ಭಾರತೀಯ ಭೂಸೇನೆಯ ನ್ಯಾಯಾಂಗ ವಿಭಾಗದ ಮೇಜರ್ ಜನರಲ್ ಹುದ್ದೆಗೆ ಪದೋನ್ನತಿ ಪಡೆದು ಜಡ್ಜ್ ಅಡ್ವಕೇಟ್ ಜನರಲ್ ಆಗಿ ಆಯ್ಕೆಯಾದ ಕಾಡುಹೊಳೆಯ ಸಚ್ಚಿದಾನಂದ ಪ್ರಭು

ಕಾರ್ಕಳ: ಭಾರತೀಯ ಭೂಸೇನೆಯ ನ್ಯಾಯಾಂಗ ವಿಭಾಗದಲ್ಲಿ ವಿವಿಧ ಸ್ತರದ ಹುದ್ದೆಗಳಲ್ಲಿ ಸುಧೀರ್ಘ 29 ವರ್ಷಗಳ ಕಾಲ ಸೇವೆ ಸಲ್ಲಿಸಿದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಸಮೀಪದ ಕಾಡುಹೊಳೆಯ ಸಚ್ಚಿದಾನಂದ ಪ್ರಭು ಅವರು ಭಾರತೀಯ ಭೂಸೇನೆಯ ನ್ಯಾಯಾಂಗ ವಿಭಾಗದ ಅತ್ಯುನ್ನತ ಹುದ್ದೆಯಾದ ಮೇಜರ್ ಜನರಲ್ ಹುದ್ದೆಗೆ ಪದೋನ್ನತಿ ಪಡೆದು ಜಡ್ಜ್ ಅಡ್ವಕೇಟ್ ಜನರಲ್ ಆಗಿ ನೇಮಕಗೊಂಡಿದ್ದಾರೆ.

ಈ ಹುದ್ದೆಗೆ ಏರುವ ಮೂಲಕ ಮೇಜರ್ ಜನರಲ್ ಪದವಿಗೇರಿದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮರ್ಣೆ ಗ್ರಾಮದ ಕಾಡುಹೊಳೆ ಕೊಪ್ಪಲದ ದಿ. ಬಾಬುರಾಯ ಪ್ರಭು – ರತ್ನಮ್ಮ ದಂಪತಿ ಪುತ್ರನಾಗಿ 1972ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಕಾಡುಹೊಳೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು, ನಂತರ ಅಜೆಕಾರು ಜ್ಯೋತಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದು,ಪಿಯುಸಿ ಶಿಕ್ಷಣವನ್ನು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ತದನಂತರ ಉಡುಪಿಯ ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಪದವಿ ಪೂರೈಸಿದರು. ಕಾನೂನು ಪದವಿ ಪಡೆದು ಬಳಿಕ ಕಾರ್ಕಳದ ಬಾರ್ ಅಸೋಸಿಯೇಷನ್ ಸದಸ್ಯರಾಗಿ ಕೆಲಕಾಲ ಹಿರಿಯ ವಕೀಲರಾದ ಎಂ.ಎನ್ ಪಾಂಡಿ ಅವರ ಜೊತೆ ವಕೀಲರಾಗಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಯುಪಿಎಸ್‌ಸಿ(ಸೇನಾ ನೇಮಕಾತಿಗೆ) ಪರೀಕ್ಷೆ ಬರೆದು 1997ರಲ್ಲಿ ಭಾರತೀಯ ಭೂಸೇನೆಯ ನ್ಯಾಯಾಂಗ ವಿಭಾಗದಲ್ಲಿ ಲೆಫ್ಟಿನೆಂಟ್ ದರ್ಜೆಯ ಅಧಿಕಾರಿಯಾಗಿ ಅಸಿಸ್ಟೆಂಟ್‌ ಜಡ್ಜ್ ಅಡ್ವಕೇಟ್ ಜನರಲ್ ಆಗಿ ವೃತ್ತಿಜೀವನ ಆರಂಭಿಸಿದರು.

ಸೇನೆಯಲ್ಲಿ ಲೆಫ್ಟಿನೆಂಟ್ ದರ್ಜೆಯ ಅಧಿಕಾರಿಯಾಗಿ ಅಸಿಸ್ಟೆಂಟ್‌ ಜಡ್ಜ್ ಅಡ್ವಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ ಅವರು 1999ರ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದರು. ಸೇನಾ ಪ್ರಧಾನ ಕಚೇರಿಯಲ್ಲಿ ಕರ್ನಲ್‌ ಮಿಲಿಟರಿ ಸೆಕ್ರೆಟರಿ ಆಗಿ ಸೇವೆ ಸಲ್ಲಿಸಿದ್ದಾರೆ. ಇದರೊಂದಿಗೆ ಪಶ್ಚಿಮ ಕಮಾಂಡ್ ಹಾಗೂ ಕೇಂದ್ರ ಕಮಾಂಡ್‌ಗಳಲ್ಲಿ ಡೆಪ್ಯೂಟಿ ಜಡ್ಜ್ ಅಡ್ವಕೇಟ್‌ ಜನರಲ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ದೇಶದ ನಾನಾ ರಾಜ್ಯಗಳಲ್ಲಿ ಮಿಲಿಟರಿ ಕೋರ್ಟ್ನಲ್ಲಿ ಸೇವೆ ಸಲ್ಲಿಸಿ ಹಂತಹAತವಾಗಿ ಕ್ಯಾಪ್ಟನ್, ಮೇಜರ್, ನಂತರ ಲೆಫ್ಟಿನೆಂಟ್ ಕರ್ನಲ್, ಬ್ರಿಗೇಡಿಯರ್, ಮೇಜ‌ರ್ ಆಗಿ ಪದೋನ್ನತಿಗೊಂಡು, ಭೂ ಸೇನಾ ನ್ಯಾಯಾಂಗ ವಿಭಾಗದಲ್ಲಿ ಸುಧೀರ್ಘ 29 ವರ್ಷಗಳ ಕಾಲ ಸೇವೆ ಸಲ್ಲಿಸಿ ಭೂಸೇನೆಯ ಅತ್ಯುನ್ನತ ಹುದ್ದೆಯಾದ ಮೇಜರ್ ಜನರಲ್ ಆಗಿ ಭಡ್ತಿ ಪಡೆದು ಕನ್ನಡದ ಮೊದಲ ಅಧಿಕಾರಿಯಾಗಿದ್ದಾರೆ.

ಪ್ರಸ್ತುತ ಪತ್ನಿ ಜ್ಯೋತಿ ಪ್ರಭು ಹಾಗೂ ಮಕ್ಕಳ ಜೊತೆ ನವದೆಹಲಿಯಲ್ಲಿ ವಾಸವಾಗಿರುವ ಸಚ್ಚಿದಾನಂದ ಪ್ರಭು ಅವರು ಸೇನಾ ಕೇಂದ್ರ ಕಚೇರಿಯಲ್ಲಿ ಡೆಪ್ಯೂಟಿ ಜಡ್ಜ್ ಅಡ್ವಕೇಟ್ ಜನರಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಹಾಲಿ ಜಡ್ಜ್ ಅಡ್ವಕೇಟ್ ಜನರಲ್ ಮೇಜರ್ ಜನರಲ್ ಸಂದೀಪ್ ಕುಮಾರ್ ಅವರ ನಿವೃತ್ತಿಯ ಬಳಿಕ ನೂತನ ಜಡ್ಜ್ ಅಡ್ವಕೇಟ್ ಜನರಲ್ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

























































































































error: Content is protected !!
Scroll to Top