ಅಚ್ಚೇದಿನ್ ಹೇಳಿ ಕೊಚ್ಚೇದಿನ್ ನೀಡಿದ್ದಾರೆ – ಉದಯ್ ಶೆಟ್ಟಿ ಮುನಿಯಾಲು

ಕಾರ್ಕಳ : ಬಿಜೆಪಿಯವರು ಅಚ್ಚೇದಿನ್‌ ಕೊಡುತ್ತೇವೆ ಎಂದು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಜನರಿಗೆ ಕೊಚ್ಚೇದಿನ್‌ ನೀಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಉದಯ್‌ ಶೆಟ್ಟಿ ಮುನಿಯಾಲು ಹೇಳಿದ್ದಾರೆ.
ಅವರು ಅಡುಗೆ ಅನಿಲ ದರ ಏರಿಸಿರುವ ಕೇಂದ್ರ ಸರಕಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಯುವ ಕಾಂಗ್ರೆಸ್ ಸಮಿತಿ ಕಾರ್ಕಳ ನೇತೃತ್ವದಲ್ಲಿ ಮೇ 6ರಂದು ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಬಿಜೆಪಿಯವರು ದೇಶದಲ್ಲಿ ಅಧಿಕಾರವನ್ನು ವಾಮಮಾರ್ಗದಲ್ಲಿ ಪಡೆಯುತ್ತಿದ್ದಾರೆ. ಆದರೆ, ಅಧಿಕಾರ ಪಡೆದ ಬಳಿಕ ಜನರ ನಿರೀಕ್ಷೆಯನ್ನು ಈಡೇರಿಸುತ್ತಿಲ್ಲ. ಗ್ಯಾಸ್, ಪೆಟ್ರೋಲ್, ಡಿಸೇಲ್ ಬೆಲೆಯನ್ನು ದೊಡ್ಡ ಮಟ್ಟದಲ್ಲಿ ಏರಿಕೆ ಮಾಡಿದರೂ ದೇಶದಲ್ಲಿ ಬಡಜನರ ಕೂಗನ್ನು ಯಾರೂ ಕೇಳುವವರು ಇಲ್ಲ ಎಂದು ಹೇಳಿದ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ‌ ಯುದ್ಧದ ಪರಿಣಾಮವಾಗಿ ಗ್ಯಾಸ್, ಪೆಟ್ರೋಲ್ ಬೆಲೆ ಜಾಸ್ತಿಯಾಯಿತು ಎನ್ನಬಹುದು. ಆದರೆ, ಅದನ್ನು ಬಿಟ್ಟು ಬೇರೆ ಯಾವುದರ ಬೆಲೆ ಕಡಿಮೆಯಾಗಿದೆ ಎಂದು ಪ್ರಶ್ನಿಸಿದರು.
ಇಂದು ಗ್ಯಾಸ್‌ ಬೆಲೆ ಏರಿಕೆಯಾಗಿದೆ ನಾಳೆ ಮನೆಯೊಳಗಿನ ಆರ್‌ಟಿಸಿ ಬದಲಾದರೂ ಯಾವುದೆ ಅಚ್ಚರಿಯಿಲ್ಲ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಗ್ಯಾಸ್‌ಗೆ ಏಕಕಾಲದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಲೆ ಏರಿಕೆ ಮಾಡಿದ ಮೊದಲ ಪ್ರದಾನಿ ನರೇಂದ್ರ ಮೋದಿ. ಯಾವ ದೇಶದಲ್ಲೂ ಮಾಡದ ಇತಿಹಾಸವನ್ನು ಭಾರತದಲ್ಲಿ ನಿರ್ಮಿಸಿದ್ದಾರೆ. ಅವರು ಬೆಲೆ ಏರಿಕೆಯ ಬಾದ್‌ಷಾ ಎಂದು ಹೇಳಿದರು.

ದೇಶದ ಆರ್ಥಿಕತೆ ದುಸ್ಥಿತಿಗೆ ತಲುಪುತ್ತಿದೆ – ಶೇಖರ ಮಡಿವಾಳ
ಹಿರಿಯ ಕಾಂಗ್ರೆಸ್‌ ನಾಯಕ ಶೇಖರ ಮಡಿವಾಳ ಮಾತನಾಡಿ, ರಾಜ್ಯದಲ್ಲಿ ದಾವಣಗೆರೆ, ಬಾಗಲಕೋಟೆಯಲ್ಲಿ ದೊಡ್ಡ ಗೆಲುವು ಸಾಧಿಸಿರುವುದು ಸಂತಸದಾಯಕ. ಇನ್ನು ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ತಮಿಳುನಾಡಿನಲ್ಲೂ ಕಾಂಗ್ರೆಸ್‌ಗೆ ಆಡಳಿತದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಇದರಿಂದ ದೇಶದ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷ ಪುನಶ್ಚೇತನಗೊಳ್ಳುತ್ತಿದೆ ಎಂದ ಅವರು ಕೇಂದ್ರ ಸರಕಾರದ ವಿದೇಶಾಂಗ ನೀತಿಯ ವೈಫಲ್ಯದಿಂದಾಗಿ ದೇಶ ಆರ್ಥಿಕವಾಗಿ ದುಸ್ಥಿತಿಗೆ ತಲುಪುತ್ತಿದೆ ಈ ಬಗ್ಗೆ ಜನ ಜಾಗರೂಕರಾಗಬೇಕು ಎಂದರು.

