ಐಪಿಎಲ್ ಫೈನಲ್ ಬೆಂಗಳೂರಿನಿಂದ ಅಹಮದಾಬಾದಿಗೆ ಶಿಫ್ಟ್

ಬೆಂಗಳೂರು : 2026ರ ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಿಂದ ಅಹಮದಾಬಾದ್‌ಗೆ ಸ್ಥಳಾಂತರಗೊಂಡಿದೆ. ಸ್ಥಳೀಯ ಸಂಘಗಳ ಟಿಕೆಟ್ ಬೇಡಿಕೆಗಳು ಬಿಸಿಸಿಐ ಮಾರ್ಗಸೂಚಿಗಳಿಗೆ ವಿರುದ್ಧವಾಗಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಯಶಸ್ವಿಯಾಗಿ ಲೀಗ್ ಪಂದ್ಯಗಳು ನಡೆದರೂ ಫೈನಲ್ ಆಯೋಜನೆ ನಿರೀಕ್ಷಿಸಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಇದು ನಿರಾಸೆ ತಂದಿದೆ. ಬಿಸಿಸಿಐ ಪ್ಲೇ ಆಫ್ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಿದೆ

ಎದುರಾಗಿದ್ದ ಅಡೆತಡೆಗಳೆಲ್ಲವನ್ನು ಮೆಟ್ಟಿ ನಿಂತು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026 ರ ಐಪಿಎಲ್​ನ ಉದ್ಘಾಟನಾ ಪಂದ್ಯವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಆ ಬಳಿಕ ನಡೆದ ಉಳಿದ ನಾಲ್ಕು ಲೀಗ್ ಪಂದ್ಯಗಳು ಕೂಡ ಯಾವುದೇ ಲೋಪದೋಷಗಳಿಲ್ಲದೆ ಮುಗಿದಿದ್ದವು. ಹೀಗಾಗಿ ಈ ಮೊದಲು ವರದಿಯಾದ ಪ್ರಕಾರ, ಈ ಆವೃತ್ತಿಯ ಫೈನಲ್ ಪಂದ್ಯಕ್ಕೂ ಬೆಂಗಳೂರು ಆತಿಥ್ಯವಹಿಸುವುದು ಖಚಿತ ಎನ್ನಲಾಗುತಿತ್ತು. ಆದರೆ ಲೀಗ್ ಹಂತ ಮುಗಿಯುವ ಹಂತದಲ್ಲಿರುವಾಗ ಪ್ಲೇ ಆಫ್ ಸುತ್ತಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಸಿಸಿಐ, ಕನ್ನಡಿಗರಿಗೆ ಹಾಗೂ ಆರ್​ಸಿಬಿ ಫ್ಯಾನ್ಸ್​ಗೆ ಬಿಗ್ ಶಾಕ್ ನೀಡಿದೆ. ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನ ಬದಲಿಗೆ ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ತನ್ನ ನಿರ್ಧಾರದ ಹಿಂದಿರುವ ಕಾರಣವನ್ನು ಸಹ ಬಿಸಿಸಿಐ ಬಹಿರಂಗಪಡಿಸಿದೆ.

ಪ್ಲೇ ಆಫ್ ಸುತ್ತಿನ ವೇಳಾಪಟ್ಟಿಯನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಬಿಸಿಸಿಐ, 2026ರ ಐಪಿಎಲ್​ನ ಪ್ಲೇ ಆಫ್ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, 70 ಲೀಗ್ ಪಂದ್ಯಗಳು ಮುಗಿದ ಬಳಿಕ ಈ ಸುತ್ತು ಆರಂಭವಾಗಲಿದೆ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಮೇ 26 ರಂದು ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್​ಗೇರಲಿದೆ. ಆ ನಂತರ ಮೇ 27 ರಂದು ಅಂಕಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ಎಲಿಮಿನೇಟರ್ ಪಂದ್ಯವನ್ನು ಆಡಲಿದ್ದು, ಈ ಪಂದ್ಯ ನ್ಯೂ ಚಂಡೀಗಢದ ನ್ಯೂ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಇದೇ ಮೈದಾನದಲ್ಲಿ ಎಲಿಮಿನೇಟರ್ 2 ಪಂದ್ಯ ನಡೆಯಲಿದ್ದು, ಕ್ವಾಲಿಫೈಯರ್ 1ರಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್​ನಲ್ಲಿ ಗೆದ್ದ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ಮೇ 31 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕ್ವಾಲಿಫೈಯರ್ 1 ಗೆದ್ದ ತಂಡದೊಂದಿಗೆ ಪ್ರಶಸ್ತಿಗಾಗಿ ಸೆಣಸಲಿದೆ ಎಂದಿದೆ

