ಸೀತಾ ನದಿಗೆ ಹಾರಿ ತುಮಕೂರಿನ ದಂಪತಿ ಆತ್ಮಹತ್ಯೆ

ಚೂಡಿದಾರದ ಶಾಲಿನಿಂದ ಕೈಗಳನ್ನು ಕಟ್ಟಿಕೊಂಡು ನದಿಗೆ ಜಿಗಿದ ಗಂಡ-ಹೆಂಡತಿ

ಕೋಟ: ಉಡುಪಿ ಜಿಲ್ಲೆಯ ಕೋಟ ಸಮೀಪ ಪತಿ ಹಾಗೂ ಪತ್ನಿ ಕೈಗಳನ್ನು ಪರಸ್ಪರ ಚೂಡಿದಾರದ ಶಾಲಿನಿಂದ ಕಟ್ಟಿಕೊಂಡು ಮಾಬುಕಳದ ಸೀತಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶನಿವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಮಾಬುಕಳ ಸೇತುವೆಯಲ್ಲಿ ಸಂಭವಿಸಿದೆ. ಮೃತರನ್ನು ಮೂಲತಃ ತುಮಕೂರು ಜಿಲ್ಲೆಯವರಾದ ಶ್ರೀನಿವಾಸ್ ಮೂರ್ತಿ ಎಚ್. (52) ಹಾಗೂ ಗಂಗಾ (48) ಎಂದು ಗುರುತಿಸಲಾಗಿದೆ.

ದಂಪತಿ ಒಂದು ವಾರದ ಹಿಂದೆ ಕರಾವಳಿ ಹಾಗೂ ಮಲೆನಾಡು ಭಾಗದ ವಿವಿಧ ತೀರ್ಥಕ್ಷೇತ್ರಗಳ ದರ್ಶನಕ್ಕಾಗಿ ಆಗಮಿಸಿದ್ದರು ಎನ್ನಲಾಗಿದೆ. ಶನಿವಾರ ಮುರ್ಡೇಶ್ವರಕ್ಕೆ ಭೇಟಿ ನೀಡಿದ್ದ ಅವರು ಬಳಿಕ ಸಂಜೆ ವೇಳೆಗೆ ಮಾಬುಕಳ ಪರಿಸರದಲ್ಲಿ ಸುತ್ತಾಡುತ್ತಿದ್ದರು. ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಮಾಬುಕಳ ಸೇತುವೆಯಿಂದ ಸೀತಾ ನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ದಂಪತಿ ನದಿಗೆ ಹಾರಿರುವುದನ್ನು ಗಮನಿಸಿದ ರಿಕ್ಷಾ ಚಾಲಕರೊಬ್ಬರು ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪರಿಶೀಲಿಸುವಷ್ಟರಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿ ವೇಳೆ ಶೋಧ ಕಾರ್ಯಾಚರಣೆ ನಡೆಸಿದರೂ ದಂಪತಿ ಪತ್ತೆಯಾಗಿರಲಿಲ್ಲ.

ರವಿವಾರ ಬೆಳಗ್ಗೆ ಮಾಬುಕಳ ಸೇತುವೆಯಿಂದ ಸುಮಾರು 500 ಮೀಟರ್ ದೂರದ ಪಾಂಡೇಶ್ವರದ ಸೀತಾ ನದಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಆತ್ಮಹತ್ಯೆಗೂ ಮುನ್ನ ದಂಪತಿ ಚೂಡಿದಾರದ ಶಾಲಿನಿಂದ ತಮ್ಮ ಕೈಗಳನ್ನು ಪರಸ್ಪರ ಕಟ್ಟಿಕೊಂಡಿದ್ದರು ಎನ್ನಲಾಗಿದ್ದು, ಅದೇ ಸ್ಥಿತಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ದಂಪತಿ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

























































































































error: Content is protected !!
Scroll to Top