ಗರಿಗೆದರಿದ ಬಂಗಾರದ ಮಾರುಕಟ್ಟೆ, ಗುಣಮಟ್ಟದ ಆತಂಕ
ಬೆಂಗಳೂರು: ಮದುವೆ ಸೀಸನ್ ಆರಂಭವಾಗಿರುವ ಹೊತ್ತಲ್ಲೇ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿರುವುದು ಜನರಿಗೆ ಸಂತಸ ತಂದಿದೆ. ಬಂಗಾರದ ದರ ಕುಸಿಯುತ್ತಿದ್ದಂತೆ ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಬೆಲೆ ಇಳಿಕೆಯ ಲಾಭ ಪಡೆಯಲು ಮುಂದಾಗಿರುವ ಗ್ರಾಹಕರು ಚಿನ್ನದ ಶುದ್ಧತೆ, ತೂಕ ಮತ್ತು ಅಧಿಕೃತ ಬಿಲ್ ಪರಿಶೀಲಿಸುವಂತೆ ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.
ಕಳೆದ ಕೆಲ ದಿನಗಳಿಂದ ಚಿನ್ನದ ದರದಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಕೇವಲ 10 ದಿನಗಳ ಅವಧಿಯಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 14,720 ರೂಪಾಯಿ ಇಳಿಕೆಯಾಗಿದೆ. ಇದರಿಂದ ಮದುವೆ ಖರೀದಿಗೆ ಚಿನ್ನ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಅನುಕೂಲವಾಗಿದೆ. ಚಿನ್ನದ ಮಾರುಕಟ್ಟೆಯಲ್ಲಿ ವಹಿವಾಟು ಚುರುಕಾಗಿದೆ. ಬೆಂಗಳೂರಿನ ಚಿನ್ನದ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಶೇಕಡಾ 20ರಿಂದ 25ರಷ್ಟು ಹೆಚ್ಚಾಗಿದೆ ಎಂಬುದು ತಿಳಿದುಬಂದಿದೆ.

2026ರಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಚಿನ್ನದ ಬೆಲೆ ತಲುಪಿರುವ ಹಿನ್ನೆಲೆಯಲ್ಲಿ ಮದುವೆಗಾಗಿ ಆಭರಣ ಖರೀದಿಸುವುದರ ಜೊತೆಗೆ, ಹೂಡಿಕೆಯ ಉದ್ದೇಶದಿಂದಲೂ ಜನರು ಚಿನ್ನ ಖರೀದಿಸಲು ಮುಂದಾಗಿದ್ದಾರೆ. ಬೆಲೆ ಇಳಿಕೆಯ ಲಾಭ ಪಡೆಯಲು ಗ್ರಾಹಕರು ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ಚಿನ್ನದ ಬೆಲೆ ಕಡಿಮೆಯಾಗಿರುವುದರಿಂದ ಖರೀದಿಗೆ ಮುಂದಾಗಿರುವುದಾಗಿ ಗ್ರಾಹಕರೂ ಸಂತಸ ವ್ಯಕ್ತಪಡಿಸಿದ್ದಾರೆ.