ಶಿಷ್ಟಾಚಾರದ ಉಲ್ಲಂಘನೆ
ಇದರ ಜೊತೆಗೆ ಫೈನಲ್ ಪಂದ್ಯವನ್ನು ಸ್ಥಳಾಂತರಿಸಿದ್ದು ಏಕೆ ಎಂಬುದನ್ನು ಬಹಿರಂಗಪಡಿಸಿರುವ ಬಿಸಿಸಿಐ, ಈ ಮೊದಲು ಬೆಂಗಳೂರಿನಲ್ಲಿ ಫೈನಲ್ ಪಂದ್ಯವನ್ನು ಆಯೋಜಿಸಲು ಗೊತ್ತುಪಡಿಸಲಾಗಿತ್ತು. ಆದರೆ ಸ್ಥಳೀಯ ಸಂಘ ಮತ್ತು ಅಧಿಕಾರಿಗಳು ಬಿಸಿಸಿಐನ ಮಾರ್ಗಸೂಚಿಗಳು ಮತ್ತು ಶಿಷ್ಟಾಚಾರಗಳಿಗೆ ವಿರುದ್ಧವಾದ ಕೆಲವು ಅವಶ್ಯಕತೆಗಳನ್ನು ಹೊಂದಿದ್ದರು. ಆದ್ದರಿಂದ, ಫೈನಲ್ ಪಂದ್ಯವನ್ನು ಸ್ಥಳಾಂತರಿಸುವುದು ಏಕೈಕ ಆಯ್ಕೆಯಾಗಿತ್ತು ಎಂದಿದೆ.

ಟಿಕೆಟ್​ಗಳಿಗಾಗಿ ಶಾಸಕರ ಬೇಡಿಕೆ
ವಾಸ್ತವವಾಗಿ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ನಡುವಿನ ಐಪಿಎಲ್ 2026 ರ ಉದ್ಘಾಟನಾ ಪಂದ್ಯಕ್ಕೂ ಮುನ್ನ, ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು, ಶಾಸಕರು ಸಾರ್ವಜನಿಕರಂತೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬ ಶಾಸಕರಿಗೂ ಪಂದ್ಯಗಳಿಗೆ ಕನಿಷ್ಠ ಐದು ಟಿಕೆಟ್‌ಗಳನ್ನು ನೀಡಬೇಕೆಂಬ ಬೇಡಿಕೆಯನ್ನಿಟ್ಟಿದ್ದರು. ಇದಾದ ನಂತರ, ಕೆಎಸ್​ಸಿಎ ಜೊತೆಗೆ ಸಭೆ ನಡೆಸಿದ್ದ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿ ಶಾಸಕರು ಮತ್ತು ಸಂಸದರಿಗೆ ಆರ್‌ಸಿಬಿ ಪಂದ್ಯಗಳಿಗೆ ಐದು ಟಿಕೆಟ್‌ಗಳ ಬದಲಿಗೆ ಮೂರು ಟಿಕೆಟ್‌ಗಳನ್ನು ನೀಡುವ ಒಪ್ಪಂದಕ್ಕೆ ಬರಲಾಗಿದೆ ಎಂದಿದ್ದರು. ಅದರಂತೆ ಬೆಂಗಳೂರಿನಲ್ಲಿ ನಡೆದ ಎಲ್ಲಾ ಪಂದ್ಯಗಳಿಗೂ ಶಾಸಕರು ಮತ್ತು ಸಂಸದರಿಗೆ ಮೂರು ಟಿಕೆಟ್‌ಗಳನ್ನು ನೀಡಲಾಗಿತ್ತು. ಇದನ್ನು ತನ್ನ ಹೇಳಿಕೆಯಲ್ಲಿ ಪರೋಕ್ಷವಾಗಿ ಉಲ್ಲೇಖಿಸಿರುವ ಬಿಸಿಸಿಐ ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಸ್ಥಳಾಂತರಿಸಲು ಪ್ರಮುಖ ಕಾರಣ ಎಂದಿದೆ.









error: Content is protected !!
Scroll to Top