ಕಾರ್ಕಳದ ಪುರಾತನ ನಾಗರಬಾವಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 30 ಲಕ್ಷ ರೂ. ಅನುದಾನ

ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 30 ಲಕ್ಷ ರೂ. ಅನುದಾನದಲ್ಲಿ ನಡೆಯುವ ಕಾರ್ಕಳದ ಪುರಾತನ ನಾಗರಬಾವಿ ಕೆರೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ಮೇ 4ರಂದು ನಡೆಯಿತು.

ನಾಗರಬಾವಿ ಕೆರೆ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಕೆ.ಕಮಲಾಕ್ಷ ಕಾಮತ್ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಐತಿಹಾಸಿಕ ಪ್ರೇಕ್ಷಣೀಯ ಸ್ಥಳವಾದ ಕಾರ್ಕಳದ ಅನಂತಶಯನ ಗೊಮ್ಮಟೇಶ್ವರ ಬೆಟ್ಟ ರಸ್ತೆಯಲ್ಲಿರುವ ನಾಗರಬಾವಿ ಕೆರೆಯು ನೀರಿನ ಉತ್ತಮ ಸೆಲೆಯಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜೀರ್ಣೋದ್ಧಾರಗೊಳ್ಳುತ್ತಿರುವುದು ಸಂತಸದಾಯಕ. ಈ ಮಹತ್ಕಾರ್ಯಕ್ಕೆ ಜೊತೆಯಾಗಿರುವ ರೋಟರಿ ಕ್ಲಬ್ ಕಾರ್ಕಳ ಹಾಗೂ ಸ್ಥಳೀಯ ಪ್ರಮುಖರ ನೆರವಿನಿಂದ ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಂಡು ಮುಂದಿನ ವರ್ಷ ನಡೆಯಲಿರುವ ಮಹಾಮಸ್ತಕಾಭಿಷೇಕ ಸಮಯದಲ್ಲಿ ಎಲ್ಲರನ್ನು ಆಕರ್ಷಿಸುವಂತಾಗಲಿ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುವರಾಜ್ ಜೈನ್ ಮಾತನಾಡಿ, ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಯೋಜನೆಯಲ್ಲಿ ಈಗಾಗಲೇ 996 ಕೆರೆಗಳನ್ನು ಅಭಿವೃದ್ಧಿಗೊಂಡಿದ್ದು, ಈ ಮೂಲಕ ಅಂತರ್ಜಲ ಹೆಚ್ಚುವುದರ ಜೊತೆಗೆ ಜನರಿಗೆ ಪ್ರಾಣಿಗಳಿಗೆ ಬೇಕಾದ ನೀರಿನ ಆಶ್ರಯ ದೊರೆತಿದೆ ಎಂದರು.

ಕಾರ್ಕಳ ರೋಟರಿ ಕ್ಲಬ್‌ ಅಧ್ಯಕ್ಷ ಹಾಗೂ ನಾಗರಭಾವಿ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿ ಮಾತನಾಡಿ, ಈ ಮಹತ್ವಕಾಂಕ್ಷಿ ಯೋಜನೆಗೆ ತಮ್ಮ ಸಂಸ್ಥೆಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ, ಮುಖ್ಯ ಇಂಜಿನಿಯರ್ ಪ್ರದೀಪ್, ರೋಟರಿ ಕ್ಲಬ್‌ನ ಮೋಹನ್ ಪಡಿವಾಳ್, ಹರಿಪ್ರಕಾಶ್ ಶೆಟ್ಟಿ, ಡಾ. ಭರತೇಶ ಆದಿರಾಜ್ ಹಾಗೂ ಕ್ಲಬ್‌ನ ಸದಸ್ಯರು, ಕಾರ್ಕಳ ಪುರಸಭೆ ಮಾಜಿ ಅಧ್ಯಕ್ಷೆ ಸುಮಾ ಕೇಶವ್ ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.



































































































error: Content is protected !!
Scroll to Top