ತಪ್ಪು ದಾರಿ ಹಿಡಿದದ್ದಕ್ಕೆ ಯುವತಿಯನ್ನು ಹೆತ್ತವರೇ ಕರೆದೊಯ್ದರು, ಇದು ಕಿಡ್ನಾಪ್ ಅಲ್ಲ ಎಂದ ಕಣಚೂರು ಕಾಲೇಜಿನ ಡೀನ್

ಕಾಲೇಜ್ ಕ್ಯಾಂಪಸ್‌ನಿಂದಲೇ ವಿದ್ಯಾರ್ಥಿನಿಯ ಅಪಹರಣ ಕೇಸಿಗೆ ‌ಟ್ವಿಸ್ಟ್

ಮಂಗಳೂರು: ಕಣಚೂರು ಮೆಡಿಕಲ್ ಕಾಲೇಜಿನ ಕ್ಯಾಂಪಸ್ ಒಳಗಡೆಯೇ ವಿದ್ಯಾರ್ಥಿನಿಯ ಅಪಹರಣದ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಿಸುತ್ತಿದ್ದಂತೆ ಎಚ್ಚೆತ್ತ ಕಣಚೂರು ಮೆಡಿಕಲ್ ಕಾಲೇಜಿನ ಡೀನ್ ಡಾ.ಶಾನವಾಜ್ ಮಾನಿಪ್ಪಾಡಿ, ಶುಕ್ರವಾರ ಸಂಜೆ ತರಾತುರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ್ದಾರೆ. ವಿದ್ಯಾರ್ಥಿನಿ ಅಪಹರಣ ಆಗಿಲ್ಲ. ಸಂಬಂಧಿಕರೇ ಕರೆದೊಯ್ದಿದ್ದಾರೆ, ಈ ವಿಷಯ ಆಕೆಗೂ ಗೊತ್ತಿತ್ತು. ಸ್ಥಳದಲ್ಲಿದ್ದ ಇತರ ವಿದ್ಯಾರ್ಥಿಗಳಿಗೂ ತಿಳಿದಿತ್ತು ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿನಿ ವಿದ್ಯಾಭ್ಯಾಸದ ಕಡೆ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ಎರಡು ದಿನಗಳ ಹಿಂದೆ ಹೆತ್ತವರು ಈ ಬಗ್ಗೆ ವಿಚಾರಿಸಲು ಕಾಲೇಜಿಗೆ ಬಂದಿದ್ದರು. ಅಂದು ಕೂಡ ವಿದ್ಯಾರ್ಥಿನಿ ತರಗತಿಗೆ ಬಾರದೆ ಪಾಂಡೇಶ್ವರ ಠಾಣೆಗೆ ತೆರಳಿ ಹೆತ್ತವರ ವಿರುದ್ಧವೇ ದೂರು ನೀಡಿದ್ದಳು. ವಿದ್ಯಾರ್ಥಿನಿ ಕಾಲೇಜಿನ ಹಾಸ್ಟೆಲಿಗೂ ಬಾರದೇ ಇದ್ದುದನ್ನ ಕಂಡು ನಾವು ಉಳ್ಳಾಲ ಠಾಣೆಗೆ ವಿಚಾರ ತಿಳಿಸಿದ್ದೆವು. ಮರುದಿನ ಪೊಲೀಸರು ಆಕೆಯನ್ನ ಕರೆತಂದು ಹೆತ್ತವರ ಸಮಕ್ಷಮದಲ್ಲಿ ನಮ್ಮ ಹಾಸ್ಟೆಲೆ ತಂದು ಬಿಟ್ಟಿದ್ದರು.

