ಜಾಗ ಮಂಜೂರಾಗಿದ್ದರೂ ಈಡೇರದ ಬೇಡಿಕೆ
ಕಾರ್ಕಳ : ಕಾರ್ಕಳದಲ್ಲಿ ಆಯುಷ್ ಘಟಕ ತೆರೆಯಲಾಗಿದ್ದರೂ ಸ್ವಂತ ಕಟ್ಟಡವಿಲ್ಲದೇ ಬಳಲುತ್ತಿದೆ. ಆಯುಷ್ ಆಸ್ಪತ್ರೆಗಾಗಿ 2013ರಲ್ಲೇ ಪಶು ಆಸ್ಪತ್ರೆ ಬಳಿ 58 ಸೆಂಟ್ಸ್ ಜಾಗ ಕಾದಿರಿಸಿದ್ದಾಗ್ಯೂ ಯೋಜನೆ ಅನುಷ್ಠಾನವಾಗದೇ ಕಾರ್ಕಳದ ಜನತೆಗೆ ಆಯುಷ್ ಪ್ರಯೋಜನ ಸಮರ್ಪಕವಾಗಿ ಲಭಿಸದಂತಾಗಿದೆ.
10 ಬೆಡ್ನೊಂದಿಗೆ ಆಯುಷ್ ಆಸ್ಪತ್ರೆ ಸ್ಥಾಪಿಸುವ ನಿಟ್ಟಿನಲ್ಲಿ 2.5 ಕೋಟಿ ರೂ. ಯೋಜನೆಯನ್ನು ನಿರ್ಮಿತಿ ಕೇಂದ್ರ ಸಿದ್ಧಪಡಿಸಿದ್ದು ಅನುದಾನ ಬಿಡುಗಡೆಗಾಗಿ ಆಯುಷ್ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಆಯುಷ್ ಆಸ್ಪತ್ರೆಗಾಗಿ ನಿರಂತರ ಪ್ರಯತ್ನ ನಡೆಸಲಾಗಿತ್ತಾದರೂ ಸರಕಾರ ಮಂಜೂರುಗೊಳಿಸಿ ಅನುದಾನ ಒದಗಿಸದ ಕಾರಣ ಯೋಜನೆಯಿನ್ನೂ ಕೈಗೂಡಿಲ್ಲ.

Ayush ಎಂದರೆ ಆಯುರ್ವೇದ ( ಆಯುರ್ವೇದ ಹಾಗೂ ಪಂಚಕರ್ಮ ಚಿಕಿತ್ಸೆ), ಯೋಗ (ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ), ಯುನಾನಿ (ಸಾಂಪ್ರದಾಯಿಕ ಯುನಾನಿ ವೈದ್ಯ ಪದ್ಧತಿ), ಸಿದ್ಧ (ಸಿದ್ಧ ವೈದ್ಯಕೀಯ ಪದ್ಧತಿ), ಹೋಮಿಯೋಪಥಿ (ಹೋಮಿಯೋಪಥಿ ಚಿಕಿತ್ಸೆ) ಆಗಿದೆ. ಪಂಚಕರ್ಮ ಚಿಕಿತ್ಸೆ, ಕೀಲು ನೋವು, ಸಂಧಿವಾತ, ಬೆನ್ನುನೋವು, ಮಧುಮೇಹಕ್ಕೆ ಪೂರಕ ಆಹಾರಕ್ರಮ, ಯೋಗ, ರಕ್ತದೊತ್ತಡ ನಿರ್ವಹಣೆ, ಧ್ಯಾನ, ಅಲರ್ಜಿ, ಚರ್ಮದ ಸಮಸ್ಯೆಗೆ ಪರಿಹಾರ ಸೇರಿದಂತೆ ಆಯುಷ್ನಲ್ಲಿ ಸಂಪೂರ್ಣವಾಗಿ ಉಚಿತ ಔಷಧಿ, ಚಿಕಿತ್ಸೆ ದೊರೆಯಲಿದೆ.
