ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ಹಾಗೂ ನಾಗರಿಕ ಸೇವೆಗಳನ್ನು ಒದಗಿಸುತ್ತಿರುವ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳು ಇನ್ನುಮುಂದೆ ‘ಪ್ರಜಾಸೇವಾ ಕೇಂದ್ರ’ ಎಂದು ಮರುನಾಮಕರಣಗೊಳ್ಳಲಿವೆ.
ಸಿಎಂ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಪ್ರಜಾಸೇವೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಈ ಕುರಿತು ಆದೇಶ ನೀಡಿರುವುದಾಗಿದೆ.
ಪ್ರಜಾಸೇವಾ ಇಲಾಖೆಯ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ (ಇಡಿಸಿಎಸ್) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನಾಗರಿಕ ಸೇವಾ ಕೇಂದ್ರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ‘ಪ್ರಜಾ ಸೇವಾ ಕೇಂದ್ರ’ ಎಂದು ಮರುನಾಮಕರಣ ಮಾಡಲಾಗಿದೆ. ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳು, ನಾಮಫಲಕಗಳು, ವೆಬ್ ಪೋರ್ಟಲ್ಗಳು, ತಂತ್ರಾಂಶಗಳು, ಸ್ವೀಕೃತಿಗಳು ಹಾಗೂ ಪ್ರಚಾರ ಸಾಮಗ್ರಿಗಳಲ್ಲಿ ‘ಪ್ರಜಾ ಸೇವಾ ಕೇಂದ್ರ’ ಎಂದು ತಕ್ಷಣದಿಂದಲೇ ಉಲ್ಲೇಖಿಸುವುದು ಕಡ್ಡಾಯವಾಗಿದೆ. ಕೇಂದ್ರಗಳ ನಿರ್ವಾಹಕರು ಮತ್ತು ಫ್ರಾಂಚೈಸಿಗಳೊಂದಿಗಿನ ಒಪ್ಪಂದಗಳಲ್ಲಿ, ಪೋರ್ಟಲ್ ಮತ್ತು ತಂತ್ರಾಂಶಗಳಲ್ಲಿ ಹೊಸ ಹೆಸರನ್ನು ಅಳವಡಿಸುವುದು ಸೇರಿದಂತೆ ರಾಜ್ಯಾದ್ಯಂತ ಏಕರೂಪದ ಬ್ರಾಂಡಿಂಗ್ನೊಂದಿಗೆ ಆದ್ಯತೆಯ ಮೇರೆಗೆ ಇದನ್ನು ಜಾರಿಗೊಳಿಸಲು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ ನಿರ್ದೇಶಕರಿಗೆ ಸೂಚಿಸಲಾಗಿದೆ.

ಸಿಎಸ್ಸಿ ಕೇಂದ್ರಗಳ ಮರುನಾಮಕರಣದ ಜೊತೆಗೆ, ಪ್ರಜಾಸೇವೆ ಅಧಿಕಾರಿಗಳಿಗೆ ಕೆಲಸವನ್ನು ಮರುಹಂಚಿಕೆ ಮಾಡಲಾಗಿದೆ. ಸಕಾಲ, ಐಪಿಜಿಆರ್ಎಸ್, ಮಾಹಿತಿ ಹಕ್ಕು ಆನ್ಲೈನ್ ವ್ಯವಸ್ಥೆ, ಸರ್ಕಾರಿ ಪ್ರಕ್ರಿಯೆಗಳ ಪುನರ್ರಚನೆ, ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ನಿರ್ವಹಣೆ, ಕರ್ನಾಟಕ ಸರ್ಕಾರದ ಸಚಿವಾಲಯ ಕಚೇರಿ ಕೈಪಿಡಿ, ಇ-ಕಚೇರಿ, ನ್ಯಾಯಾಲಯ ಪ್ರಕರಣ ಮೇಲ್ವಿಚಾರಣಾ ವ್ಯವಸ್ಥೆ, ತರಬೇತಿ, ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ ಮತ್ತು ಪ್ರಜಾಸೇವಾ ಅಭಿಯಾನದಂತಹ ಒಂಬತ್ತು ಪ್ರಮುಖ ವಿಷಯಗಳನ್ನು ಈ ಇಲಾಖೆಗೆ ವಹಿಸಲಾಗಿದೆ. ಈ ವಿಷಯಗಳ ನಿರ್ವಹಣೆಗೆ ಕೇಂದ್ರೀಕೃತ ಆಡಳಿತಾತ್ಮಕ ವ್ಯವಸ್ಥೆಯನ್ನು ಒದಗಿಸಲು ಪ್ರಜಾಸೇವಾ ಇಲಾಖೆಯಡಿ ನೂತನ ‘ಪ್ರಜಾಸೇವಾ ಆಯುಕ್ತಾಲಯ’ವನ್ನು ಸ್ಥಾಪಿಸಲಾಗಿದೆ. ಅದರಂತೆ ಹುದ್ದೆಗಳ ಮರುನಾಮಕರಣ ಮತ್ತು ಸೃಜನೆ ಮಾಡಲಾಗಿದೆ. ‘ಅಪರ ನಿರ್ದೇಶಕರು, ಸಕಾಲ ಮಿಷನ್’ ಹುದ್ದೆಯನ್ನು ‘ಆಯುಕ್ತರು, ಪ್ರಜಾಸೇವಾ ಇಲಾಖೆ’ ಎಂದು ಹೆಸರಿಸಲಾಗಿದೆ. ‘ವಿಶೇಷ ಆಯುಕ್ತರು, ಪ್ರಜಾಸೇವಾ ಆಯುಕ್ತಾಲಯ’ ಎಂಬ ಒಂದು ಹೊಸ ಹುದ್ದೆಯನ್ನು ಸೃಜಿಸಲಾಗಿದ್ದು, ಇದಕ್ಕೆ ಕಿರಿಯ ಶ್ರೇಣಿಯ ಐಎಎಸ್ ಅಥವಾ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಯನ್ನು ನೇಮಿಸತಕ್ಕದ್ದು. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಇ-ಕಚೇರಿ ಯೋಜನಾ ನಿರ್ದೇಶಕರು, ಐಪಿಜಿಆರ್ಎಸ್ ಯೋಜನಾ ನಿರ್ದೇಶಕರು, ಸಿಸಿಎಂಎಸ್ ಯೋಜನಾ ನಿರ್ದೇಶಕರು ಮತ್ತು ಸಕಾಲ ಆಡಳಿತಾಧಿಕಾರಿ ಎಂಬ ನಾಲ್ಕು ಕೆಎಎಸ್ ಹುದ್ದೆಗಳ ಪೈಕಿ ಎರಡು ಹುದ್ದೆಗಳನ್ನು ಪ್ರಜಾಸೇವಾ ಇಲಾಖೆಯಲ್ಲಿಯೇ ಉಳಿಸಿಕೊಂಡು, ಉಳಿದೆರಡು ಹುದ್ದೆಗಳನ್ನು ಇ-ಆಡಳಿತ ಇಲಾಖೆಗೆ ವರ್ಗಾಯಿಸಲಾಗಿದೆ. ಇದರ ಜೊತೆಗೆ ಪ್ರಜಾಸೇವಾ ಇಲಾಖೆಗೆ ಹೆಚ್ಚುವರಿಯಾಗಿ ಎರಡು ಕೆಎಎಸ್ (ಕಿರಿಯ ಶ್ರೇಣಿ) ಹುದ್ದೆಗಳನ್ನು ಸೃಜಿಸಲಾಗಿದೆ.




























































