ಬಣ್ಣದ ಬದುಕಿನ ಸುವರ್ಣಪಥ ಸಂಭ್ರಮ
ಜಲವಳ್ಳಿ ಎಂಬ ಹೆಸರು ಕೇಳಿದರೆ ಸಾಕು, ಬಡಗುತಿಟ್ಟಿನ ಯಕ್ಷಗಾನದ ಶ್ರೀಮಂತ ಪರಂಪರೆಯನ್ನು ಏಳು ದಶಕಗಳ ಕಾಲ ಆಳಿದ “ಅಭಿನವ ಶನೀಶ್ವರ” ಖ್ಯಾತಿಯ ದಿ. ವೆಂಕಟೇಶ್ವರ ರಾವ್ ಅವರ ನೆನಪಾಗುತ್ತದೆ. ಇವರು “ನಾಲ್ಕು ಸುತ್ತು ಒಂದು ಗುತ್ತಿ”ನ ಮೂಲಕ ಯಕ್ಷ ರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿ ರಾರಾಜಿಸಿದವರು. ಇವರ 4 ಜನ ಮಕ್ಕಳಲ್ಲಿ ವಿದ್ಯಾಧರರವರು ಕೊನೆಯವರು.

ತಂದೆ ನಿರ್ವಹಿಸುತ್ತಿರುವ ಪ್ರತಿಯೊಂದು ಪಾತ್ರವನ್ನು ಅತ್ಯಂತ ಉತ್ಸುಕತೆಯಿಂದ ನೋಡಿ ಅವರನ್ನೇ ಮಾನಸ ಗುರುವನ್ನಾಗಿ ತನ್ನ ಬಣ್ಣದ ಬದುಕಿನಲ್ಲಿ ಸ್ವೀಕರಿಸಿ ಯಕ್ಷಗಾನದ ಪ್ರಸ್ತುತ ಕಾಲಘಟ್ಟದಲ್ಲಿ ತನ್ನದೇ ಆದ ವೈಶಿಷ್ಯತೆಯನ್ನು ಮೆರೆದಿದ್ದಾರೆ ವಿದ್ಯಾಧರ ಜಲವಳ್ಳಿ.

ಯಕ್ಷಗಾನವೆಂದರೆ ಬಣ್ಣ ಬಣ್ಣದ ವೇಷಭೂಷಣಗಳನ್ನು ಧರಿಸುವುದಷ್ಟೇ ಅಲ್ಲ, ವೇಷಕ್ಕೆ ತಕ್ಕಂತೆ ಆಳಂಗ, ದೇಹಭಾಷೆ, ಕುಣಿತ, ಲಯ, ಸಾಹಿತ್ಯ ಮತ್ತು ಪುರಾಣ ಜ್ಞಾನದೊಂದಿಗೆ ಪಾತ್ರದ ಭಾವನೆಗಳನ್ನು ವ್ಯಕ್ತಪಡಿಸುವ ಕಲೆಯನ್ನು ಮೈಗೂಡಿಸಿಕೊಂಡು ಬರಬೇಕು. ಈ ಎಲ್ಲ ಅಂಶಗಳು “ಯಕ್ಷಚಕ್ರೇಶ್ವರ” ಖ್ಯಾತಿಯ ವಿದ್ಯಾಧರರವರು ಮೈಗೂಡಿಸಿಕೊಂಡಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ತಾನು ಗಟ್ಟಿಯಾಗಿ ನಿಲ್ಲಬೇಕೆಂಬ ದೃಢಸಂಕಲ್ಪದಿಂದ ನಿರಂತರ ಅಭ್ಯಾಸ ಮತ್ತು ಬೇರೆ ಬೇರೆ ಮೇಳಗಳ ತಿರುಗಾಟದಲ್ಲಿ ಮೇರು ಕಲಾವಿದರ ಒಡನಾಟದಿಂದ ಇನ್ನಷ್ಟು ಪಳಗಿದರು. ಪೌರಾಣಿಕ ಸತ್ವಗಳನ್ನು ಮೈಗೂಡಿಸಿಕೊಂಡು ಸಾಹಿತ್ಯಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಓರ್ವ ಪರಿಪಕ್ವ ಕಲಾವಿದರಾಗಿ ರೂಪುಗೊಂಡರು. ಸುದನ್ವೆ, ಅರ್ಜುನ, ಭೀಮ, ಭೀಷ್ಮ, ಸಾಲ್ವ, ಕೀಚಕ, ಕೌರವ, ಮಾಗಧ ಕೃಷ್ಣ, ಕಾರ್ತವೀರ್ಯ, ರಾವಣ ಹೀಗೆ ನಾಯಕ, ಪ್ರತಿನಾಯಕನ ಪಾತ್ರಗಳನ್ನು ಮನೋಜ್ಞವಾಗಿ ಅಭಿನಯಿಸಬಲ್ಲರು.