ರಾಷ್ಟ್ರೀಯ ಆಯುಷ್ ಮಿಷನ್ (NAM)
ಆಯುಷ್ಗೆ ಉತ್ತೇಜನ ಮತ್ತು ಆರೋಗ್ಯಕರ ಜೀವನಶೈಲಿಗೆ ಪ್ರೇರೆಪಣೆ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಆಯುಷ್ ಮಿಷನ್ ಕಾರ್ಯನಿರ್ವಹಿಸುತ್ತಿದೆ. ಆಯುಷ್ ಆಸ್ಪತ್ರೆಗಳ ಅಭಿವೃದ್ಧಿ, ಆರೋಗ್ಯ ಜಾಗೃತಿ, ಔಷಧ ಪೂರೈಕೆ, ವೈದ್ಯರ ನೇಮಕಾತಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ ಸೇವೆಗಳ ವಿಸ್ತರಣೆಗೆ ರಾಷ್ಟ್ರೀಯ ಆಯುಷ್ ಮಿಷನ್ ಸಹಕರಿಸುತ್ತಿದೆ.
7 ಸಿಬ್ಬಂದಿ
ಆಯುಷ್ ಪ್ರತ್ಯೇಕ ಇಲಾಖೆ ಆಗಿದ್ದರೂ ಪ್ರಸ್ತುತ ಕಾರ್ಕಳ ಸಾರ್ವಜನಿಕ ತಾಲೂಕು ಆಸ್ಪತ್ರೆಯ ಹೊರರೋಗಿ ವಿಭಾಗದ ಒಂದೇ ಕೊಠಡಿಯಲ್ಲಿ ಕಾರ್ಯಾಚರಿಸುತ್ತಿದೆ. ಡಾ. ಸುಜಾತ ಶೆಟ್ಟಿ ಆಯುಷ್ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಕಳದಲ್ಲಿ ಆಯುಷ್ ಆಸ್ಪತ್ರೆ ನಿರ್ಮಾಣವಾದಲ್ಲಿ ವೈದ್ಯರು ಸೇರಿದಂತೆ ೭ ಮಂದಿ ಸಿಬ್ಬಂದಿ ಸೇವೆ ಸಲ್ಲಿಸಲಿದ್ದಾರೆ. ಸರಕಾರದಿಂದ ಕಟ್ಟಡ ನಿರ್ಮಾಣಗೊಂಡಲ್ಲಿ ಬಳಿಕ ಎನ್ಎಎಂ ಅನುದಾನ, ಸಿಎಸ್ಆರ್ ನಿಧಿಯಿಂದ ಅಭಿವೃದ್ಧಿಪಡಿಸಬಹುದಾಗಿದೆ. ಕಾರ್ಕಳದ ಜನತೆಯ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸಲಿರುವ ಆಯುಷ್ ಆಸ್ಪತ್ರೆ ಶೀಘ್ರದಲ್ಲೇ ಮಂಜೂರಾಗಿ ಅನುದಾನ ಬಿಡುಗಡೆಯಾಗಬೇಕಿದೆ.
2021ರಲ್ಲಿ ಕಾರ್ಕಳಕ್ಕೆ ಆಯುಷ್ ಆಸ್ಪತ್ರೆ ಮಂಜೂರುಗೊಂಡಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಪೊಲೀಸ್ ಠಾಣೆ ಸಮೀಪ ಜಾಗ ಗುರುತಿಸಿ 55 ಸೆಂಟ್ಸ್ ನೋಂದಣಿ ಮಾಡಲಾಗಿದ್ದು, ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಒದಗಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಅನುದಾನಕ್ಕಾಗಿ ಪ್ರಯತ್ನಿಸಲಾಗುವುದು.
ವಿ. ಸುನಿಲ್ ಕುಮಾರ್
ಶಾಸಕರು
ಕಾರ್ಕಳ ತಾಲೂಕು ಆಯುಷ್ ಘಟಕ ನಿರ್ಮಾಣಕ್ಕೆ ಸೆಂಟ್ಸ್ ಜಾಗ ಲಭ್ಯವಿದ್ದು ನ್ಯಾಷನಲ್ ಆಯುಷ್ ಮಿಷನ್ ಮತ್ತು ರಾಜ್ಯ ಬಜೆಟ್ಗೂ 2 ಕೋಟಿ ರೂ. ಬೇಡಿಕೆ ಪಟ್ಟಿ ಸಲ್ಲಿಸಲಾಗಿದೆ.
ಡಾ. ಪ್ರಕಾಶ್ ನಾಯ್ಕ
ಜಿಲ್ಲಾ ಆಯುಷ್ ಅಧಿಕಾರಿ, ಉಡುಪಿ






























































