ಸೋತರೂ ಕುಗ್ಗದ ಅಣ್ಣಾಮಲೈ : ಹೊಸ ಯುಗ ಆರಂಭ ಎಂದು ಭಾವನಾತ್ಮಕ ಟ್ವೀಟ್

ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದಿರುವ ದಳಪತಿ ವಿಜಯ್ ಅವರ ಟಿವಿಕೆ ಪಾರ್ಟಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ನಮಗೂ ಅಚ್ಚೇದಿನ್ ಬರಲಿದೆ ಎಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಯನ್ನು ಮಾಡಿಕೊಂಡಿತ್ತು. ಸೀಟು ಹಂಚಿಕೆ ವಿಚಾರದಲ್ಲಿ ಅಣ್ಣಾಮಲೈ, ಎಡಪ್ಪಾಡಿ ಪಳನಿಸ್ವಾಮಿ ವಿರುದ್ದ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದರು. ಬಿಜೆಪಿ ಕೇಂದ್ರ ಆಯ್ಕೆ ಸಮಿತಿ, ಅಣ್ಣಾಮಲೈ ಅವರನ್ನು ಹೊರಗಿಟ್ಟು ಸೀಟು ಹಂಚಿಕೆ ಮಾಡಿತ್ತು. ಆದಾಗ್ಯೂ, ಅವರು ಬಿರುಸಿನ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಣ್ಣಾಮಲೈ ತಮ್ಮ ಟ್ವೀಟ್‌ನಲ್ಲಿ ವಂಶಪಾರಂಪರ್ಯದ ಬಗ್ಗೆ ಉಲ್ಲೇಖ ಮಾಡಿದ್ದಾರೆ.

ಅಣ್ಣಾಮಲೈ ಮಾಡಿದ ಟ್ವೀಟ್‌ನಲ್ಲೇನಿದೆ
ಮತಗಳು ಇರುವುದು ಮಾರಾಟ ಮಾಡಲು ಅಲ್ಲ, ರಾಜಕೀಯ ಇರುವುದು ವಂಶಪಾರಂಪರ್ಯ ರಾಜಕಾರಣಕ್ಕೆ ಅಲ್ಲ ಎನ್ನುವುದನ್ನು ತಮಿಳುನಾಡಿನ ಮತದಾರ ತೋರಿಸಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಆ ಮೂಲಕ, ಪರೋಕ್ಷವಾಗಿ ಕರುಣಾನಿಧಿ ಕುಟುಂಬಕ್ಕೆ ಟಾಂಗ್ ಕೊಟ್ಟಿದ್ದಾರೆ. ಒಂದೇ ಧ್ವನಿಯಲ್ಲಿ ನಿಂತು ತಮಿಳುನಾಡಿನ ಜನತೆ ಮಾತನಾಡಿದ್ದಾರೆ. ಇದು ನನಗೆ ಸಂತೋಷದ ವಿಚಾರ ಎಂದು ಅಣ್ಣಾಮಲೈ ಹೇಳಿದ್ದಾರೆ

ರಾಜಕೀಯದಲ್ಲಿ ಪೀಳಿಗೆಯ ಬದಲಾವಣೆ ಎನ್ನುವುದು ಬಹಳ ಅಪರೂಪ. ಇದನ್ನು ಯಾರೇ ಸಾಧಿಸಲಿ ಅವರು ಅಭಿನಂದನೆಗೆ ಅರ್ಹರು. ತಮಿಳುನಾಡು ರಾಜಕೀಯದಲ್ಲಿ ಅದ್ಭುತವಾಗಿ ಪಾದಾರ್ಪಣೆ ಮಾಡಿದ ವಿಜಯ್ ಅವರಿಗೆ ಅಭಿನಂದನೆಗಳು. ನೀವು ಏನು ಅಂದುಕೊಂಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೀರೋ ಅದನ್ನು ಸಾಧಿಸಲು ಆಂಡವ ನಿಮ್ಮ ಜೊತೆಗಿರಲಿ ಎಂದು ಅಣ್ಣಾಮಲೈ ಹೇಳಿದ್ದಾರೆ.

ನಮಗೂ ಒಳ್ಳೆಯ ಕಾಲ ಬರಲಿದೆ
“ಅತ್ಯಂತ ಮುಖ್ಯವಾಗಿ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಹಗಲಿರುಳು ಶ್ರಮಿಸಿದ ನನ್ನ ಪ್ರೀತಿಯ ಬಿಜೆಪಿ ತಮಿಳುನಾಡು ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ನನ್ನ ಧನ್ಯವಾದಗಳು. ಶೀಘ್ರದಲ್ಲೇ ಉತ್ತಮ ಕಾಲ ನಮಗೂ ಬರಲಿದೆ” ಎಂದು ಅಣ್ಣಾಮಲೈ ಹೇಳಿದ್ದಾರೆ. ಗೆದ್ದವರಿಗೆ ಅಭಿನಂದನೆಗಳು, ಸೋಲು ಅನುಭವಿಸಿದ ಎಂಕೆ ಸ್ಟಾಲಿನ್ ಮತ್ತು ಸೀಮನ್ ಅವರಿಗೆ ಸಾಂತ್ವನಗಳು ಎಂದು ಅಣ್ಣಾಮಲೈ ತಮ್ಮ ಪೋಸ್ಟ್’ನಲ್ಲಿ ಉಲ್ಲೇಖಿಸಿದ್ದಾರೆ.



































































































error: Content is protected !!
Scroll to Top