ಮಹಾಮಸ್ತಕಾಭಿಷೇಕ ಮಹೋತ್ಸವ ಶ್ರೀಮುಖ ಪತ್ರಿಕೆ ಬಿಡುಗಡೆ

ಅಭಿಷೇಕದಲ್ಲಿ ಅಹಿಂಸೆಯ ಸಂದೇಶ ಅಡಕವಾಗಿದೆ – ಶ್ರೀ ಚಾರುಕೀರ್ತಿ ಸ್ವಾಮೀಜಿ

ರಸ್ತೆ ಅಭಿವೃದ್ಧಿಗೆ ಸರಕಾರದಿಂದ ಅನುದಾನ – ಡಾ. ಎಂ.ಎನ್.‌ ರಾಜೇಂದ್ರ ಕುಮಾರ್‌

ಕಾರ್ಕಳ : 2027ರ ಫೆ.18ರಿಂದ 28ರವರೆಗೆ ನಡೆಯಲಿರುವ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಶ್ರೀಮುಖ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಾನುವಾರ ದಾನಶಾಲೆಯಲ್ಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಕಾರ್ಯಾಲಯದಲ್ಲಿ ನಡೆಯಿತು.

ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಮಹಾಸ್ವಾಮೀಜಿ ಶ್ರೀಮುಖ ಪತ್ರಿಕೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಬಾಹುಬಲಿ ಮಹಾಮಸ್ತಕಾಭಿಷೇಕದ ಹಿಂದೆ ಆದಿನಾಥ ತೀರ್ಥಂಕರರ ಪುತ್ರರಾದ ಭರತ ಮತ್ತು ಬಾಹುಬಲಿಯವರ ಇತಿಹಾಸ ಹಾಗೂ ಅಹಿಂಸೆಯ ಸಂದೇಶವಿದೆ. ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧಗಳ ಮೂಲಕ ಶಸ್ತ್ರಾಸ್ತ್ರಗಳ ಬಳಕೆಯಿಲ್ಲದೇ ಸಂಘರ್ಷಕ್ಕೆ ಅಂತ್ಯ ಹಾಡಿದ ಬಾಹುಬಲಿಯವರ ಆದರ್ಶ ಜಗತ್ತಿಗೆ ಶಾಂತಿ ಮತ್ತು ಅಹಿಂಸೆಯ ಮಹತ್ವವನ್ನು ಸಾರುತ್ತದೆ. ಕಾರ್ಕಳ ಮತ್ತು ಮೂಡುಬಿದಿರೆ ನಡುವೆ ಅನನ್ಯ ಸಂಬಂಧವಿದೆ. ಹತ್ತು ದಿನಗಳ ಮಹಾಮಸ್ತಕಾಭಿಷೇಕ ಮಹೋತ್ಸವ ಜನರ ಪ್ರೀತಿ, ಶ್ರದ್ಧೆ ಮತ್ತು ಸಹಕಾರದಿಂದ ಯಶಸ್ವಿಯಾಗಲಿ ಎಂದು ಹಾರೈಸಿದರು.

ಏಲಾಚಾರ್ಯ ಶ್ರೀ ಪ್ರಸಂಗ ಸಾಗರ ಮುನಿಮಹಾರಾಜರು ಆಶೀರ್ವಚನ ನೀಡಿ, ಬಂಗಾರ ಮೃದುವಾದಾಗ ಆಭರಣವಾಗುತ್ತದೆ. ಮಣ್ಣು ಮೃದುವಾದಾಗ ಮಡಿಕೆಯಾಗುತ್ತದೆ. ಅದೇ ರೀತಿ ಮನುಷ್ಯನಲ್ಲಿನ ಮೃದುತ್ವ, ವಿನಯ ಮತ್ತು ಸೌಮ್ಯ ಗುಣಗಳು ಆತನನ್ನು ಜಿನರ ಪಾವನ ಸಾನಿಧ್ಯದತ್ತ ಕೊಂಡೊಯ್ಯಲಿದೆ. ಬದುಕಿನಲ್ಲಿ ಅಹಂಕಾರವನ್ನು ಬದಿಗಿಟ್ಟು ಮೃದುತ್ವವನ್ನು ಬೆಳೆಸಿಕೊಂಡಾಗ ಧರ್ಮದ ನಿಜವಾದ ಮೌಲ್ಯ ಅರಿವಾಗುತ್ತದೆ ಎಂದರು.

ಕಾರ್ಕಳ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ 12 ವರ್ಷಕ್ಕೊಮ್ಮೆ ನೆರವೇರುವ ಮಹಾಮಸ್ತಕಾಭಿಷೇಕದಲ್ಲಿ ಕಾರ್ಯನಿರ್ವಹಿಸುವುದು ಪುಣ್ಯದ ಕಾರ್ಯ. ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ಯಶಸ್ವಿಗೊಳಿಸೋಣ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಮಹಾಮಸ್ತಕಾಭಿಷೇಕದ ಅಂಗವಾಗಿ ಕಾರ್ಕಳ ನಗರದ ರಸ್ತೆ ಅಭಿವೃದ್ಧಿ, ವಿದ್ಯುತ್ ದೀಪಾಲಂಕಾರ ಹಾಗೂ ಗೊಮ್ಮಟ ಬೆಟ್ಟದ ವಿದ್ಯುತ್ ಅಲಂಕಾರಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಮುಖ್ಯಮಂತ್ರಿ ನಿಧಿಯಿಂದ ರಸ್ತೆ ಅಭಿವೃದ್ಧಿಗೆ ಅನುದಾನ ದೊರೆಯಲಿದೆ. ನಗರದ ಅಲಂಕಾರಕ್ಕೆ ಸುಮಾರು ಒಂದು ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಸಮಾಜದ ಪ್ರತಿಯೊಬ್ಬರ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ಅಗತ್ಯ. ಎಲ್ಲರೂ ಒಗ್ಗಟ್ಟಿನಿಂದ ಈ ಚಾರಿತ್ರಿಕ ಮಹಾಮಸ್ತಕಾಭಿಷೇಕವನ್ನು ವಿಜ್ರಂಭಣೆಯಿಂದ ನೇರವೇರಿಸೋಣ. ಅದಕ್ಕಾಗಿ ಎಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಸಮಿತಿ ಉಪಾಧ್ಯಕ್ಷರಾದ ಡಾ. ಜೀವಂದರ್ ಬಳ್ಳಾಲ್ ಹಾಗೂ ರತ್ನಾಕರ್ ರಾಜ್ ಅರಸ್, ಅನಂತರಾಜ್ ಪುವಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಜಿತ್‌ ಕೊಕ್ರಾಡಿ ನಿರೂಪಿಸಿದರು. ಕೋಶಾಧಿಕಾರಿ ಮೋಹನ್ ಪಡಿವಾಳ್ ವಂದಿಸಿದರು.

ಚಿತ್ರ : ನಿರಂಜನ್‌ ಜೈನ್‌ ದ್ವಾರಕ





























































































































error: Content is protected !!
Scroll to Top