ಬಿಸ್ಲೇರಿ ನೀರಿನಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಅಂಶ : ಕೋಲಾಹಲ ಎಬ್ಬಿಸಿದ ವರದಿ

ಹಳೆ ಮಾದರಿಗಳ ಪರೀಕ್ಷೆಯ ವರದಿ ಎಂದು ಸ್ಪಷ್ಟನೆ ನೀಡಿದ ಕಂಪನಿ

ನವದೆಹಲಿ: ಭಾರತದ ಅತ್ಯಂತ ವಿಶ್ವಾಸಾರ್ಹ ನೀರಿನ ಬ್ರ್ಯಾಂಡ್‌ ಬಿಸ್ಲೇರಿಯಲ್ಲೂ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕ ಅಂಶ ಇದೆ ಎಂಬ ವರದಿ ಕೋಲಾಹಲ ಎಬ್ಬಿಸಿದೆ.


ನಾವು ನಿತ್ಯ ಖರೀದಿಸಿ ಕುಡಿಯುವ ಬಿಸ್ಲೇರಿ ನೀರಿನ ಬಗ್ಗೆ ಈ ವರದಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಚರ್ಚೆ ಶುರುವಾಗಿದೆ. ನೀರಿನ ಮಾದರಿ ಪರೀಕ್ಷೆಯಲ್ಲಿ ವಿಫಲವಾಗಿದೆ ಎಂಬ ವರದಿ ಹೊರಬಿದ್ದ ಬೆನ್ನಲ್ಲೇ ಎಫ್​ಎಸ್​ಎಸ್​ಐ ಕಾನೂನು ಕ್ರಮಕ್ಕೆ ಮುಂದಾಗಿದೆ. ಆದರೆ ಈ ಪ್ರಕರಣ 14 ತಿಂಗಳ ಹಿಂದಿನದ್ದು ಎಂದು ಹೇಳಿರುವ ಬಿಸ್ಲೇರಿ, ತನ್ನ ಉತ್ಪನ್ನದ ಗುಣಮಟ್ಟದ ಬಗ್ಗೆ ಏನು ಸ್ಪಷ್ಟನೆ ನೀಡಿದೆ.

ಈ ಪ್ರಕರಣ ಸುಮಾರು 14 ತಿಂಗಳ ಹಿಂದಿನದ್ದು ಎಂದು ಕಂಪನಿ ಹೇಳಿಕೊಂಡಿದೆ. ಕುಡಿಯುವ ನೀರಿನ ಸುರಕ್ಷತೆ ತನ್ನ ಮೊದಲ ಆದ್ಯತೆಯಾಗಿದ್ದು, ಗುಣಮಟ್ಟ ಕಾಪಾಡಲು ಕಟ್ಟುನಿಟ್ಟಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ಎಫ್​ಎಸ್​ಎಸ್​ಐ ಜೊತೆ ಸಹಕರಿಸುವುದಾಗಿಯೂ ಬಿಸ್ಲೇರಿ ತಿಳಿಸಿದೆ.

ಕಂಪನಿಯ ಹೇಳಿಕೆಯ ಪ್ರಕಾರ, ಕಳೆದ ವರ್ಷ ಸೆಪ್ಟೆಂಬರ್ 30ರಂದು ಎಫ್​ಎಸ್​ಎಸ್​ಎಐ ಅಧಿಕಾರಿಗಳು ಗೋವಾದಲ್ಲಿರುವ ಬಿಸ್ಲೇರಿ ಘಟಕದಿಂದ ಒಟ್ಟು ಆರು ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದರು. ಈ ಪೈಕಿ ಐದು ಮಾದರಿಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಿದ್ದವು.

ಆದರೆ ಆರನೇ ಮಾದರಿಯ ಆರಂಭಿಕ ಪರೀಕ್ಷೆಯಲ್ಲಿ ಪ್ರತಿ ಲೀಟರ್ ನೀರಿನಲ್ಲಿ 12 ಮೈಕ್ರೋಗ್ರಾಂ ಬ್ರೋಮೇಟ್ ಪತ್ತೆಯಾಗಿತ್ತು. ನಿಗದಿತ ಮಿತಿ ಪ್ರತಿಲೀಟರ್‌ಗೆ 10 ಮೈಕ್ರೋಗ್ರಾಂ ಆಗಿದೆ. ಹೀಗಾಗಿ ಆರಂಭಿಕ ಪರೀಕ್ಷೆಯಲ್ಲಿ ಪ್ರಮಾಣ ಸ್ವಲ್ಪ ಹೆಚ್ಚಾಗಿತ್ತು.

ಈ ಫಲಿತಾಂಶದ ಬಳಿಕ ಕಂಪನಿ ಸ್ವತಂತ್ರವಾಗಿ ಮತ್ತೊಮ್ಮೆ ಪರೀಕ್ಷೆ ನಡೆಸಿದ್ದು, ಅದರಲ್ಲಿ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಯೊಳಗೆ ಇತ್ತು ಎಂದು ಹೇಳಿದೆ. ಆದರೆ ಎಫ್​ಎಸ್​ಎಸ್​ಐ ಪರೀಕ್ಷೆಯ ಫಲಿತಾಂಶವನ್ನು ಪ್ರಶ್ನಿಸಿ ಕಂಪನಿ ಮೇಲ್ಮನವಿ ಸಲ್ಲಿಸಿದ ಬಳಿಕ ಮಾದರಿಯನ್ನು ಮತ್ತೊಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಪಾಲಿಸೈಕ್ಲಿಕ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು (PAHs) ಪತ್ತೆಯಾಗಿವೆ ಎಂದು ಎಫ್​ಎಸ್​ಎಸ್​ಐ ತಿಳಿಸಿದೆ. ಆ ಪ್ರಯೋಗಾಲಯವೂ ಮಾದರಿಯನ್ನು ಅಸುರಕ್ಷಿತ ಎಂದು ಘೋಷಿಸಿದೆ.

