ಉಡುಪಿ: ಹೆಚ್ಚುತ್ತಿರುವ ಮನೆಗಳ್ಳತನ ತಡೆ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಜಾರಿಗೆ ಬಂದಿದೆ. ಈಗಾಗಲೇ ಬೆಳಗಾವಿ, ಶಿವಮೊಗ್ಗ, ಮೈಸೂರು ಜಿಲ್ಲೆಯಲ್ಲಿ ಜಾರಿಯಲ್ಲಿದ್ದು ಉಡುಪಿಗೂ ಈ ವಿನೂತನ ಯೋಜನೆ ವಿಸ್ತರಿಸಿದೆ. ಮನೆ ಮಂದಿ ಬೀಗ ಹಾಕಿ ಯಾವುದೇ ಊರಿಗೆ ಹೋಗುವುದಾರೂ ಯಾವ ದಿನದಿಂದ ಯಾವ ದಿನವರೆಗೆ ಮನೆ ಲಾಕ್ ಮಾಡಿ ಹೋಗುವಿರಿ ಎನ್ನುವ ಮಾಹಿತಿಯನ್ನು ಹೆಸರು, ಮನೆ ಹೆಸರು, ಮೊಬೈಲ್ ಸಂಖ್ಯೆ/ ಬದಲಿ ಮೊಬೈಲ್ ಸಂಖ್ಯೆ, ವಿಳಾಸ ಸಹಿತವಾಗಿ ಇಲಾಖೆಗೆ ನೀಡಬೇಕು. 9480805400 ಸಂಖ್ಯೆಗೆ ಮನೆಯ ಫೊಟೋವನ್ನು (ಸೆಲ್ಛಿ) ಜಿಪಿಎಸ್ ಸಹಿತವಾಗಿ ಅಪ್ಲೋಡ್ ಮಾಡಬೇಕು, 0820 2526709 ಸಂಖ್ಯೆಗೆ ಕರೆ ಮಾಡಿಯೂ ತಿಳಿಸಬಹುದು. ಈ ನಿಟ್ಟಿನಲ್ಲಿ ಸ್ಟೇಶನಿಗೆ ಅರ್ಜಿ ಹಿಡಿದು ಅಲೆಯಬೇಕಾಗಿಲ್ಲ. ಈ ಬಗ್ಗೆ ಎಸ್ಪಿ ಕಚೇರಿಯ ನಿಯಂತ್ರಣ ಕೊಠಡಿ ನಿಗಾ ವಹಿಸಲಿದೆ. ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ.
ಉಡುಪಿ ಜಿಲ್ಲೆಯ 22 ಪೊಲೀಸ್ ಠಾಣೆ ವ್ಯಾಪ್ತಿಯ ಡೇ ಬೀಟ್ ಪೊಲೀಸರು ಹಾಗೂ ರಾತ್ರಿ 11ರಿಂದ ಬೆಳಗ್ಗೆ 5ರ ತನಕ ನೈಟ್ ಬೀಟ್ ಪೊಲೀಸರು ಎರಡು ಬಾರಿ ಲಾಕ್ ಮಾಡಿದ ಮನೆಗೆ ಭೇಟಿ ನೀಡಿ ಜಿಪಿಎಸ್ ಫೋಟೊ ತೆಗೆದು ಕಂಟ್ರೋಲ್ ರೂಮಿಗೆ ರವಾನಿಸುತ್ತಾರೆ. ಸುರಕ್ಷತೆಯ ಬಗ್ಗೆ ಖಾತರಿ ನೀಡುತ್ತಾರೆ. ರಾಜ್ಯದಾದ್ಯಂತ ಹಂತ ಹಂತವಾಗಿ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಜಾರಿಯಾಗಲಿದ್ದು ಉಡುಪಿಯಲ್ಲಿ ಯೋಜನೆಗೆ ಮೇ 5ರಂದು ಚಾಲನೆ ನೀಡಲಾಗಿದೆ. ಈ ಸೇವೆ ವೈಯಕ್ತಿಕ ಮನೆಗಳಿಗಷ್ಟೇ ಲಭ್ಯ, ಬಹುಮಹಡಿ ಕಟ್ಟಡ/ಫ್ಲ್ಯಾಟ್‌ಗಳಿಗೆ ಇರುವುದಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಮನೆಯ ಮಾಹಿತಿಯನ್ನು ಅನಧಿಕೃತ, ಅಪರಿಚಿತ ಸಂಖ್ಯೆಗಳ ಜತೆ ಹಂಚಬಾರದು ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ತಿಳಿಸಿದೆ.

























