ಮಂಗಳೂರು: ಇಂಡಿಗೋ ವಿಮಾನದ ಪೈಲಟ್ ಸಮಯಪ್ರಜ್ಞೆಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತವೊಂದು ತಪ್ಪಿದ ಘಟನೆ ಸೋಮವಾರ ಸಂಜೆ ನಡೆದಿದೆ.
229 ಪ್ರಯಾಣಿಕರು ಹಾಗೂ ಏಳು ಮಂದಿ ಸಿಬಂದಿ ಇದ್ದ ಇಂಡಿಗೋ ವಿಮಾನ ಸಂಜೆ 6.10ಕ್ಕೆ ಬೆಂಗಳೂರಿಗೆ ಪ್ರಯಾಣ ಆರಂಭಿಸಿದೆ. ರನ್ವೇಯಲ್ಲಿ ಸಾಗಿ ಇನ್ನೇನು ಟೇಕ್ಆಫ್ಗೆ ಸುಮಾರು 100 ಮೀ. ಮಾತ್ರ ಬಾಕಿ ಇದೆ ಎನ್ನುವಷ್ಟರಲ್ಲಿ ವಿಮಾನದ ತಳಭಾಗದಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ. ಇದು ಪೈಲಟ್ ಗಮನಕ್ಕೆ ಬರುತ್ತಿದ್ದಂತೆ ತುರ್ತು ಬ್ರೇಕ್ ಹಾಕಿ ವಿಮಾನದ ವೇಗವನ್ನು ಕಡಿಮೆ ಮಾಡಿ ರನ್ವೇಯಲ್ಲಿಯೇ ವಿಮಾನವನ್ನು ನಿಲ್ಲಿಸಿದರು. ಘಟನೆಯಿಂದ ವಿಮಾನದ ಚಕ್ರವೊಂದು ಒಡೆದಿರುವುದಾಗಿ ತಿಳಿದು ಬಂದಿದೆ.
ಘಟನೆ ಬಳಿಕ ವಿಮಾನವನ್ನು “ಬೇ’ಗೆ ವಾಪಸು ತರಲಾಗಿದೆ. ವಿಮಾನ ನಿಲ್ದಾಣ ಹಾಗೂ ವಿಮಾನಯಾನ ಸಂಸ್ಥೆಯ ಸಿಬಂದಿ ಪ್ರಯಾಣಿಕರಿಗೆ ತಂಗಲು ವ್ಯವಸ್ಥೆ ಸಹಿತ ಅಗತ್ಯ ನೆರವು ಒದಗಿಸಿದ್ದಾರೆ. ರಾತ್ರಿ 11.05ಕ್ಕೆ ಬದಲಿ ವಿಮಾನ ಆಗಮಿಸಿ, ರಾತ್ರಿ 11.30ಕ್ಕೆ ಬೆಂಗಳೂರಿಗೆ ತೆರಳಿದೆ ಎನ್ನಲಾಗಿದೆ.

ಘಟನೆ ಬಳಿಕ ವಿಮಾನಯಾನ ಸಂಸ್ಥೆಯ ಎಂಜಿನಿಯರಿಂಗ್ ತಂಡವು ವಿಮಾನವನ್ನು ಸುದೀರ್ಘ ತಾಂತ್ರಿಕ ಪರಿಶೀಲನೆ ನಡೆಸಿದೆ. 2 2 2 (Aircraft on Ground) ಘೋಷಿಸಿದೆ. ದುರಸ್ತಿ ಮಾಡಿದ ಬಳಿಕಷ್ಟೇ ಸಂಚಾರ ಯೋಗ್ಯವಾಗಲಿದೆ.
ತಾಂತ್ರಿಕ ದೋಷ ಪೈಲಟ್ ಗಮನಕ್ಕೆ ಬಂದ ಮೇಲೂ ಸಣ್ಣದೆಂದು ನಿರ್ಲಕ್ಷಿಸಿ ವಿಮಾನವನ್ನು ಟೇಕ್ಆಫ್ ಮಾಡಿದ್ದರೆ ದೊಡ್ಡ ಅಪಾಯ ಸಂಭವಿಸುವ ಸಾಧ್ಯತೆಯಿತ್ತು. ಟೇಕ್ಆಫ್ ನಿಲ್ಲಿಸಿದ್ದರಿಂದ ಸಂಭವನೀಯ ಅಪಾಯ ತಪ್ಪಿದೆ ಎನ್ನಲಾ ಗಿದೆ. ಬದಲಿ ವ್ಯವಸ್ಥೆ ಆಗುವವರೆಗೆ ಕೆಲವು ಪ್ರಯಾಣಿಕರಿಗೆ ಸ್ಥಳೀಯ ಹೊಟೇಲ್ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು.
ವಿಮಾನದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಮಂಜುಳಾ ಎಸ್. ಅರವಿಂದ ಲಿಂಬಾವಳಿ, ನ್ಯಾಯಾಧೀಶರೊಬ್ಬರು ಸಹಿತ ಹಲವು ಗಣ್ಯರಿದ್ದರು. ಜತೆಗೆ ಬೆಂಗಳೂರು ಮೂಲಕ ವಿದೇಶಕ್ಕೆ ತೆರಳಬೇಕಾಗಿದ್ದ ಹಲವರಿದ್ದರು ಎಂದು ತಿಳಿದು ಬಂದಿದೆ.




























































