ನಕಲಿ ಅಂಕಪಟ್ಟಿ ಹಾವಳಿಗೆ ಕಡಿವಾಣ ಹಾಕಲು ಕ್ರಮ
ಬೆಂಗಳೂರು: ನಕಲಿ ಅಂಕಪಟ್ಟಿ ಸೃಷ್ಟಿಸುವುದು, ಅಂಕಗಳನ್ನು ತಿದ್ದುಪಡಿ ಮಾಡಿ ವಂಚನೆ ಎಸಗುವ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಶಿಕ್ಷಣ ಇಲಾಖೆ 2026-27ನೇ ಶೈಕ್ಷಣಿಕ ವರ್ಷದಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ವ್ಯವಸ್ಥೆ ಜಾರಿಗೆ ತರಲಿದೆ.
ಇದುವರೆಗೆ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಪ್ರಕಟವಾದ ಬಳಿಕ ಕಾಗದದ ರೂಪದಲ್ಲಿ ಅಂಕಪಟ್ಟಿ ನೀಡಲಾಗುತ್ತಿತ್ತು. ಆದರೆ 2026-27ನೇ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕವೇ ಡಿಜಿಟಲ್ ಅಂಕಪಟ್ಟಿಯನ್ನು ವೀಕ್ಷಿಸಿ ಪಡೆದುಕೊಳ್ಳಬಹುದು. ಡಿಜಿ ಲಾಕರ್ನಲ್ಲಿ ಲಭ್ಯವಾಗುವ ಈ ಅಂಕಪಟ್ಟಿಗೆ ಅಧಿಕೃತ ಮಾನ್ಯತೆ ಇರಲಿದೆ.

ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಆಧಾರ್ ಐಡಿ ಜೊತೆ ಲಿಂಕ್ ಮಾಡುವ ವ್ಯವಸ್ಥೆಯನ್ನೂ ರೂಪಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಬಹುದಾಗಿದೆ. ಉನ್ನತ ಶಿಕ್ಷಣ ಪ್ರವೇಶಾತಿ ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ಡಿಜಿಟಲ್ ಅಂಕಪಟ್ಟಿಯನ್ನು ಅಧಿಕೃತ ದಾಖಲೆಯಾಗಿ ಬಳಸಿಕೊಳ್ಳಬಹುದು.






























































