ಉದಯ ಕುಮಾರ್ ಶೆಟ್ಟಿ ದುಡ್ಡು ಕೊಡಲು ಇದ್ದಲ್ಲಿ ಬಡ್ಡಿ ಸಮೇತ ವಾಪಸ್ ಮಾಡುತ್ತೇವೆ – ಪ್ರದೀಪ್ ಬೇಲಾಡಿ
ಕಾರ್ಕಳ : ಬೈಲೂರು ಉಮಿಕಲ್ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಸುನಿಲ್ ಕುಮಾರ್ ಎಸಗಿರುವ ತಪ್ಪನ್ನು ಮರೆಮಾಚಲು ಇಂದು ಹೆಣಗಾಡುವಂತಾಗಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷ ಸುಭಿತ್ ಎನ್. ಆರ್. ಅಭಿಪ್ರಾಯಪಟ್ಟರು.
ಸೋಮವಾರ ಕಾರ್ಕಳ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಲಾಭ ಪಡೆಯಲು ಸುನಿಲ್ ಕುಮಾರ್ ಎಸಗಿರುವ ತಪ್ಪಿನಿಂದಾಗಿ ಶಿಲ್ಪಿ ಮತ್ತು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಶಿಕ್ಷೆ ಅನುಭವಿಸುವಂತಾಗಿದೆ. ಅಂದು ನೀವು ಪ್ರಾಮಾಣಿಕವಾಗಿರುತ್ತಿದ್ದಲ್ಲಿ ಇಂದು ಶಿಲ್ಪಿ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಜೈಲುವಾಸ ಮಾಡುವುದು ತಪ್ಪುತಿತ್ತು. ವಾಹನ ಜಾಥಾವನ್ನೂ ಮಾಡಬೇಕಿರಲಿಲ್ಲ ಎಂದು ವ್ಯಂಗ್ಯವಾಡಿದರು.

ರುಂಡವಿಲ್ಲದೆ ಎರಡು ಕಾಲುಗಳಲ್ಲಿ ಅತ್ಯಂತ ಅವಮಾನಕಾರಿ ರೀತಿಯಲ್ಲಿ ನಿಂತಿದ್ದ ಪರಶುರಾಮ ಪ್ರತಿಮೆಗೆ ಕಾಯಕಲ್ಪ ದೊರೆಯಬೇಕು. ಅಲ್ಲಿ ಪರಶುರಾಮ ಪ್ರತಿಮೆ ನಿರ್ಮಾಣ ಆಗಬೇಕು ಎನ್ನುವ ಸದುದ್ದೇಶದಿಂದ ನಮ್ಮ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ 5.5 ಲಕ್ಷ ರೂ. ನ್ಯಾಯಾಲಯಕ್ಕೆ ಸಲ್ಲಿಸಿದ್ದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಉದಯ ಶೆಟ್ಟಿ ಮುನಿಯಾಲು ಅವರ ಅರ್ಜಿಯನ್ನು ಎತ್ತಿ ಹಿಡಿದು ಪರಶುರಾಮ ಪ್ರತಿಮೆ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಗೆ ನಿರ್ದೇಶನ ನೀಡಿರುತ್ತದೆ ಎಂದರು.
ಬೊಮ್ಮಾಯಿ ಜಾಥಾದಲ್ಲಿರಬೇಕಿತ್ತು
ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಕಾಂಗ್ರೆಸ್ ಸರ್ಕಾರವು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಉಮಿಕಲ್ ಬೆಟ್ಟದ ಮೇಲೆ ಮತ್ತೆ ಪರಶುರಾಮ ಪ್ರತಿಮೆ ನಿರ್ಮಿಸುವುದಾಗಿ ನಿರ್ಣಯ ಕೈಗೊಂಡಿದ್ದರು, ಇದೀಗ ರಾಜ್ಯ ಸರ್ಕಾರದ ಈ ನಿರ್ಣಯದಲ್ಲಿ ಕ್ರೆಡಿಟ್ ಪಡೆಯಲು ಸುನಿಲ್ ಕುಮಾರ್ ವಾಹನ ಜಾಥಾ ನಡೆಸಿ ಜನರ ಮುಂದೆ ಅಪಹಾಸ್ಯಕ್ಕೀಡಾಗಿದ್ದಾರೆ. ವಾಹನ ಜಾಥಾವನ್ನು ಹೇಗೆ ಮಾಡಿದ್ದೀರಿ ? ನಕಲಿ ಪ್ರತಿಮೆಯನ್ನು ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಿಮ್ಮ ವಾಹನ ಜಾಥಾದೊಂದಿಗೆ ಕರೆದುಕೊಂಡು ಬರುತ್ತಿದ್ದರೆ ಅವರಿಗೆ ನಿಮ್ಮ ಹಣೆಬರಹ ಅರ್ಥವಾಗುತ್ತಿತ್ತು ಎಂದು ಸುಭಿತ್ ವ್ಯಂಗ್ಯವಾಡಿದರು.