ಚಿನ್ನದ ಬೆಲೆ ಇಳಿಕೆಯಿಂದ ಖರೀದಿ ಚಟುವಟಿಕೆ ಹೆಚ್ಚಾಗಿರುವ ಬೆನ್ನಲ್ಲೇ, ಗ್ರಾಹಕರು ಆಭರಣ ಖರೀದಿಸುವಾಗ ಎಚ್ಚರಿಕೆ ವಹಿಸುವಂತೆ ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಸೂಚಿಸಿದೆ. ಚಿನ್ನದ ತೂಕ ಹೆಚ್ಚಿಸುವ ಉದ್ದೇಶದಿಂದ ರೀನಿಯಂ, ಇರಿಡಿಯಂನಂತಹ ಲೋಹಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ವ್ಯಾಪಾರಿಗಳಿಗೆ ಜಿಎಸ್‌ಟಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಚಿನ್ನ ಖರೀದಿಸುವ ಮುನ್ನ ಹಾಲ್‌ಮಾರ್ಕ್ ಜೊತೆಗೆ HUID ಕೋಡ್ ಪರಿಶೀಲಿಸುವುದು ಮುಖ್ಯ. ಆಭರಣದ ತಯಾರಕರು, ಮಾರಾಟಗಾರರು ಮತ್ತು ಹಾಲ್‌ಮಾರ್ಕ್‌ಗೆ ಸಂಬಂಧಿಸಿದ ವಿವರಗಳನ್ನು ಗ್ರಾಹಕರು ಖಚಿತಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬಿಲ್ ಇಲ್ಲದೆ ಚಿನ್ನ ಖರೀದಿಸಬಾರದು. ಜಿಎಸ್‌ಟಿ ಪಾವತಿಸಿದರೂ ಅಧಿಕೃತ ಬಿಲ್ ಪಡೆಯುವುದು ಅಗತ್ಯ ಎಂದು ಅಸೋಸಿಯೇಷನ್ ಸಲಹೆ ನೀಡಿದೆ.
ಬಿಲ್‌ನಲ್ಲಿ ನಮೂದಿಸಿರುವ ಚಿನ್ನದ ತೂಕ ಮತ್ತು ಆಭರಣದ ನೈಜ ತೂಕವನ್ನು ತಾಳೆ ಮಾಡಬೇಕು. ಅದೇ ರೀತಿ, ಖರೀದಿಸುತ್ತಿರುವ ಆಭರಣ 18 ಕ್ಯಾರೆಟ್ ಅಥವಾ 22 ಕ್ಯಾರೆಟ್ ಎಂಬ ಶುದ್ಧತೆಯ ವಿವರ ಬಿಲ್‌ನಲ್ಲಿ ಸರಿಯಾಗಿ ನಮೂದಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಾಧ್ಯವಾದರೆ ಕ್ಯಾರೆಟ್ ಮೀಟರ್ ಮೂಲಕ ಚಿನ್ನದ ಶುದ್ಧತೆಯನ್ನು ಪರೀಕ್ಷಿಸಿದ ಬಳಿಕವೇ ಖರೀದಿಸುವಂತೆ ಗ್ರಾಹಕರಿಗೆ ಸೂಚಿಸಲಾಗಿದೆ.
ಬೆಲೆ ಇಳಿಯಲು ಕಾರಣವೇನು?
- ಪ್ರಧಾನಿ ನರೇಂದ್ರ ಮೋದಿಯವರು ಚಿನ್ನದ ಬೆಲೆ ಗಗನಕ್ಕೇರಿದ್ದ ಸಂದರ್ಭದಲ್ಲಿ ಚಿನ್ನ ಖರೀದಿಬೇಡಿ, ಇದರಿಂದ ವಿದೇಶ ವಿನಿಮಯದ ಮೇಲಿನ ಒತ್ತಡ ಹೆಚ್ಚಾಗುತ್ತಿದೆ ಎಂದು ದೇಶದ ಜನತೆಗೆ ಮನವಿ ಮಾಡಿದ್ದರು. ಈ ಕಾರಣಕ್ಕೆ ಬಹಳಷ್ಟು ಜನ ಚಿನ್ನ ಖರೀದಿ ಕೈಬಿಟ್ಟಿದ್ದಾರೆ, ಇಲ್ಲವೇ ಮುಂದೂಡಿದ್ದಾರೆ ಎನ್ನಲಾಗುತ್ತಿದೆ.
*ಅಮೆರಿಕದ ಡಾಲರ್ ಬಲಗೊಳ್ಳುತ್ತಿದೆ. ಡಾಲರ್ ಏರಿದರೆ ಚಿನ್ನಕ್ಕೆ ಬೇಡಿಕೆ ತಗ್ಗುತ್ತದೆ.
