ಸ್ವಚ್ಚ ಪರಿಸರಕ್ಕಾಗಿ ಪಳ್ಳಿ – ಸಾಣೂರು ಗ್ರಾ. ಪಂ. ವಿನೂತನ ಯೋಜನೆ

ಕಾರ್ಕಳ : ಗ್ರಾಮದ ನೈರ್ಮಲ್ಯತೆ ಕಾಪಾಡುವ ನಿಟ್ಟಿನಲ್ಲಿ ಪಳ್ಳಿ ಮತ್ತು ಸಾಣೂರು ಗ್ರಾ. ಪಂ. ವಿನೂತನ ಯೋಜನೆ ಕೈಗೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ಬಗ್ಗೆ ಮಾಹಿತಿ ನೀಡುವವರಿಗೆ ಪಂಚಾಯತ್ ವತಿಯಿಂದ 2,000 ರೂ. ನಗದು ಬಹುಮಾನ ಘೋಷಿಸಲಾಗಿದೆ.

ಗ್ರಾಮದ ಸ್ವಚ್ಛತೆಗಾಗಿ ಪಂಚಾಯತ್‌ ವ್ಯಾಪ್ತಿಯಲ್ಲಿ ಸ್ವಚ್ಛತಾ ಸಿಬ್ಬಂದಿ ಹಗಲಿರುಳು ಶ್ರಮಿಸಿದರೂ ಕೆಲ ಬೇಜವಾಬ್ದಾರಿ ವ್ಯಕ್ತಿಗಳಿಂದಾಗಿ ಅವರ ಶ್ರಮವೆಲ್ಲಾ ವ್ಯರ್ಥವಾಗುತ್ತಿದೆ. ಮಾತ್ರವಲ್ಲದೆ ರಸ್ತೆ ಬದಿ, ಸಾರ್ವಜನಿಕ ಪ್ರದೇಶದಲ್ಲಿನ ಕಸದ ರಾಶಿಗಳು ಪಂಚಾಯತ್‌ನ ಅಭಿವೃದ್ಧಿ ಕಾರ್ಯಕ್ಕೆ ಕಳಂಕ ಎಂಬಂತಿದೆ. ಆದ್ದರಿಂದ ಜನತೆಯಲ್ಲಿ ಸ್ವಚ್ಛತೆಯ ಜವಾಬ್ದಾರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ಕಸ ಎಸೆಯುತ್ತಿರುವ ಸಮಸ್ಯೆಗೆ ಪರಿಹಾರವಾಗಿ ತ್ಯಾಜ್ಯ ಎಸೆಯುವವರ ಫೋಟೋ, ವಿಡಿಯೋ, ಕಣ್ಣಾರೆ ಕಂಡು, ಇತರೆ ಸಾಕ್ಷ್ಯ ಸಮೇತ ಮಾಹಿತಿ ನೀಡುವ ಸಾರ್ವಜನಿಕರಿಗೆ ಬಹುಮಾನ ನೀಡುವುದಾಗಿ ಪಳ್ಳಿ ಪಿಡಿಒ ಪ್ರಮಿಳಾ ಹಾಗೂ ಸಾಣೂರು ಗ್ರಾ. ಪಂ. ಪಿಡಿಒ ವಿಶ್ವನಾಥ್‌ ಅವರು ಮಾಹಿತಿ ನೀಡಿದ್ದಾರೆ.

5 ಸಾ. ರೂ. ದಂಡ
ಬಹುಮಾನ ಮಾತ್ರವಲ್ಲದೆ, ಕಸ ಎಸೆದವರಿಗೆ ಭಾರಿ ದಂಡವನ್ನೂ ವಿಧಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆದು ಸಿಕ್ಕಿಬಿದ್ದವರಿಗೆ ಜಿ. ಪಂ. ಸಿಇಒ ಅವರ ಆದೇಶದ ಮೇರೆಗೆ 5,000 ರೂ. ದಂಡ ವಿಧಿಸಲಾಗುವುದು. ಈಗಾಗಲೇ ಈ ಬಗ್ಗೆ ವ್ಯಾಪಕ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ತಮ್ಮೂರಿನ ನೈರ್ಮಲ್ಯ ಕಾಪಾಡಲು ಕೈಜೋಡಿಸಬೇಕೆಂದು ಗ್ರಾ. ಪಂ. ವಿನಂತಿಸಿದೆ. ಮಿಯ್ಯಾರು ಗ್ರಾ. ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಇಂತಹ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದೆ. ಸಾರ್ವಜನಿಕ ಸ್ಥಳದಲ್ಲಿ ಘನ ಮತ್ತು ದ್ರವ ತ್ಯಾಜ್ಯವನ್ನು ಎಸೆದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಆತನಿಗೆ 5,000 ರೂ. ದಂಡ ವಿಧಿಸಿದ್ದಾರೆ.

ಗ್ರಾಮಗಳ ಸ್ವಚ್ಛತೆಯೇ ನಮ್ಮ ಮೊದಲ ಆದ್ಯತೆ. ಸ್ವಚ್ಛ ಪರಿಸರ, ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
-ಪ್ರಶಾಂತ್‌ ರಾವ್‌
ಇಒ, ತಾ. ಪಂ. ಕಾರ್ಕಳ



































































































error: Content is protected !!
Scroll to Top