ಉಡುಪಿ, ಆ. 2 : ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರದಲ್ಲಿ ಪ್ರತಿಯೊಬ್ಬ ಭಾರತೀಯನ ಯಥಾನು ಶಕ್ತಿ ಯಥಾನು ಭಕ್ತಿ ಯೋಗದಾನ ಇರಬೇಕೆಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದರು. ನಮ್ಮ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಧನಸಹಾಯ ಮಾಡಬೇಕು. ಪ್ರತಿ ಮನೆಯಿಂದ 101 ರೂಪಾಯಿಯಂತೆ ನೀಡಿ ಸಹಕರಿಸಿದರೆ ಭವ್ಯ ಮಂದಿರ ನಿರ್ಮಾಣವಾಗುತ್ತದೆ ಎಂದು ಸ್ವಾಮೀಜಿ ಮನವಿ ಮಾಡಿದರು.
ಜಗತ್ತಿನ ಕೋಟ್ಯಂತರ ಆಸ್ತಿಕ ಜನರ ಬಹುವರ್ಷಗಳ ಶ್ರಮದ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯ ಆ. 5ರಂದು ಪ್ರಾರಂಭವಾಗಲಿದ್ದು, ಅಂದು ದೇಶದ ಪ್ರತಿ ಧರ್ಮಶ್ರದ್ಧೆಯುಳ್ಳ ಮನೆ, ಮನಸ್ಸುಗಳಲ್ಲಿ ಶ್ರೀರಾಮ ಹಾಗೂ ಹನುಮರ ಭಕ್ತಿಗಳು ನ್ಯಾಸಗೊಳ್ಳಬೇಕು. ಮಂದಿರದಲ್ಲಿ ಸೀತಾ, ರಾಮ ಬಿಂಬಪ್ರತಿಷ್ಠೆಯವರೆಗೆ ನಿತ್ಯವೂ ಜಾಗೃತವಾಗಿರಬೇಕು’ ಎಂದು ಅಯೋಧ್ಯೆ ಶ್ರೀರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥಮಂಡಳಿ ಸದಸ್ಯರೂ ಆಗಿರುವ ಸ್ವಾಮೀಜಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಈ ಧರ್ಮಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸುವರು. ದೇಶದ ಇತಿಹಾಸದಲ್ಲಿ ಸ್ಮರಣೀಯ ದಿನವಾಗಿ ಇದು ದಾಖಲಾಗಲಿದೆ. ಪ್ರತಿಯೊಬ್ಬರೂ ಮನೆಯಲ್ಲಿಯೇ ನೇರಪ್ರಸಾರದ ಮೂಲಕ ಕಣ್ತುಂಬಿಕೊಳ್ಳಬೇಕು. ನಿತ್ಯ ಶ್ರೀರಾಮ, ಹನುಮರ ಸ್ಮರಣೆ ನಡೆಸಬೇಕು ಎಂದರು.