ಮತಾಂತರ ನಿಷೇಧ ಕಾಯ್ದೆ ವಾಪಸ್‌ ಪಡೆದಲ್ಲಿ ರಾಜ್ಯಾದ್ಯಂತ ಬೃಹತ್‌ ಪ್ರತಿಭಟನೆ

ಉಡುಪಿ : ಮತಾಂತರ ನಿಷೇಧ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಪ್ರತಿಬಂಧಕ ಕಾನೂನನ್ನು ರಾಜ್ಯ ಸರಕಾರ ವಾಪಸ್ ಪಡೆಯುವ ಪ್ರಯತ್ನ ಅಥವಾ ದುರ್ಬಲಗೊಳಿಸುವ ನಿರ್ಧಾರ ಕೈಗೊಂಡರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಾಗೂ ಜನಾಂದೋಲನ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯಾಧ್ಯಕ್ಷ ಸುನಿಲ್ ಕೆ.ಆರ್. ಎಚ್ಚರಿಕೆ ನೀಡಿದ್ದಾರೆ.

ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಯಾವುದೇ ಕಾರಣಕ್ಕೂ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020’ ಮತ್ತು ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ-2022’ನ್ನು ಹಿಂಪಡೆಯಬಾರದು. ಅಥವಾ ಅದನ್ನು ದುರ್ಬಲಗೊ ಳಿಸುವ ಪ್ರಯತ್ನ ನಡೆಸಬಾರದು ಎಂದು ವಿಎಚ್‌ಪಿ ರಾಜ್ಯ ಸರಕಾರವನ್ನು ತೀವ್ರವಾಗಿ ಆಗ್ರಹಿಸುತ್ತಿದೆ ಎಂದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕೆಲವು ಸಂಘಟನೆಗಳು ಈ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿವೆ. ಸಂಘಟನೆಗಳ ಒತ್ತಡಕ್ಕೆ ಮಣಿದು ಡಿ. 2ರಿಂದ ಬೆಳಗಾವಿಯಲ್ಲಿ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ಕುರಿತು ಕೆಪಿಸಿಸಿ ಅಧ್ಯಕ್ಷರು ನೀಡಿರುವ ಹೇಳಿಕೆಯನ್ನು ವಿಹಿಂಪ ಖಂಡಿಸುತ್ತದೆ ಎಂದು ಸುನಿಲ್ ತಿಳಿಸಿದರು.

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆಯು ಯಾವುದೇ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡಿಲ್ಲ. ಬದಲಾಗಿ ಬಲವಂತ, ವಂಚನೆ, ಆಮಿಷ ಅಥವಾ ದಾರಿ ತಪ್ಪಿಸಿ ಮಾಡುವ ಕಾನೂನುಬಾಹಿರ ಮತಾಂತರಗಳನ್ನು ಮಾತ್ರ ತಡೆಯುತ್ತದೆ. 1977ರ ತನ್ನ ತೀರ್ಪೊಂದರಲ್ಲಿ ಸುಪ್ರೀಂ ಕೋರ್ಟ್ ಸಹ ಬಲವಂತವಾಗಿ ಮತಾಂತರ ಮಾಡುವ ಹಕ್ಕು ಮೂಲಭೂತ ಹಕ್ಕಲ್ಲ ಎಂದು ಸ್ಪಷ್ಟಪಡಿಸಿದೆ ಎಂದರು.

ಭಾರತೀಯ ಕೃಷಿ ಪದ್ಧತಿಯ ಬೆನ್ನೆಲುಬಾಗಿರುವ ಗೋವುಗಳ ರಕ್ಷಣೆ ರೈತರ ಹಿತಾಸಕ್ತಿ ಹಾಗೂ ಪಶುಸಂಪತ್ತಿನ ರಕ್ಷಣೆಗೆ ಅಗತ್ಯವಾಗಿದೆ. ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಈ ಕಾಯ್ದೆಯಿಂದ ಸಾವಿರಾರು ಗೋವುಗಳ ರಕ್ಷಣೆಯಾಗಿದೆ. ಗೋಕಳ್ಳರು ಹಾಗೂ ಅಕ್ರಮ ಗೋಸಾಗಾಟಗಾರರಿಗೆ ಕಡಿವಾಣ ಬಿದ್ದಿದೆ. ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನ ರಾಜ್ಯದಲ್ಲಿ ಅನಗತ್ಯ ಕೋಮು ಸಂಘರ್ಷಕ್ಕೆ ದಾರಿಮಾಡಿ ಕೊಡುತ್ತದೆ ಎಂದವರು ಎಚ್ಚರಿಸಿದರು.

ರಾಜ್ಯ ಸರಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯ 2026-27ನೇ ಸಾಲಿನಲ್ಲಿ ಕೇವಲ ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿ ಗಳಿಗೆ 60 ದಿನಗಳ ಸೇನಾ ತರಬೇತಿ ನೀಡಲು ಟೆಂಡರ್ ಕರೆದಿರುವುದನ್ನು ವಿಎಚ್‌ಪಿ ಖಂಡಿಸುತ್ತದೆ ಎಂದು ಸುನಿಲ್ ಕೆ.ಆರ್. ಹೇಳಿದರು.
ಸಾರ್ವಜನಿಕರ ತೆರಿಗೆ ಹಣವನ್ನು ಕೇವಲ ಒಂದು ಧಾರ್ಮಿಕ ಗುಂಪಿಗೆ ಮಾತ್ರ ತರಬೇತಿ ನೀಡಲು ಬಳಸಿ, ಹಿಂದೂ ಸೇರಿದಂತೆ ಇತರ ಸಮುದಾಯಗಳ ಅರ್ಹ ಬಡ ವಿದ್ಯಾರ್ಥಿಗಳನ್ನು ಹೊರಗಿಡುವುದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಖಂಡಿಸಿದ ಅವರು, ಧರ್ಮದ ಬದಲು ಆರ್ಥಿಕವಾಗಿ ಹಿಂದುಳಿದಿರುವ ಮಾನದಂಡದ ಮೇಲೆ ಶಾಲಾ-ಕಾಲೇಜುಗಳ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಸಮಾನ ತರಬೇತಿ ನೀಡಬೇಕು ಎಂದವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಜರಂಗ ದಳದ ಸಂಚಾಲಕ ಚೇತನ್ ಪೇರಲ್ಕೆ, ವಿಎಚ್‌ಪಿಯ ವಿಖ್ಯಾತ್ ಭಟ್ ಉಪಸ್ಥಿತರಿದ್ದರು.

























































































































error: Content is protected !!
Scroll to Top