ರೈಲು ಟಿಕೆಟ್‌ ಗ್ರೂಪ್‌ ಬುಕ್ಕಿಂಗ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ

ನೈಋತ್ಯ ರೈಲ್ವೆಯಿಂದ ಹಲವು ಹೊಸ ಸೌಲಭ್ಯಗಳೊಂದಿಗೆ ಪ್ರಯಾಣಿಕಸ್ನೇಹಿ ವ್ಯವಸ್ಥೆ

ಬೆಂಗಳೂರು : ಮದುವೆ, ಪ್ರವಾಸ, ಕ್ರೀಡಾಕೂಟ ಅಥವಾ ಇತರ ಕಾರ್ಯಕ್ರಮಗಳಿಗೆ ಗುಂಪಾಗಿ ರೈಲಿನಲ್ಲಿ ಪ್ರಯಾಣಿಸುವವರಿಗೆ ನೈಋತ್ಯ ರೈಲ್ವೆ ಸಿಹಿ ಸುದ್ದಿ ನೀಡಿದೆ. ಗುಂಪು ಅಥವಾ ಬಲ್ಕ್ ಬುಕಿಂಗ್‌ಗೆ ಸಂಬಂಧಿಸಿದ ನಿಯಮಗಳನ್ನು ಸರಳಗೊಳಿಸಿದ್ದು, ಹಿಂದಿನ ಎಲ್ಲ ಮಾರ್ಗಸೂಚಿಗಳನ್ನು ರದ್ದುಪಡಿಸಿ ಹೊಸ ಮಾರ್ಗಸೂಚಿ ಹೊರಡಿಸಿದೆ.

ಮದುವೆ ಸಮಾರಂಭಗಳಿಗೆ ಹೋಗುವವರು, ವಿದ್ಯಾರ್ಥಿಗಳು, ಯಾತ್ರಿಕರು, ಕ್ರೀಡಾ ತಂಡಗಳು ಮತ್ತು ಸಾಂಸ್ಕೃತಿಕ ಗುಂಪುಗಳಂತೆ ನಿರ್ದಿಷ್ಟ ಉದ್ದೇಶಕ್ಕಾಗಿ ಪ್ರಯಾಣಿಸುವ ಅಧಿಕೃತ ಗುಂಪುಗಳಿಗೆ ಈ ಸೌಲಭ್ಯ ಸಿಗಲಿದೆ. ಟಿಕೆಟ್ ದೃಢಪಟ್ಟಿರಲಿ, ಆರ್‌ಎಸಿ ಇರಲಿ ಅಥವಾ ವೈಟಿಂಗ್‌ ಲಿಸ್ಟ್‌ನಲ್ಲಿರಲಿ ಎಲ್ಲ ದರ್ಜೆಗಳಿಗೂ ಇದು ಅನ್ವಯಿಸುತ್ತದೆ.

ಮುಂಗಡ ಕಾಯ್ದಿರಿಸುವಿಕೆ ಆರಂಭವಾದ ಒಂದು ಗಂಟೆಯ ನಂತರ, ಅಂದರೆ ಬೆಳಗ್ಗೆ 9 ಗಂಟೆಯಿಂದ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ಗುಂಪು ಬುಕಿಂಗ್‌ಗೆ ಅವಕಾಶ ಇರುತ್ತದೆ.

ಬರ್ತ್‌ ಮಿತಿ ರದ್ದು

ಈ ಬಾರಿಯ ಪ್ರಮುಖ ಬದಲಾವಣೆ ಇದು. ಗುಂಪು ಕಾಯ್ದಿರಿಸುವಿಕೆಯಲ್ಲಿ ನೀಡಬಹುದಾದ ಬರ್ತ್‌ಗಳ ಸಂಖ್ಯೆಗೆ ಇದ್ದ ಗರಿಷ್ಠ ಮಿತಿಯನ್ನು ತೆಗೆದುಹಾಕಲಾಗಿದೆ. ಈ ಹಿಂದಿನ ನಿಯಮ ಮತ್ತು ಮಿತಿಗಳನ್ನು ಹಿಂಪಡೆಯಲಾಗಿದೆ. ಈಗ ಮುಖ್ಯ ಕಾಯ್ದಿರಿಸುವಿಕೆ ಮೇಲ್ವಿಚಾರಕರು (ಸಿಆರ್‌ಎಸ್) ಅಥವಾ ನಿಲ್ದಾಣ ವ್ಯವಸ್ಥಾಪಕರು ಗುಂಪು ಕಾಯ್ದಿರಿಸುವಿಕೆಗೆ ಅನುಮತಿ ನೀಡುವ ಅಧಿಕಾರ ಹೊಂದಿರುತ್ತಾರೆ.

ಗ್ರೂಪ್ ಬುಕಿಂಗ್ ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿದಾರರು ತಮ್ಮ ಅರ್ಜಿಯನ್ನು ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು. ವಿದೇಶಿ ಪ್ರವಾಸಿಗರು ಅಥವಾ ಅನಿವಾಸಿ ಭಾರತೀಯರ ಬುಕಿಂಗ್ ಹೊರತುಪಡಿಸಿ, ಉಳಿದ ಯಾವುದೇ ಸಂದರ್ಭದಲ್ಲಿ ಟ್ರಾವೆಲ್ ಏಜೆಂಟ್‌ಗಳ ಮೂಲಕ ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿಯಲ್ಲಿ ಎಲ್ಲ ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ ಮತ್ತು ವಿಳಾಸ ನೀಡುವುದು ಕಡ್ಡಾಯ. ಪ್ರಯಾಣದ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಬೇಕು. ಉದ್ದೇಶ ನಮೂದಿಸದಿದ್ದರೆ ಅನುಮತಿ ಸಿಗುವುದಿಲ್ಲ.

ಹಿಂದಿರುಗುವ ಪ್ರಯಾಣಕ್ಕೂ ಅದೇ ಬುಕಿಂಗ್ ಕಚೇರಿಯಲ್ಲಿ ಗ್ರೂಪ್ ಬುಕಿಂಗ್‌ಗೆ ಅನುಮತಿ ಪಡೆಯಬಹುದು. ಆದರೆ ಅದನ್ನು ಪ್ರತ್ಯೇಕ ಪ್ರಯಾಣವೆಂದು ಪರಿಗಣಿಸಲಾಗುತ್ತದೆ.

ಅನುಮತಿ ನೀಡಿದ ಎಲ್ಲ ಗ್ರೂಪ್ ಬುಕಿಂಗ್‌ಗಳ ಪ್ರತ್ಯೇಕ ದಾಖಲೆ ಪುಸ್ತಕವನ್ನು ಸಿಆರ್‌ಎಸ್ ಅಥವಾ ನಿಲ್ದಾಣ ವ್ಯವಸ್ಥಾಪಕರು ನಿರ್ವಹಿಸಬೇಕು. ಅರ್ಜಿ ನಮೂನೆ ಮತ್ತು ಪ್ರಯಾಣಿಕರ ಪಟ್ಟಿಯ ಪ್ರತಿಪುಟದ ಮೇಲೆ ಮೊಹರು ಮತ್ತು ಸಹಿ ಹಾಕಬೇಕು. ಅಕ್ರಮ ಗುಂಪುಗಳು ಬರ್ತ್ ಅಥವಾ ಆಸನಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆದು, ನಿಜವಾದ ಗುಂಪು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದು ಈ ಸೌಲಭ್ಯದ ಉದ್ದೇಶ ಎಂದು ರೈಲ್ವೆ ತಿಳಿಸಿದೆ.

























































































































error: Content is protected !!
Scroll to Top