ಬಿಜೆಪಿ ಏಕೆ ಆಡಳಿತ ಮಾಡುತ್ತಿದೆ – ಬಿಪಿನ್ ಚಂದ್ರಪಾಲ್ ನಕ್ರೆ
ಜಿಲ್ಲಾ ಕಾಂಗ್ರೆಸ್‌ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ, ಮತದಾರರ ವೈಫಲ್ಯದಿಂದಾಗಿ ದೇಶದ ಪರಿಸ್ಥಿತಿ ಇಂದು ಈ ಮಟ್ಟಿಗೆ ತಲುಪಿದೆ. ಅಸಮರ್ಥ ನಾಯಕನನ್ನು ಆಯ್ಕೆ ಮಾಡಿ ಸಮಸ್ಯೆ ಪರಿಹರಿಸಬೇಕೆಂದರೆ ಅದು ಸಾಧ್ಯವೇ ಎಂದ ಅವರು ಈ ಬಗ್ಗೆ ಜನತೆ ಆತ್ಮಾವಲೋಕನ ಮಾಡಬೇಕು. ಪ್ರಹ್ಲಾದ್ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಗ್ಯಾಸ್ ಬೆಲೆ ಏರಿಕೆ ಸರಕಾರದ ಕೈಯಲ್ಲಿ ಇಲ್ಲ ಅದು ಕಂಪನಿಯ ಹೊಣೆ ಎನ್ನುತ್ತಾರೆ. ಹಾಗಾದರೆ ಬಿಜೆಪಿ ಏಕೆ ಆಡಳಿತ ಮಾಡುತ್ತಿದೆ, ನೈಸರ್ಗಿಕ ಅನಿಲ ಮತ್ತು ಪೆಟ್ರೋಲ್ ಸಚಿವಾಲಯ ಏನು ಮಾಡುತ್ತಿದೆ ಎಂದು ಹೇಳಿದರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್ ಮಾತನಾಡಿ, ಬಿಜೆಪಿಯವರು ಕಾಂಗ್ರೆಸ್ 70 ವರ್ಷದಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದರು. ಆದರೆ, ಕಾಂಗ್ರೆಸ್ ಮಾಡದ ಸಾಧನೆ ಇಂದು ಬಿಜೆಪಿ ಮಾಡಿದೆ. ಕಾಂಗ್ರೆಸ್ ಅವಧಿಯಲ್ಲಿ ಗ್ಯಾಸ್‌ನಲ್ಲಿ ಅಡುಗೆ ಮಾಡುತ್ತಿದ್ದ ಮಹಿಳೆಯರು ಇಂದು ಕಾಡಿಗೆ ಹೋಗಿ ಕಟ್ಟಿಗೆ ತಂದು ಅಡುಗೆ ಮಾಡುವಂತ ಪರಿಸ್ಥಿತಿಗೆ ಬಂದಿದ್ದಾರೆ. ಅಧಿಕಾರ ಕೊಟ್ಟ ಕೈ ಇಂದು ಗ್ಯಾಸ್ ಸಿಲಿಂಡರ್ ಹಿಡಿದು ಬಿದಿಗಿಳಿಯುವ ಪರಿಸ್ಥಿತಿಗೆ ಬಂದಿದೆ ಎಂದರು.

ಪ್ರತಿಭಟನೆಯಲ್ಲಿ ಕಾರ್ಕಳ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ, ಕಾರ್ಕಳ ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಲಿಕ್ ಅತ್ತೂರ್, ಪುರಸಭಾ ಮಾಜಿ ಅಧ್ಯಕ್ಷರಾದ ರೆಹಮತ್ ಏನ್ ಶೇಖ್, ಪ್ರತಿಮಾ ರಾಣೆ, ಮಾಜಿ ಸದಸ್ಯರಾದ ವಿನ್ನಿ ಬೋಲ್ಡ್ ಮೆಂಡೋನ್ಸ, ವಿವೇಕಾನಂದ ಶೆಣೈ, ಕೆಎಂಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ ಮುಡಾರು, ದುರ್ಗಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಕೃಷ್ಣ ದುರ್ಗಾ, ದೇವದಾಸ್, ಅಣ್ಣಪ್ಪ ನಕ್ರೆ, ಸುನಿಲ್‌ ಭಂಡಾರಿ ಸೇರಿದಂತೆ ಬ್ಲಾಕ್‌ ಕಾಂಗ್ರೆಸ್‌ ವಿವಿಧ ಘಟಕದ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್‌ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರ್ವಹಸಿದರು. ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಕಾರ್ಕಳ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ವಂದಿಸಿದರು.









































































































error: Content is protected !!
Scroll to Top