ವಿದ್ಯಾಧರರವರ ರಂಗಪ್ರವೇಶವೇ ಒಂದು ರೋಮಾಂಚಕ ದೃಶ್ಯ. ರಂಗದ ಮೇಲೆ ಬಂದರೆಂದರೆ ಮಿಂಚಿನ ಸ್ಪರ್ಶದೊಂದಿಗೆ ರಂಗಸ್ಥಳಕ್ಕೊಂದು ಕಳೆ. ಪ್ರೇಕ್ಷಕರ ಗಮನವನ್ನು ತನ್ನತ್ತ ಸೆಳೆಯುವ ಆಕರ್ಷಕ ವೇಷ, ಸ್ಪಷ್ಟ ಉಚ್ಛಾರ ಮತ್ತು ಏರುಧ್ವನಿ. ಯಾವುದೇ ಪ್ರಸಂಗಗಳಲ್ಲಿ ರಂಗಸ್ಥಳದಲ್ಲಿ ಅವರಿರುವಷ್ಟು ಸಮಯ ಅವರೊಂದಿಗೆ ಇರುವ ಬೇರೆ ಕಲಾವಿದ ತಮ್ಮನ್ನು ಗುರುತಿಸಿಕೊಳ್ಳುವುದು ಅಸಾಧ್ಯದ ಮಾತು. ಈ ಕಾರಣಕ್ಕಾಗಿಯೇ ಅವರ ಅಭಿಮಾನಿಗಳು ಅವರಿಗಿಟ್ಟ ಇನ್ನೊಂದು ಹೆಸರು “ಡೈನಾಮಿಕ್ ಸ್ಟಾರ್” ಇದು ವಿದ್ಯಾಧರರವರ ಕಲಾ ಪ್ರೌಢಿಮೆಗೆ ಸಾಕ್ಷಿಯಾಗಿದೆ.
ವಿದ್ಯಾಧರ ಅವರ ಅಭಿನಯದ ಪ್ರಖರತೆ ವೈವಿಧ್ಯಮಯ ಪಾತ್ರಗಳು, ರಂಗದ ಮೇಲಿನ ಪ್ರಕಾಶ, ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಛಾಪು ಅವರ ಕಲಾಯಾನಕ್ಕೆ ವಿಶಿಷ್ಟ ಮೆರುಗನ್ನು ನೀಡಿದೆ. ಯಕ್ಷಗಾನ ರಂಗಭೂಮಿಯಲ್ಲಿ ವಿದ್ಯಾಧರ ಬಹುಬೇಡಿಕೆಯ ಬಡಗಿನ ಕಲಾವಿದ ಎಂದರೆ ಅತಿಶಯೋಕ್ತಿಯಾಗಲಾರದು. ರಂಗವನ್ನೇರಿದ ಮೇಲೆ ಗಾಂಭೀರ್ಯ ಮತ್ತು ಶಿಸ್ತುಬದ್ಧ ನೃತ್ಯದಿಂದ ಕಂಗೊಳಿಸುವ ವಿದ್ಯಾಧರ ರಂಗದ ಹೊರಗೆ ಅತ್ಯಂತ ಸರಳ, ಸೌಮ್ಯ ವ್ಯಕ್ತಿ. ಕಲಾ ಜೀವನದಲ್ಲಿ ಅತಿಯಾಗಿ ಮೆಚ್ಚುವ ಕಲಾವಿದರೆಂದರೆ ಬಳ್ಕೂರು ಕೃಷ್ಣಯಾಜಿ, ಭಾಗವತದ್ವಯರಾದ ಸುಬ್ರಹ್ಮಣ್ಯ ಧಾರೇಶ್ವರ ಮತ್ತು ಎಸ್. ಸುರೇಶ್ ಶೆಟ್ಟಿಯವರು. ಇತ್ತೀಚೆಗೆ ಬಡಗಿನ ಇನ್ನೋರ್ವ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯರವರನ್ನು ಸಹ ನೆಚ್ಚಿಕೊಂಡಿದ್ದಾರೆ.
