ಮೇ 7ಕ್ಕೆ ವಿಜಯ್‌ ಪದಗ್ರಹಣ – ಬಹುಮತಕ್ಕೆ 10 ಸ್ಥಾನಗಳ ಕೊರತೆ ನಡುವೆಯೂ ಆಡಳಿತಕ್ಕೆ ದಳಪತಿ ಸಜ್ಜು

ಚೆನ್ನೈ : ತಮಿಳುನಾಡು ಚುನಾವಣೆಯಲ್ಲಿ ಹೊಸ ರಾಜಕೀಯ ಬಿರುಗಾಳಿ ಎಬ್ಬಿಸಿರುವ ಟಿವಿಕೆ ಪಕ್ಷದ ಮುಖ್ಯಸ್ಥ, ನಟ ವಿಜಯ್ ಅವರು ಮೇ 7ರಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೇ 6 ರಂದು ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಅವರನ್ನು ಭೇಟಿಯಾಗಲಿರುವ ವಿಜಯ್‌ ಅವರು ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಮೇ 7ರಂದು ಚೆನ್ನೈನ ಜವಾಹರ್‌ಲಾಲ್‌ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಆದರೆ ಪೂರ್ಣ ಬಹುಮತಕ್ಕೆ (118) ಇನ್ನೂ 10 ಸ್ಥಾನಗಳ ಕೊರತೆ ನಡುವೆ ವಿಜಯ್‌ ಹೇಗೆ ಸರಕಾರ ರಚನೆ ರಚಿಸಲಿದ್ದಾರೆ ಯಾವ ಪಕ್ಷದ ಬೆಂಬಲ ಪಡೆಯಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ.

ತಮಿಳುನಾಡು ವಿಧಾನಸಭೆಯ 234 ಸ್ಥಾನಗಳಲ್ಲಿ ಟಿವಿಕೆ 108 ಸ್ಥಾನ ಗಳಿಸಿದೆ. ಬಹುಮತಕ್ಕೆ 10 ಸ್ಥಾನಗಳ ಕೊರತೆ ಎದುರಿಸುತ್ತಿದೆ. ಆದರೆ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ವಿಜಯ್‌ ಪೆರಂಬೂರ್‌ ಕ್ಷೇತ್ರವನ್ನು ಉಳಿಸಿಕೊಂಡು ತಿರುಚುನಾಪಳ್ಳಿ ಪೂರ್ವ ಕ್ಷೇತ್ರವನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ. ಹೀಗಾದಲ್ಲಿ ಟಿವಿಕೆ ಬಲಾಬಲ 107ಕ್ಕೆ ಕುಸಿದು 11 ಸ್ಥಾನ ಕೊರತೆ ಎದುರಾಗಲಿದೆ. ಇದರ ನಡುವೆ ಕಾಂಗ್ರೆಸ್‌ ಎಐಡಿಎಂಕೆ ಅಥವಾ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳ ಪೈಕಿ ಯಾರ ಬೆಂಬಲವನ್ನು ಅವರು ಪಡೆಯಲಿದ್ದಾರೆ ಎಂಬುದು ಸದ್ಯದ ಕುತೂಹಲ.

ಕಾಂಗ್ರೆಸ್‌ ಬೆಂಬಲ ಕೋರಿದ್ದಾರೆ – ವೇಣುಗೋಪಾಲ್‌
ತಮಿಳುನಾಡಿನಲ್ಲಿ ಸರಕಾರ ರಚಿಸಲು ವಿಜಯ್‌ ಅವರು ಕಾಂಗ್ರೆಸ್‌ನ ಬೆಂಬಲ ಕೋರಿದ್ದಾರೆ. ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುವ ಆಯ್ಕೆಯನ್ನು ತಮಿಳುನಾಡು ಕಾಂಗ್ರೆಸ್‌ ಸಮಿತಿಗೆ ಬಿಡಲಾಗಿದೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಅಧಿಕಾರ ನಡೆಸಲು ಅವಕಾಶ ನೀಡದಿರುವುದು ಕಾಂಗ್ರೆಸ್‌ ಉದ್ದೇಶವಾಗಿದೆ ಎಂದಿದ್ದಾರೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌.

a href="#" target="_blank">







































error: Content is protected !!
Scroll to Top