ಮಣಿಪಾಲ: ಇಲ್ಲಿನ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಮತ್ತು ಮಣಿಪಾಲ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆಯು ವಿದ್ಯಾ ನಗರ ಗ್ರೀನ್ಸ್ನಲ್ಲಿ ನಡೆಯಿತು.
ಉದ್ಘಾಟಕರಾಗಿ ಆಗಮಿಸಿದ ಡಾ. ಮಧು ಜಿ. (ಪ್ರಾಂಶುಪಾಲರು, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು, ಮೂಡುಬಿದಿರೆ)ಮಾತನಾಡಿ, ಮನುಷ್ಯನ ಮಾನಸಿಕ ಮತ್ತು ಶಾರೀರಿಕ ಸ್ವಾಸ್ಥ್ಯವನ್ನು ಕಾಪಾಡಲು ಕ್ರೀಡೆ ಅತ್ಯಂತ ಉಪಯುಕ್ತವಾಗಿದ್ದು, ಶೈಕ್ಷಣಿಕವಾಗಿ ಉತ್ತಮ ಏಳ್ಗೆಯನ್ನು, ದೂರದೃಷ್ಟಿ, ಏಕಾಗ್ರತೆ, ದೃಢ ಮನೋಭಾವನೆ, ಆತ್ಮವಿಶ್ವಾಸದ ಗುಣಗಳನ್ನು ಕ್ರೀಡಾಪಟುಗಳಲ್ಲಿ ಬೆಳೆಸುತ್ತದೆ. ಈ ಎಲ್ಲಾ ಗುಣಗಳೊಂದಿಗೆ ಶಿಸ್ತುಬದ್ಧ ಜೀವನವನ್ನು ನಡೆಸಿಕೊಂಡು ಹೋಗುವಲ್ಲಿ ಕ್ರೀಡೆ ಪ್ರಮುಖವಾಗಿದ್ದು, ನಿಮ್ಮನ್ನು ಆಟಗಳಲ್ಲಿ ತೊಡಗಿಸಿಕೊಂಡು ಶಾರೀರಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ ಹಾಗೂ ಇಂದಿನ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿ ನವೀನ್ ಶೆಟ್ಟಿ, (ಹಿರಿಯ ರಾಷ್ಟ್ರೀಯ ವಾಲಿಬಾಲ್ ಆಟಗಾರರು ಮತ್ತು ತರಬೇತುದಾರರು) ಮಾತನಾಡಿ, ಉತ್ತಮ ಕ್ರೀಡಾಪಟುಗಳಾಗಬೇಕೆಂಬ ಮಹತ್ವಾಕಾಂಕ್ಷೆ ಇರುವವರು ಪ್ರಮುಖವಾಗಿ ವಿನಯತೆ, ಬದ್ಧತೆ, ಸಮರ್ಪಣಾ ಗುಣಗಳನ್ನು ಬೆಳೆಸಿಕೊಳ್ಳಬೇಕಾದದ್ದು ಬಹಳ ಮುಖ್ಯ. ಇಲ್ಲವಾದಲ್ಲಿ ಅತೀ ದೊಡ್ಡ ಸಾಧನೆಯ ಗುರಿ ಏರಿದರೂ ಸುದೀರ್ಘವಾಗಿ ಅದರಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಯಾವುದೇ ಕ್ಷೇತ್ರದಲ್ಲಿ ಸಾಧಕರಾಗಬೇಕಾದರೂ ಅದಕ್ಕೆ ಕಾರಣೀಕರ್ತರಾದ ಗುರುವನ್ನು, ಬೆಂಬಲಿಗರನ್ನು ಮರೆಯದೇ ವಿಧೇಯತೆಯ ಪ್ರತೀಕವಾಗಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.

ಮಣಿಪಾಲ ಜ್ಞಾನಸುಧಾ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ಸಂಸ್ಥೆಯ ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳೇ ಮುನ್ನಡೆಸುವ “ಗಳಿಕೆ ಮತ್ತು ಕಲಿಕೆ” ಎಂಬ ಶೀರ್ಷಿಕೆಯ ಬಿಸಿನೆಸ್ ಫೇರ್ನ್ನು ನಡೆಸಲಾಯಿತು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಲ್ಸನ್ ಡಿಕೋಸ್ಟ ಮಾತನಾಡಿ, ಇಂದಿನ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳು ಸೋತಿರಬಹುದು ಅಥವಾ ಗೆದ್ದಿರಬಹುದು. ಆದರೆ ಪ್ರತಿಯೊಬ್ಬರಲ್ಲೂ ಒಂದು ಪಟ್ಟು ಸಾಮರ್ಥ್ಯ ಹೆಚ್ಚಾಗಿದೆ, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಹೆಚ್ಚಿದೆ, ಇದೇ ರೀತಿ ಇನ್ನು ಮುಂದಿನ ದಿನಗಳಲ್ಲಿಯೂ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ಅದರಿಂದ ಉತ್ತಮ ವ್ಯಕ್ತಿತ್ವವನ್ನು ಹೊಂದಲು ಪ್ರಯತ್ನಿಸಿ ಎಂದರು.
ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಆಟಗಳಲ್ಲಿ ಭಾಗವಹಿಸಿದ ಉಪನ್ಯಾಸಕರಿಗೆ ಪ್ರಶಸ್ತಿ ನೀಡಲಾಯಿತು.
ಉಪಪ್ರಾಂಶಪಾಲರುಗಳಾದ ರವಿ ಜಿ., ಹೇಮಂತ ಹಾಗೂ ನವೀನ್ ಎ. ಮತ್ತು ದೈಹಿಕ ಶಿಕ್ಷಣ ಉಪನ್ಯಾಸ ಅರುಣ್ ಕುಮಾರ್ ಮತ್ತು ಜಯರಾಜ್ ಉಡುಪಿ ಜ್ಞಾನಸುಧಾ ಪ.ಪೂ.ಕಾಲೇಜಿನ ಪ್ರಾಂಶುಪಾಲ ಶ್ರೀನಿಧಿ ಭಾಗವತ್ ಇವರು ಉಪಸ್ಥಿತರಿದ್ದರು.
ಮಣಿಪಾಲ ಜ್ಞಾನಸುಧಾ ಪ.ಪೂ.ಕಾಲೇಜಿನ ಪ್ರಾಂಶುಪಾಲ ಗಣೇಶ ಶೆಟ್ಟಿ ಸ್ವಾಗತಿಸಿದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶಮಿತಾ ನಿರೂಪಿಸಿ, ವಂದಿಸಿದರು.




























































