ಸಿಂಧೂ ಜಲ ಒಪ್ಪಂದ ನಿಲುವು ಸ್ಪಷ್ಟ, ಯಾವ ಬದಲಾವಣೆಯೂ ಇಲ್ಲ ಎಂದ ಭಾರತ

ನವದೆಹಲಿ: ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದ ಹಾಗೆ ಭಾರತದ ನಿಲುವು ಸ್ಪಷ್ಟವಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಸ್ಪಷ್ಟಪಡಿಸಿದೆ.

ಎಸ್‌ಸಿಒ ನಾಗರಿಕತೆಯ ಸಂವಾದ ವೇದಿಕೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ಥಾನದ ಸಚಿವ ಮುಸಾದಿಕ್ ಮಲಿಕ್ ನವದೆಹಲಿಗೆ ಭೇಟಿ ನೀಡಿರುವ ಬೆನ್ನಲ್ಲೇ ಭಾರತ ಈ ಹೇಳಿಕೆ ನೀಡಿದೆ.

ಶುಕ್ರವಾರ ಮುಂಜಾನೆ ನವದೆಹಲಿಗೆ ಆಗಮಿಸಿದ ಮುಸಾದಿಕ್ ಮಲಿಕ್, ಸಂಜೆ ಆರಂಭವಾದ ಮೂರು ದಿನಗಳ ಸಂವಾದ ವೇದಿಕೆಯ ಮೊದಲ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಐತಿಹಾಸಿಕ ಪುರಾಣ ಕಿಲಾದಲ್ಲಿ ಭಾರತ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಅಕ್ಟೋಬರ್ 28ರಂದು ಭಾರತವು ಪಾಕಿಸ್ಥಾನ ಸೇರಿದಂತೆ ಎಸ್‌ಸಿಒ ಸದಸ್ಯ ರಾಷ್ಟ್ರಗಳೆಲ್ಲಕ್ಕೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವುದಾಗಿ ಘೋಷಿಸಿತ್ತು. ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯದಂತೆ ಈ ಆಹ್ವಾನ ನೀಡಲಾಗಿದೆ ಎಂದು ತಿಳಿಸಿತ್ತು.

ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ ನಂತರ, ಪಾಕಿಸ್ಥಾನದ ವಿರುದ್ಧ ಕೈಗೊಂಡ ದಂಡನಾತ್ಮಕ ಕ್ರಮಗಳ ಭಾಗವಾಗಿ, ಭಾರತವು 2025 ರಲ್ಲಿ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿತ್ತು.





























































































































error: Content is protected !!
Scroll to Top