ನಿನ್ನೆ (ಗುರುವಾರ) ಆಕೆಯ ಹೆತ್ತವರು ಮತ್ತೆ ಬಂದಿದ್ದು ಸ್ವಲ್ಪ ಬಲವಂತವಾಗಿ ಕರಕೊಂಡು ಹೋಗಿದ್ದಾರೆ. ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಯನ್ನ ಕರಕೊಂಡು ಹೋಗುತ್ತಿರುವುದು ಆಕೆಯ ಹೆತ್ತವರೆಂದು ಅರಿವಿತ್ತು. ಹಾಗೆ ಯಾರೂ ಅದನ್ನ ವಿರೋಧಿಸಿಲ್ಲ. ಆದರೆ ಆ ಘಟನೆಯ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದ ಪರಿಣಾಮ ನಮ್ಮ ಸಂಸ್ಥೆಯ ಘನತೆಗೆ ಧಕ್ಕೆ ಬರುವಂತಾಗಿದೆ. ಜಾಲತಾಣ, ಮಾಧ್ಯಮಗಳಲ್ಲಿ ಇಲ್ಲ ಸಲ್ಲದ ವರದಿ ಹಾಗೂ ಪೋಸ್ಟ್ ಮಾಡಬಾರದು. ಅಂತಹ ವೀಡಿಯೋ, ಪೋಸ್ಟ್ ಗಳನ್ನ ತೆಗೆದು ಹಾಕಬೇಕೆಂದು ಶಹನವಾಝ್ ಮನವಿ ಮಾಡಿದರು.

ವಿದ್ಯಾರ್ಥಿನಿಯನ್ನ ಕರಕೊಂಡು ಹೋಗುವಾಗ ಆಕೆಯ ತಾಯಿ, ತಂದೆ, ತಂಗಿ, ತಮ್ಮ ಅಂಕಲ್ ಇದ್ರು. ಹೊರಗಿನವರು ಯಾರು ಬಂದರೂ ಇಲ್ಲಿಂದ ಅಪಹರಣ ಮಾಡಲು ಸಾಧ್ಯವಿಲ್ಲ. ಕಾನೂನಲ್ಲಿ ಯುವತಿಗೆ ಪ್ರಬುದ್ಧತೆಯ ವಿಚಾರ ಬರಬಹುದು. ಆದರೆ ಭಾರತೀಯ ಸಂಸ್ಕೃತಿ ಪ್ರಕಾರ ಪೋಷಕರಿಗೆ ಮಕ್ಕಳನ್ನ ಕರಕೊಂಡು ಹೋಗುವ ಹಕ್ಕಿದೆ, ತಪ್ಪು ದಾರಿ ಹೋದದ್ದಕ್ಕೆ ಬಲವಂತ ಮಾಡಿರಬೇಕೆ ಹೊರತು ಇದು ಅಪಹರಣ ಅಲ್ಲವೆಂದು ಸಮರ್ಥಿಸಿಕೊಂಡರು. ಶಹನವಾಝ್ ಅವರು

ವಿದ್ಯಾರ್ಥಿನಿಯನ್ನ ಹೆತ್ತವರು ಕರಕೊಂಡು ಹೋದ ತಕ್ಷಣವೇ ನಾವು ಉಳ್ಳಾಲ ಠಾಣೆಗೆ ಮಾಹಿತಿ ನೀಡಿದ್ದೆವು. ಠಾಣೆಯವರು ನಮ್ಮ ದೂರಿಗೆ ಸ್ವೀಕೃತಿಯನ್ನೂ ಕಳಿಸಿದ್ದರೆಂದು ಪ್ರತಿಯನ್ನ ಶಾನವಾಝ್ ಅವರು ಮಾಧ್ಯಮಗಳಿಗೆ ತೋರಿಸಿದರು.

ಅಪಹರಣದ ಬಗ್ಗೆ ನಮಗೆ ದೂರು ಬಂದಿದ್ದರೆ ತಕ್ಷಣವೇ ಕ್ರಮ ಕೈಗೊಳ್ಳುತ್ತಿದ್ದೆವೆಂದು ಮಂಗಳೂರು ಕಮೀಷನರ್ ಸುಧೀರ್ ರೆಡ್ಡಿಯವರು ಹೇಳಿಕೊಂಡಿದ್ದರೆ, ಇತ್ತ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕಾಲೇಜಿನ ಡೀನ್ ತಾವು ನಿನ್ನೆಯೇ ಪೊಲೀಸರಿಗೆ ದೂರು ನೀಡಿದ್ದೇವೆಂದು ಹೇಳಿಕೊಂಡಿದ್ದಾರೆ. ಇದರ ಸತ್ಯಾಸತ್ಯತೆಯನ್ನ ಪೊಲೀಸರೇ ತಿಳಿಸಬೇಕಿದೆ.





























































































































error: Content is protected !!
Scroll to Top