ವಿಜಯ್‌ ಪಕ್ಷಕ್ಕೆ ಕೊನೆಗೂ ಸಿಕ್ಕಿತು ಮ್ಯಾಜಿಕ್ ನಂಬರ್ : ಸರ್ಕಾರ ರಚನೆಗೆ ಹಕ್ಕು ಮಂಡನೆ

ಚೆನ್ನೈ: ಕಳೆದ ನಾಲ್ಕು ದಿನಗಳಿಂದ ತಮಿಳುನಾಡು ರಾಜಕೀಯದಲ್ಲಿ ಮನೆ ಮಾಡಿದ್ದ ಅನಿಶ್ಚಿತತೆಗೆ ತೆರೆ ಬಿದ್ದಿದ್ದು, ನಟ ವಿಜಯ್‌ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಅಂತಿಮವಾಗಿ ಬಹುಮತದ ಸಂಖ್ಯಾಬಲ ಕ್ರೋಢೀಕರಿಸುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ಸಂಜೆ 6 ಗಂಟೆಗೆ ರಾಜ್ಯಪಾಲ ಆರ್‌.ವಿ. ಅರ್ಲೇಕರ್ ಅವರನ್ನು ಭೇಟಿ ಮಾಡಲಿರುವ ವಿಜಯ್ ಸರ್ಕಾರ ರಚನೆಗೆ ಅಧಿಕೃತವಾಗಿ ಹಕ್ಕು ಮಂಡಿಸಲಿದ್ದಾರೆ.
ಬದಲಾದ ರಾಜಕೀಯ ಸಮೀಕರಣ:
ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ 234 ಸ್ಥಾನಗಳ ಪೈಕಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಟಿವಿಕೆ, ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯ 62 ವರ್ಷಗಳ ಸುದೀರ್ಘ ಪಾರುಪತ್ಯಕ್ಕೆ ಬ್ರೇಕ್ ಹಾಕಿತ್ತು. ಆದರೆ, ಸರ್ಕಾರ ರಚಿಸಲು ಅಗತ್ಯವಿದ್ದ 118ರ ಮ್ಯಾಜಿಕ್ ಸಂಖ್ಯೆ ತಲುಪಲು 11 ಶಾಸಕರ ಬೆಂಬಲದ ಕೊರತೆ ಎದುರಾಗಿತ್ತು. ಸ್ಪಷ್ಟ ಬೆಂಬಲ ಪತ್ರವಿಲ್ಲದೆ ಸರ್ಕಾರ ರಚನೆಗೆ ಅವಕಾಶ ನೀಡುವುದಿಲ್ಲ ಎಂಬ ರಾಜ್ಯಪಾಲರ ಕಟ್ಟುನಿಟ್ಟಿನ ನಿಲುವು ವಿಜಯ್‌ ಅವರಿಗೆ ಸವಾಲಾಗಿತ್ತು.
ಮೈತ್ರಿ ಬಲ:
ಡಿಎಂಕೆ ಮೈತ್ರಿಕೂಟದಿಂದ ಹೊರಬಂದ ಕಾಂಗ್ರೆಸ್‌ನ ಐವರು ಶಾಸಕರು ಮೊದಲೇ ಬೆಂಬಲ ಘೋಷಿಸಿದ್ದರು. ಇದೀಗ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಸಿಪಿಎಂ ಹಾಗೂ ಸಿಪಿಐ ಪಕ್ಷಗಳು ತಲಾ ಇಬ್ಬರು ಶಾಸಕರ ಬೆಂಬಲ ನೀಡಲು ಒಪ್ಪಿವೆ ಎಂದು ಮೂಲಗಳು ತಿಳಿಸಿವೆ. ಡಿಎಂಕೆ ತನ್ನ ಬದ್ಧ ವೈರಿ ಎಐಎಡಿಎಂಕೆಯೊಂದಿಗೆ ಕೈಜೋಡಿಸಬಹುದು ಎಂಬ ಸಂಶಯಗಳು ಈ ಬೆಳವಣಿಗೆಗೆ ವೇಗ ನೀಡಿದ್ದು, ಅಂತಿಮವಾಗಿ ವಿಜಯ್‌ ಪಾಳಯಕ್ಕೆ ಅಗತ್ಯ ಸಂಖ್ಯಾಬಲ ಒದಗಿ ಬಂದಿದೆ.
​ಸಂಭ್ರಮದ ಕಡಲಾದ ಚೆನ್ನೈ:
ಬಹುಮತದ ಸಂಖ್ಯೆ ಖಚಿತವಾಗುತ್ತಿದ್ದಂತೆಯೇ ಚೆನ್ನೈನ ವಿಜಯ್ ನಿವಾಸದ ಮುಂದೆ ಜಮಾಯಿಸಿದ ನೂರಾರು ಬೆಂಬಲಿಗರು ‘ಟಿವಿಕೆ’ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ವಿಜಯ್ ಅವರು ತಿರುಚ್ಚಿ (ಪೂರ್ವ) ಮತ್ತು ಪೆರಂಬೂರು ಕ್ಷೇತ್ರಗಳ ಪೈಕಿ ಯಾವುದಾದರೂ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿದ್ದು, ಈ ಎಲ್ಲಾ ತಾಂತ್ರಿಕ ಪ್ರಕ್ರಿಯೆಗಳ ನಡುವೆಯೇ ಸರ್ಕಾರ ರಚನೆಯ ಅಧಿಕೃತ ಘೋಷಣೆಗಾಗಿ ಇಡೀ ರಾಜ್ಯ ಕಾತರದಿಂದ ಕಾಯುತ್ತಿದೆ.





























































































error: Content is protected !!
Scroll to Top