ಮೂಡುಬಿದಿರೆ: ಪ್ರಕೃತಿ ಚಿಕಿತ್ಸೆಯನ್ನು ಕೇವಲ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳಿಗೆ ಸೀಮಿತಗೊಳಿಸದೆ, ವೈಜ್ಞಾನಿಕ ಸಂಶೋಧನೆ ಹಾಗೂ ಇತರ ವೈದ್ಯಕೀಯ ಪದ್ಧತಿಗಳೊಂದಿಗಿನ ಸಹಯೋಗದ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆಸುವ ಅಗತ್ಯವಿದೆ ಎಂದು ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾ. ಅರುಣ್ ಪಿ.ಜಿ. ನುಡಿದರು.
ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಯೋಗ ಸಭಾಂಗಣದಲ್ಲಿ ಸೋಮವಾರ ನಡೆದ 9ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಕೃತಿ ಚಿಕಿತ್ಸೆಯು ಕೇವಲ ಶಿಬಿರಗಳ ಆಯೋಜನೆ, ಉಪನ್ಯಾಸಗಳು ಹಾಗೂ ಯೋಗದ ಕುರಿತು ಜ್ಞಾನ ಹಂಚಿಕೆಗೆ ಸೀಮಿತವಾಗಬಾರದು. ಬದಲಾಗಿ, ಜನರ ಬಳಿಗೆ ನೇರವಾಗಿ ತೆರಳಿ ನೈಸರ್ಗಿಕ ಜೀವನಶೈಲಿ ಮತ್ತು ಆರೋಗ್ಯಕರ ಬದುಕಿನ ಕುರಿತು ಅರಿವು ಮೂಡಿಸಬೇಕು. ವ್ಯಕ್ತಿಯಲ್ಲಿನ ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳಿಗೆ ರಾಗ ಮತ್ತು ದ್ವೇಷ ಪ್ರಮುಖ ಕಾರಣಗಳಾಗಿದ್ದು, ಪತಂಜಲಿ ಯೋಗಸೂತ್ರದಲ್ಲಿ ಈ ವಿಚಾರಗಳನ್ನು ವಿವರಿಸಲಾಗಿದೆ. ಯಾವುದೇ ವೈದ್ಯಕೀಯ ಪದ್ಧತಿಯನ್ನು ತಿರಸ್ಕರಿಸುವ ಬದಲು, ಇತರ ವೈದ್ಯಕೀಯ ಪದ್ಧತಿಗಳೊಂದಿಗೆ ಸಹಯೋಗದ ಸಂಶೋಧನೆ ನಡೆಸುವುದು ಅಗತ್ಯ. ಚಿಕಿತ್ಸೆಯ ಮೂಲ ಉದ್ದೇಶ ರೋಗಿಗೆ ಉತ್ತಮ ಆರೋಗ್ಯ ಫಲಿತಾಂಶ ಒದಗಿಸುವುದಾಗಿದೆ. ವಿದ್ಯಾರ್ಥಿಗಳು ತಾವು ಕಲಿಯುವ ಪ್ರತಿಯೊಂದು ವಿಷಯವನ್ನೂ ಸಂಶೋಧನಾ ದೃಷ್ಟಿಯಿಂದ ಅಧ್ಯಯನ ಮಾಡಬೇಕು. ಸಾಂಪ್ರದಾಯಿಕ ಚಿಕಿತ್ಸಾ ತತ್ವಗಳನ್ನು ವೈಜ್ಞಾನಿಕ ಜ್ಞಾನದೊಂದಿಗೆ ಸಮನ್ವಯಗೊಳಿಸಿದರೆ ಪ್ರಕೃತಿ ಚಿಕಿತ್ಸಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಹಾಗೂ ಪರಿಣಾಮಕಾರಿ ಚಿಕಿತ್ಸಾ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹೋಮಿಯೋಪಥಿ ಕಾಲೇಜಿನ ಪ್ರಾಚಾರ್ಯ ಡಾ. ರೋಶನ್ ಪಿಂಟೋ, ಸರಿಯಾದ ಆಹಾರ ಸೇವನೆ, ಕ್ರಮಬದ್ಧ ಉಸಿರಾಟ ಮತ್ತು ಸಕಾರಾತ್ಮಕ ಚಿಂತನೆ ಇವೇ ನೈಸರ್ಗಿಕ ಆರೋಗ್ಯದ ಮೂಲಾಧಾರಗಳು. ಇಂದಿನ ವೇಗದ ಜೀವನಶೈಲಿ, ತ್ವರಿತ ಆಹಾರ ಸೇವನೆ ಹಾಗೂ ಒತ್ತಡದ ಬದುಕಿನಿಂದಾಗಿ ಜನರು ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ನೀಡುವ ಔಷಧಿಗಳ ಮೊರೆ ಹೋಗುತ್ತಿದ್ದಾರೆ. ಆದರೆ ಇವು ಶಾಶ್ವತ ಪರಿಹಾರವಲ್ಲ. ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನದ ವಿದ್ಯಾರ್ಥಿಗಳ ಜವಾಬ್ದಾರಿ ದೊಡ್ಡದಿದ್ದು, ತಮ್ಮ ವಿಷಯದಲ್ಲಿ ಆಳವಾದ ಜ್ಞಾನ ಸಂಪಾದಿಸಬೇಕು ಈ ವರ್ಷದ ಪ್ರಕೃತಿ ಚಿಕಿತ್ಸಾ ದಿನದ ಧ್ಯೇಯವಾಕ್ಯವಾದ ‘ನಿಜವಾದ ಪ್ರಕೃತಿ ಚಿಕಿತ್ಸೆ, ಆರೋಗ್ಯವಂತ ಭಾರತ’ ಎಂಬ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಆಡಳಿತಾಧಿಕಾರಿ ಡಾ. ಪ್ರಜ್ಞಾ ಆಳ್ವ ಇದ್ದರು.
ಆಶಾದ್ ವಿಜೇತರ ಹೆಸರುಗಳನ್ನು ವಾಚಿಸಿ, ಡಾ. ಜ್ಯೋತಿ ಸ್ವಾಗತಿಸಿ, ಶಿಭಾನಿ ಕಾರ್ಯಕ್ರಮ ನಿರೂಪಿಸಿದರು. ಡಾ. ಭೂಮಿಕಾ ವಂದಿಸಿದರು.





























