ಎಫ್​ಎಸ್​ಎಸ್​ಐ ಪ್ರಕಾರ, ಬಿಸ್ಲೇರಿ ಘಟಕದಿಂದ ಸಂಗ್ರಹಿಸಿದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿ ಬ್ರೋಮೇಟ್‌ಗೆ ನಿಗದಿಪಡಿಸಿದ ಮಿತಿಯನ್ನು ಮೀರಿತ್ತು. ನಂತರದ ಪ್ರಯೋಗಾಲಯ ಪರೀಕ್ಷೆಯಲ್ಲಿಯೂ PAHs ಪತ್ತೆಯಾಗಿವೆ. ಈ ಕಾರಣಕ್ಕೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಬಿಸ್ಲೇರಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕಾನೂನು ಕ್ರಮಕ್ಕೆ ಅನುಮತಿ ನೀಡಿರುವುದು ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗಿದೆ ಎಂದರ್ಥವಲ್ಲ. ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಪ್ರಕರಣದ ಬಗ್ಗೆ ನಿರ್ಧಾರವಾಗಲಿದೆ.

ಬ್ರೋಮೇಟ್ ಮತ್ತು PAHs ಎಂದರೇನು?

ಬ್ರೋಮೇಟ್ ನೀರನ್ನು ಶುದ್ಧೀಕರಿಸುವ ಕೆಲವು ಪ್ರಕ್ರಿಯೆಗಳ ವೇಳೆ ಉತ್ಪತ್ತಿಯಾಗಬಹುದಾದ ರಾಸಾಯನಿಕ ಅಂಶ. ಕುಡಿಯುವ ನೀರಿನಲ್ಲಿ ಇದರ ಪ್ರಮಾಣ ಹೆಚ್ಚಾಗದಂತೆ ನಿಯಂತ್ರಣ ಹೇರಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕುಡಿಯುವ ನೀರಿನ ಮಾರ್ಗಸೂಚಿಯಲ್ಲಿಯೂ ಪ್ರತಿ ಲೀಟರ್‌ಗೆ 10 ಮೈಕ್ರೋಗ್ರಾಂ ಮಿತಿಯನ್ನು ಸೂಚಿಸಲಾಗಿದೆ.

PAHs ಹಲವು ರಾಸಾಯನಿಕ ಸಂಯುಕ್ತಗಳ ಗುಂಪು. ಇವುಗಳಲ್ಲಿ ಕೆಲವು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಕ್ಯಾನ್ಸರ್ ಅಪಾಯದೊಂದಿಗೆ ಸಂಬಂಧ ಹೊಂದಿವೆ. ಹೀಗಾಗಿ ಕುಡಿಯುವ ನೀರಿನಲ್ಲಿ ಇವು ಪತ್ತೆಯಾಗಿರುವುದು ಆಹಾರ ಸುರಕ್ಷತಾ ಸಂಸ್ಥೆಯ ಆತಂಕಕ್ಕೆ ಕಾರಣವಾಗಿದೆ.

ಈ ಪ್ರಕರಣದಲ್ಲಿ ಪರೀಕ್ಷೆಗೆ ಒಳಪಟ್ಟದ್ದು ನಿರ್ದಿಷ್ಟ ಮಾದರಿ. ಎಫ್​ಎಸ್​ಎಸ್​ಐ ಯಾವ ಬ್ಯಾಚ್‌ನ ನೀರನ್ನು ಪರೀಕ್ಷಿಸಿದೆ ಎಂಬ ಸಂಪೂರ್ಣ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಅಲ್ಲದೆ, ದೇಶಾದ್ಯಂತ ಮಾರಾಟವಾಗುತ್ತಿರುವ ಎಲ್ಲ ಬಿಸ್ಲೇರಿ ಬಾಟಲಿಗಳು ಅಸುರಕ್ಷಿತ ಎಂದು ಈ ವರದಿಯಿಂದ ತೀರ್ಮಾನಿಸಲು ಸಾಧ್ಯವಿಲ್ಲ. ಎಲ್ಲ ಉತ್ಪನ್ನಗಳಿಗೂ ನಿಷೇಧ ಅಥವಾ ಮಾರುಕಟ್ಟೆಯಿಂದ ಹಿಂಪಡೆಯುವ ಆದೇಶ ಹೊರಡಿಸಲಾಗಿದೆ ಎಂಬ ಮಾಹಿತಿಯೂ ವರದಿಗಳಲ್ಲಿಲ್ಲ.

ಆದರೆ ಕುಡಿಯುವ ನೀರಿನ ಗುಣಮಟ್ಟದ ವಿಚಾರದಲ್ಲಿ ಈ ಪ್ರಕರಣ ಮಹತ್ವ ಪಡೆದಿದೆ. ಕಂಪನಿ ತನ್ನ ಗುಣಮಟ್ಟದ ನಿಯಂತ್ರಣದ ಬಗ್ಗೆ ಸ್ಪಷ್ಟನೆ ನೀಡಿದ್ದರೂ, ಎಫ್​ಎಸ್​ಎಸ್​ಐ ಪ್ರಯೋಗಾಲಯದ ವರದಿ ಮತ್ತು ಮುಂದಿನ ಕಾನೂನು ಪ್ರಕ್ರಿಯೆಯ ಮೇಲೆ ಎಲ್ಲರ ಗಮನ ನೆಟ್ಟಿದೆ.





























































































































error: Content is protected !!
Scroll to Top