ವೃತ್ತಿ ಜೀವನದಲ್ಲಿ ಗುಂಡಬಾಳ, ಗೋಳಿಗರಡಿ, ಕಮಶಿಲೆ, ಪೆರ್ಡೂರು, ಸಾಲಿಗ್ರಾಮ, ಮೆಕ್ಕೆಕಟ್ಟು ಮೇಳಗಳಲ್ಲಿ ಕಲಾ ಸೇವೆಗೈದು ಕೆಲವಾರು ವರ್ಷಗಳ ಹಿಂದೆ ಕಲಾಧರ ಯಕ್ಷಗಾನ ಮೇಳವನ್ನು ಕಟ್ಟಿ “ಜಲವಳ್ಳಿ ಮೇಳ” ಎನ್ನುವ ನಾಮಾಂಕಿತದಲ್ಲಿ ಎರಡು ವರ್ಷ ಡೇರೆ ಮೇಳಗಳನ್ನು ನಡೆಸಿದ್ದು ಅವಿಸ್ಮರಣೀಯ. ಬದುಕಿನಲ್ಲಿ ಬಂದ ಏಳುಬೀಳುಗಳಿಗೆ ಹಿಂಜರಿಯದೆ, ಕಲಾಸೇವೆಯ ಮೂಲಕ ತನ್ನದೇ ಶೈಲಿಯ ಏಕಮೇವ ಅದ್ವಿತೀಯರೆನಿಸಿಕೊಂಡ ಇವರ ಅಭಿನಯದ ಪ್ರಭೆ ಇನ್ನಷ್ಟು ಉಜ್ವಲವಾಗಲಿ. ಅವರು ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ, ಯಕ್ಷಗಾನದ ಪರಂಪರೆಯ ದೀಪವನ್ನು ಹಿಡಿದು ಸೃಜನಶೀಲತೆಯ ಬೆಳಕನ್ನು ರಂಗದ ತುಂಬಾ ಪಸರಿಸಲಿ ಎನ್ನುವುದು ಅವರ ಅಭಿಮಾನಿಗಳ ಅಭಿಲಾಷೆಯಾಗಿದೆ.
ನ.22ರಂದು ವಿದ್ಯಾಧರರ ಅಪಾರ ಸಂಖ್ಯೆಯ ಅಭಿಮಾನಿಗಳು ಅವರ ಹುಟ್ಟೂರಾದ ಹೊನ್ನಾವರದಲ್ಲಿ “ಜಲವಳ್ಳಿ ಸುವರ್ಣ ಸಂಭ್ರಮ ಆಚರಣೆಯನ್ನು ಹಮ್ಮಿಕೊಂಡಿದ್ದು, ಜಗದ್ಗುರು ಶ್ರೀ ಶಂಕರಾಚಾರ್ಯರ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳವರ ಉಪಸ್ಥಿತಿಯಲ್ಲಿ ಗಣ್ಯರ ಪಾಲ್ಗೊಳ್ಳುವಿಕೆಯಿಂದ ನೆರವೇರಲಿದ್ದು, ವಿದ್ಯಾಧರರಿಗೆ ಸುಧೀರ್ಘ ಕಲಾಸೇವೆ ಮಾಡುವ ಸೌಭಾಗ್ಯ ಮುಂದಿನ ದಿನಗಳಲ್ಲಿ ದೊರೆಯಲಿ.
✍️ ಅಡ್ವೊಕೇಟ್ ಎಚ್. ಆನಂದ ಮಡಿವಾಳ, ಉಡುಪಿ





























