ಐತಿಹ್ಯವಿತ್ತು
ನೀವು ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮಾಡುವ ಆರಂಭದಲ್ಲಿಯೇ ಎಡವಿದ್ದೀರಿ. ಉಮಿಕಲ್ ಬೆಟ್ಟದ ಮೇಲೆ ತುಳುನಾಡಿನ ದೈವ ದೇವರ ಐತಿಹ್ಯವಿತ್ತು ಎನ್ನುವ ಮಾತುಗಳನ್ನು ಸ್ಥಳೀಯರು ಆಡಿಕೊಳ್ಳುತ್ತಾರೆ. ಪುರಾತನ ಕಾಲದಿಂದಲೂ ಅಲ್ಲಿ ದೈವ ಶಕ್ತಿಯ ಆರಾಧನೆಗೊಳ್ಳುತ್ತಿದ್ದರೂ ಅದನ್ನು ಪರಿಗಣನೆ ಮಾಡಿಲ್ಲ ಎಂದು ಸುಭಿತ್ ಹೇಳಿದರು.
ಸದನದಲ್ಲಿ ಪ್ರಶ್ನಿಸಿ
ರಾಜ್ಯದ ಬೇರೆಲ್ಲ ವಿಷಯಗಳ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡುತ್ತೀರಿ. ಸದನದಲ್ಲಿ ಪರಶುರಾಮ ಥೀನ್ ಪಾರ್ಕ್ ವಿಚಾರವಾಗಿ ಒಮ್ಮೆಯೂ ಯಾಕೆ ಪ್ರಶ್ನೆ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದ ಸುಭಿತ್ ಅವರು ಪರಶುರಾಮ ಥೀಮ್ ಪಾರ್ಕ್ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಬೇಕು ಎಂದು ಹಾದಿ ಬೀದಿಯಲ್ಲಿ ಮಾತನಾಡುವ ಬದಲಿಗೆ ಅಧಿವೇಶನದಲ್ಲಿಯೇ ಒತ್ತಾಯ ಮಾಡಿ ಎಂದು ಸುಭಿತ್ ಸಲಹೆ ನೀಡಿದರು.
ಉದಯ ಶೆಟ್ಟಿ ಮುನಿಯಾಲು ಅವರು ತಮಗೆ ಹಣ ನೀಡಲು ಬಾಕಿ ಇದೆ ಎಂದಿದ್ದೀರಿ. 40% ಕಮಿಷನ್ ಹಣ ಏನಾದರೂ ಬಾಕಿಯಾಗಿದ್ದರೆ ವೈಯಕ್ತಿಕವಾಗಿ ಮಾತನಾಡಿ ಕೇಳಬೇಕೇ ಹೊರತು ಕಮಿಷನ್ ಹಣಕ್ಕಾಗಿ ಈ ರೀತಿ ಜನ ಸೇರಿಸಿ ಸಭೆ ನಡೆಸಿ ಬೊಬ್ಬೆ ಹೊಡೆಯುವುದಲ್ಲ. ನಿಮ್ಮ ಮೇಲೆ ದಿನನಿತ್ಯ ಬರುತ್ತಿರುವ ಭ್ರಷ್ಟಾಚಾರದ ಆರೋಪಗಳಿಂದ ಕಂಗೆಟ್ಟಿರುವ ತಾವು ನಮ್ಮ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದೀರಿ ಎಂದು ಸುಭಿತ್ ಟೀಕಿಸಿದರು.
ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಮಾತನಾಡಿ, ಕಾರ್ಕಳದಲ್ಲಿ ಸುನಿಲ್ ಕುಮಾರ್ ಅವರಿಗೆ ತೀವ್ರ ಜನವಿರೋಧ ಉಂಟಾಗಿರುವುದನ್ನು ಎದುರಿಸಲಾಗದೇ ಅವಿಭಜಿತ ಜಿಲ್ಲೆಯ ಬಿಜೆಪಿ ಶಾಸಕರನ್ನು ಕರೆಸಿ ಭಾಷಣ ಮಾಡಿಸುವ ದಯನೀಯ ಪರಿಸ್ಥಿತಿ ಬಂದಿದೆ. ಒಂದು ಕಾಲದಲ್ಲಿ ಎರಡು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಹೋಗಿ ಭಾಷಣ ಮಾಡುತ್ತಿದ್ದ ತಮಗೆ ಇಂದು ತಮ್ಮ ಮುಖ ಮುಚ್ಚಿಕೊಳ್ಳಲು ಬೇರೆ ಕ್ಷೇತ್ರದ ಶಾಸಕರನ್ನು ಕರೆಸುವಂತಹ ದುರ್ಗತಿ ಬಂದಿದೆ. ನೀವು ಉಡುಪಿ, ದ.ಕ. ಮಾತ್ರವಲ್ಲ ಇಡೀ ರಾಜ್ಯದ 65 ಬಿಜೆಪಿ ಶಾಸಕರನ್ನು ಕಾರ್ಕಳಕ್ಕೆ ಕರೆ ತಂದರೂ ನಿಮ್ಮ ವಿರುದ್ಧ ಕಾರ್ಕಳ ಕಾಂಗ್ರೆಸ್ ಮಾಡುವ ಹೋರಾಟ ನಿಲ್ಲದು ಎಂದರು.
ದುಡ್ಡಿನ ವಿಚಾರ ಬಹಿರಂಗಪಡಿಸಿ
ಉದಯ ಶೆಟ್ಟಿ ಮುನಿಯಾಲು ಅವರು ತಮಗೆ ದುಡ್ಡು ಕೊಡುವುದಕ್ಕಿದೆ ಎಂದು ಹೇಳಿರುತ್ತೀರಿ. ಅವರು ದುಡ್ಡು ಕೊಡಲು ಇದ್ದಲ್ಲಿ ಬಡ್ಡಿ ಸಮೇತ ವಾಪಸ್ ಮಾಡಲಿದ್ದೇವೆ. ಈ ರೀತಿ ಸುಳ್ಳು ಹೇಳಿ ಗಾಳಿಯಲ್ಲಿ ಗುಂಡು ಹೊಡೆಯುವ ಕಾರ್ಯ ಬೇಡ ಶಾಸಕರೇ ಎಂದು ಬೇಲಾಡಿ ಹೇಳಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಕಾರ್ಕಳದ ಕಾಂಗ್ರೆಸ್ಸಿಗರನ್ನು ಒದ್ದು ಒಳಗಡೆ ಹಾಕುವ ಕುರಿತು ಮಾತನಾಡಿದ್ದಾರೆ. ಅಂತಹ ಪ್ರಮೇಯ ನಮಗೆ ಬರಲ್ಲ. ಯಾಕಂದರೆ ನಾವು ಸಭ್ಯರು, ಸುಸಂಸ್ಕೃತರಿದ್ದೇವೆ ಎಂದು ಬೇಲಾಡಿ ತಿರುಗೇಟು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಎಂಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ ಮುಡಾರು, ಪುರಸಭಾ ಮಾಜಿ ಸದಸ್ಯ ವಿವೇಕಾನಂದ ಶೆಣೈ ಉಪಸ್ಥಿತರಿದ್ದರು.






























































