ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದಕ್ಕೆ, ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ಶಿಕ್ಷಕರನ್ನು ಬೋಧನೇತರ ಕೆಲಸಗಳಾದ ಸಿಎಸ್‌ಆರ್ ಮತ್ತು ಎಸ್‌ಎಸ್‌ಆರ್ ಜವಾಬ್ದಾರಿಯನ್ನು ನೀಡದಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ಕೇಳಿಕೊಳ್ಳಲಾಗಿದೆ ಎಂದು ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿ ಬರುವ ನಾಲ್ಕು ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ಬರುತ್ತವೆ ಈ ಹಿನ್ನಲೆಯಲ್ಲಿ ಮಕ್ಕಳಿಗೆ ಉತ್ತಮ ರೀತಿಯ ಬೋಧನೆ ಬಹಳ ಅವಶ್ಯಕವಾಗಿರುತ್ತದೆ. ಈ ಹಿನ್ನಲೆಯಲ್ಲಿ ಶಿಕ್ಷಕರನ್ನು ಮಕ್ಕಳಿಗೆ ನಿಯಮಿತವಾದ ಮತ್ತು ಸಂಜೆ ಸಮಯದಲ್ಲಿನ ಹೆಚ್ಚಿನ ಪಾಠ ಮಾಡುವುದು ಬಹಳ ಅಗತ್ಯ ಎನ್ನುವುದು ಶಿಕ್ಷಣ ಇಲಾಖೆಯ ಅಚಲವಾದ ನಿಲುವಾಗಿರುವುದರಿಂದ ಶಿಕ್ಷಕರನ್ನು ಮುಂದಿನ ಮೂರನಾಲ್ಕು ತಿಂಗಳುಗಳ ಕಾಲ ಕೇವಲ ಪಾಠ ಮಾಡುವ ಕೆಲಸಕ್ಕೆ ಸೀಮಿತವಾಗಿರಬೇಕೆನ್ನುವುದು ರಾಜ್ಯ ಸರ್ಕಾರದ ನಿಲುವಾಗಿದೆ ಎಂದರು.
ಸರ್ಕಾರಿ ಶಾಲೆಗಳ ಫಲಿತಾಂಶವನ್ನು ಇನ್ನಷ್ಟು ಉತ್ತಮಪಡಿಸುವುದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶೇಷ ತರಗತಿಗಳನ್ನು ಆಯೋಜಿಸುವ ಮೂಲಕ ಶೇ.40 ಅಥವಾ ಶೇ.40ಕ್ಕಿಂತ ಹೆಚ್ಚಿನ ಫಲಿತಾಂಶಕ್ಕೆ ಸೀಮಿತವಾಗದೆ ಶೇ.60ಕ್ಕಿಂತ ಹೆಚ್ಚಿನ ಫಲಿತಾಂಶ ಸಾಧಿಸುವ ಗುರಿಯೊಂದಿಗೆ ಎಲ್ಲರೂ ಒಗ್ಗಟಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಸಾಧಿಸುವ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲು ನಾವು ಜಾರಿಗೆ ತಂದಿರುವ ಮಿಷನ್ 40+’ ಎಂಬ ಅಭಿಯಾನದ ಉದ್ದೇಶ ಕೇವಲ ಫಲಿತಾಂಶವನ್ನು ಸುಧಾರಿಸುವುದು ಮಾತ್ರವಲ್ಲ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜತೆಗೆ ಅವರಲ್ಲಿ ಸಕಾರಾತ್ಮಕ ಬದಲಾವಣೆ ತರುವುದೂ ನಮ್ಮ ಗುರಿಯಾಗಿದೆ ಎಂದರು.





























































