಟಾಗಿದೆ. ವಿಶ್ವೇಶ್ವರಯ್ಯ ಮಾರುಕಟ್ಟೆ ಸಂಕೀರ್ಣದಲ್ಲಿರುವ ಈ ಬಸ್‌ ನಿಲ್ದಾಣಕ್ಕೆ ಪ್ರವೇಶಿಸುವಾಗ ಮತ್ತು  ಹೊರ ಬರುವಾಗ  ಚಾಲಕರು ಬಹಳ  ಪ್ರಯಾಸಪಡಬೇಕಾಗುತ್ತದೆ.

ಹೊಸ ಬಸ್‌ ನಿಲ್ದಾಣ ವಿಶಾಲವಾಗಿರುವುದಲ್ಲದೆ ರಾಷ್ಟ್ರೀಯ ಹೆದ್ದಾರಿಗೂ ಹತ್ತಿರದಲ್ಲಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಸುಸಜ್ಜಿತ ಬಸ್‌ ನಿಲ್ದಾಣವಿಲ್ಲದೆ ಉಡುಪಿಯಲ್ಲಿ ಪ್ರಯಾಣಿಕರಿಗೆ ಬಹಳ  ಅನನುಕೂಲವಾಗುತ್ತಿತ್ತು. ಈಗಿರುವ ಬಸ್‌ ನಿಲ್ದಾಣವನ್ನು 15  ವರ್ಷದ ಹಿಂದೆ ಉಡುಪಿ ನಗರಸಭೆ ಕರ್ನಾಟಕ ನಗರಾಭಿವೃದ್ಧಿ ಮತ್ತು ಕರಾವಳಿ ಪರಿಸರ ಯೋಜನೆಯಡಿ (ಕುಡ್ಸೆಂಪ್)‌ ನಿರ್ಮಿಸಿದೆ. ಈ ಬಸ್‌  ನಿಲ್ದಾಣವನ್ನು  ಬಳಸುವುದಕ್ಕೆ ನಗರಸಭೆಗೆ ಕೆಎಸ್‌ಆರ್‌ ಟಿಸಿ ಬಾಡಿಗೆ  ಪಾವತಿಸುತ್ತದೆ.

ಹೊಸ ಬಸ್‌ ನಿಲ್ದಾಣ ಡಿಸೆಂಬರ್‌ ಅಂತ್ಯದೊಳಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಮಂಗಳೂರು ವಿಭಾಗದ ಮೂಲಗಳು ತಿಳಿಸಿವೆ.

ಕೊರೊನಾ ಹಾವಳಿ  ಮುಗಿದ ಬಳಿಕ ಉಡುಪಿಗೆ ಸುಮಾರು 250 ಸರಕಾರಿ ಬಸ್‌ಗಳು ಬಂದು ಹೋಗುತ್ತವೆ. ಈ ಪೈಕಿ ಸುಮಾರು 25 ಬಸ್‌ಗಳು ಉಡುಪಿ ಡಿಪೋಕ್ಕೆ ಸೇರಿವೆ.

ಹಿನ್ನೋಟ

ಬನ್ನಂಜೆಯ 2.5 ಎಕ್ಕರೆ ನಿವೇಶನವನ್ನು ಲೋಕೋಪಯೋಗಿ ಇಲಾಖೆ 2016, ಜೂನ್‌ 20ರಂದು ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸಿದೆ. 2018 ನವಂಬರ್‌ ನಲ್ಲಿ ಹೊಸ ಬಸ್‌ ನಿಲ್ದಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿತ್ತು.

ಏನೇನಿದೆ ?

ಹೊಸ ಬಸ್‌  ನಿಲ್ದಾಣದಲ್ಲಿ 20 ಬಸ್‌ಬೇಗಳಿವೆ.ಮೊದಲ ಮತ್ತು ಎರಡನೇ ಮಹಡಿಯಲ್ಲಿ ಶಾಪಿಂಗ್‌ ಕಾಂಪ್ಲೆಕ್ಸ್‌ ಇರುತ್ತದೆ. 60 ಕಾರುಗಳಿಗೆ ಪಾರ್ಕಿಂಗ್‌ ಸ್ಥಳಾವಕಾಶವಿದೆ. ಶೌಚಾಲಯ, ವಿಶ್ರಾಮ ಕೊಠಡಿ  ಸೇರಿ ಎಲ್ಲ ಅಗತ್ಯ ಮೂಲಸೌಕರ್ಯಗಳಿರುತ್ತವೆ ಎಂದು ಮಂಗಳೂರು ವಿಭಾಗೀಯ ನಿಯಂತ್ರಕ  ಅರುಣ್‌ ಕುಮಾರ್‌ ತಿಳಿಸಿದ್ದಾರೆ.

Previous articleನಿಗಮ ಮಂಡಳಿಗಳಿಗೆ ನೇಮಕ
Next articleನಾಲ್ಕೇ ತಾಸಿನಲ್ಲಿ ಹೋಯಿತು ಲಾಲಾಜಿ ಮೆಂಡನ್‌ ನಿಗಮ ಅಧ್ಯಕ್ಷ ಹುದ್ದೆ

LEAVE A REPLY

Please enter your comment!
Please enter your name here