ಪತ್ನಿಯ ಕ್ಯಾನ್ಸರ್‌ ಕಾಯಿಲೆ ಗುಣಪಡಿಸುವುದಾಗಿ ಪತಿಗೆ 12 ಲಕ್ಷ ರೂ. ವಂಚನೆ

ಕಾರ್ಕಳ : ಕ್ಯಾನ್ಸರ್‌ ಕಾಯಿಲೆ ಗುಣಪಡಿಸುವುದಾಗಿ ವ್ಯಕ್ತಿಯೋರ್ವರಿಗೆ 12 ಲಕ್ಷ ರೂ. ವಂಚಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಮಣ್‌ ಗ್ರಾಮದ ರೊನಾಲ್ಡ್‌ ರೋಡ್ರಿಗಸ್‌ ಅವರ ಹೆಂಡತಿ ಕ್ಯಾನ್ಸರ್‌ ಹಾಗೂ ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದು ಮಾರ್ಚ್‌ 23ರಂದು ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ರೊನಾಲ್ಡ್‌ ರೋಡ್ರಿಗಸ್‌ ಅವರಿಗೆ ಉಡುಪಿ ಕಡಿಯಾಳಿ ದೇವಸ್ಥಾನದ ಬಳಿ ಸಿದ್ದಾರ್ಥ್ ಎಂಬ ವ್ಯಕ್ತಿ ಪರಿಚಯವಾಗಿ, ಆತನು ತನ್ನ ತಾಯಿಯು ಕೂಡಾ ಇಂತಹದೇ ಖಾಯಿಲೆಯಿಂದ ಬಳಲುತ್ತಿದ್ದು ಅವರು ಆಯುರ್ವೇದಿಕ್ ಚಿಕಿತ್ಸೆ ಮುಖಾಂತರ ಗುಣಮುಖವಾಗಿದ್ದಾರೆ. ನಿಮ್ಮ ಪತ್ನಿಗೂ ಅದೇ ರೀತಿ ಚಿಕಿತ್ಸೆ ನೀಡಿ ಗುಣಪಡಿಸುತ್ತೇವೆ ಎಂದು ಆತನು ಮಾಧವ ಎಂಬ ಹೆಸರಿನ ವ್ಯಕ್ತಿಯ ಪೋನ್‌ ನಂಬ್ರ ನೀಡಿ ಪರಿಚಯಿಸಿರುತ್ತಾನೆ. ಮಾಧವನು ಆಯುರ್ವೇದಿಕ್ ಚಿಕಿತ್ಸೆ ಪಡೆಯಲು ಸುಮಾರು ಹಣ ಖರ್ಚಾಗುತ್ತದೆ ಎಂದು ನಂಬಿಸಿ ರೊನಾಲ್ಡ್‌ ರೋಡ್ರಿಗಸ್‌ ಅವರ ಗೂಗಲ್‌ ಪೇಯಿಂದ ಅನಿಲ್‌ ಪವಾರ್‌ ಎಂಬ ಹೆಸರಿನ ಖಾತೆಗೆ ಹಣ ವರ್ಗಾವಣೆ ಮಾಡಿಸಿರುತ್ತಾನೆ.

ಆಪಾದಿತನು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ರೊನಾಲ್ಡ್‌ ರೋಡ್ರಿಗಸ್‌ ಅವರು ಅದೇ ದಿನ ತಮ್ಮ ಹೆಚ್‌.ಡಿ.ಎಫ್.ಸಿ. ಬ್ಯಾಂಕ್‌ ಖಾತೆಯಿಂದ ಎ.ಟಿ.ಎಂ. ಮುಖೇನ 40,000 ರೂ. ಹಣ ತೆಗೆದು ಆಪಾದಿತ ಸಿದ್ದಾರ್ಥ್‌ಗೆ ನೀಡಿರುತ್ತಾರೆ. ಅಲ್ಲದೆ ಆಪಾದಿತನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಾತನಾಡಲು ಉಡುಪಿಯ ಮಾಂಡವಿ ಬಿಲ್ಡಿಂಗ್‌ನಲ್ಲಿರುವ ಆರ್ಯುವೇದಿಕ್‌ ಔಷಧಿ ಅಂಗಡಿಗೆ ಬರುವಂತೆ ತಿಳಿಸಿದ್ದು ರೊನಾಲ್ಡ್‌ ರೋಡ್ರಿಗಸ್‌ ಅವರು ಆಪಾದಿತನ ಜೊತೆಗೆ ಆಯುರ್ವೇದಿಕ್ ಔಷಧಿ ಅಂಗಡಿಗೆ ತೆರಳಿದಾಗ ಅಲ್ಲಿ ಅನಿಲ್‌ ಮತ್ತು ಮಾಧವ ಔಷಧಿಗೆ 10,80,000 ರೂ. ನೀಡುವಂತೆ ತಿಳಿಸಿದ್ದರು. ಅದರಂತೆ ರೊನಾಲ್ಡ್‌ ರೋಡ್ರಿಗಸ್‌ ಅವರು ಚೆಕ್‌ ಮೂಲಕ 3,00,000, 3,00,000, 3,00,000 ಹಾಗೂ 1,80,000 ರೂ. ಹಣವನ್ನು ಆಪಾದಿತ ಅನಿಲ್ ಎಂಬಾತನಿಗೆ ಪಾವತಿಸಿದ್ದಾರೆ. ಆದರೆ, ಆಪಾದಿತ ನೀಡಿದ ಔಷಧಿಗಳನ್ನು ತಮ್ಮ ಪತ್ನಿಗೆ ನೀಡಿದರೂ ಇದುವರೆಗೆ ಅವರು ಗುಣಮುಖರಾಗದೆ ಇದ್ದು ಆಪಾದಿತರು ನೀಡಿದ ಪೋನ್‌ ನಂಬ್ರಗಳಿಗೆ ಕರೆ ಮಾಡಿದಾಗ ಆ ಮೊಬೈಲ್ ನಂಬ್ರಗಳು ಸ್ವಿಚ್‌ ಆಫ್ ಆಗಿರುತ್ತದೆ. ಆಪಾದಿತರು ರೊನಾಲ್ಡ್‌ ರೋಡ್ರಿಗಸ್‌ ಅವರ ಹೆಂಡತಿಗೆ ಇರುವ ಖಾಯಿಲೆಯನ್ನು ಗುಣಪಡಿಸುವುದಾಗಿ ನಂಬಿಸಿ ರೊನಾಲ್ಡ್‌ ರೋಡ್ರಿಗಸ್‌ ಅವರಿಂದ ಒಟ್ಟು 12,09,160 ರೂ. ಹಣ ಪಡೆದು ವಂಚಿಸಿರುವುದಾಗಿ ಪ್ರಕರಣ ದಾಖಲಾಗಿರುತ್ತದೆ.



































































































error: Content is protected !!
Scroll to Top