*ಅಮೆರಿಕದ ರಿಸರ್ವ್ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಕಳೆದ ಬಾರಿಯ ಸಭೆಯಲ್ಲಿ ಬಡ್ಡಿ ದರ ಹೆಚ್ಚಿಸಿತು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಇನ್ನಷ್ಟು ದರ ಏರಿಸುವ ಸುಳಿವನ್ನೂ ನೀಡಿತು. ಬಡ್ಡಿದರ ಹೆಚ್ಚಿರೆ ಅಮೆರಿಕದ ಬಾಂಡ್ಗಳು ಆಕರ್ಷಕವಾಗುತ್ತವೆ. ಚಿನ್ನದಿಂದ ಹೂಡಿಕೆಗಳು ಬಾಂಡ್ಗಳತ್ತ ಹೊರಳುತ್ತವೆ. ಇದು ಚಿನ್ನದ ಬೆಲೆ ಕುಸಿತಕ್ಕೆ ಕಾರಣ.
*ಅಮೆರಿಕ ಚುನಾವಣೆಯಲ್ಲಿ ಟ್ರಂಪ್ ಪಕ್ಷಕ್ಕೆ ಮುಖಭಂಗವಾಗಿರುವುದು, ಮತ್ತು ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮರಳಿ ನೆಲೆಗೊಳ್ಳುವ ಆಶಯ ಹೆಚ್ಚಿರುವುದು ಚಿನ್ನದ ಮೇಲೆ ಹೂಡಿಕೆ ಮಾಡುವ ಅವಶ್ಯಕತೆಯನ್ನು ಕಡಿಮೆ ಮಾಡಿದೆ.
ಚಿನ್ನ ಅಡವಿಟ್ಟವರಿಗೆ ಆತಂಕ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ ಕಾಣಿಸಿಕೊಂಡಿರುವ ಬೆನ್ನಲ್ಲೆ ಚಿನ್ನ ಅಡವಿಟ್ಟು ಸಾಲ ಪಡೆದಿರುವ ಗ್ರಾಹಕರಿಗೆ ಹೊಸ ಆತಂಕ ಎದುರಾಗಿದೆ. ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (NBFC) ಚಿನ್ನದ ಆಭರಣಗನ್ನು ಅಡವಿಟ್ಟು ಸಾಲ ಪಡೆದಿರುವವರ ಸಾಲದ ಮೌಲ್ಯ ಇಳಿಕೆಯಾಗಿರುವ ಹಿನ್ನೆಲೆ, ಕೆಲವು ಸಾಲಗಾರರಿಗೆ ಹೆಚ್ಚುವರಿ ಭದ್ರತೆ ಒದಗಿಸುವಂತೆ ಅಥವಾ ಸಾಲದ ಒಂದು ಭಾಗವನ್ನು ಮರುಪಾವತಿಸುವಂತೆ ನೋಟಿಸ್ ನೀಡಲಾಗುತ್ತಿದೆ.
ಚಿನ್ನದ ಬೆಲೆ ಕುಸಿತದಿಂದಾಗಿ ಸಾಲ ಪಡೆಯುವ ಸಂದರ್ಭದಲ್ಲಿ ಅಡವಿಟ್ಟಿದ್ದ ಆಭರಣಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ಕಡಿಮೆಯಾಗಿದೆ. ಇದರಿಂದ ಸಾಲದ ಮೊತ್ತ ಮತ್ತು ಅಡವಿಟ್ಟ ಚಿನ್ನದ ಮೌಲ್ಯದ ನಡುವಿನ ಅನುಪಾತದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆಯಿದೆ. ಸಾಲದ ಭದ್ರತಾ ಮೌಲ್ಯ ನಿಗದಿತ ಮಟ್ಟಕ್ಕಿಂತ ಕಡಿಮೆಯಾದ ಸಂದರ್ಭದಲ್ಲಿ ಬ್ಯಾಂಕ್‌ಗಳು ಗ್ರಾಹಕರಿಗೆ ಮಾರ್ಜಿನ್ ಕಾಲ್ ನೀಡಬಹುದು.






























































