ಉದ್ಯಮಿಗೆ ವಂಚನೆ, ಬ್ಲ್ಯಾಕ್ ಮೇಲ್ ಆರೋಪ – ಮಹಿಳೆಯ ಬಂಧನ

ಉಡುಪಿ : ಅಶ್ಲೀಲ ವಿಡಿಯೋಗಳಿವೆ ಎಂದು ಹೇಳಿ ಉದ್ಯಮಿಯೊಬ್ಬರನ್ನು ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಪಡುಬಿದ್ರೆ ಕಂಚಿನಡ್ಕ ಮಸೀದಿ ಸಮೀಪದ ನಿವಾಸಿ ಝೀನತ್ ಇಬ್ರಾಹೀಂ ಬಂಧಿತ ಆರೋಪಿ. ಉಡುಪಿ ಮೂಲದ ರಿಯಲ್ ಎಸ್ಟೆಟ್ ವ್ಯವಹಾರ ಮಾಡಿಕೊಂಡಿದ್ದ ಉದ್ಯಮಿಗೆ ಝೀನತ್ ಇಬ್ರಾಹೀಂ ಪರಿಚಯವಾಗಿದ್ದು, ಬಳಿಕ ಅವರಿಬ್ಬರು ಸೇರಿ ಜಂಟಿಯಾಗಿ ರಿಯಲ್ ಎಸ್ಟೇಟ್ ಕಚೇರಿ ಪ್ರಾರಂಭಿಸಿದ್ದರು. ಆ ವ್ಯಕ್ತಿ ಝೀನತ್‌ಳ ಮಾತುಗಳನ್ನು ನಂಬಿ ಹೂಡಿಕೆ ಮಾಡುವ ಉದ್ದೇಶದಿಂದ 70 ಲಕ್ಷ ರೂ. ಆಕೆಗೆ ನೀಡಿದ್ದರು. ಈ ಹಣವನ್ನು ಝೀನತ್ ಜಮೀನು ಖರೀದಿಗೆ ಬಳಸದೇ ತನ್ನ ಸ್ವಂತ ಉದ್ದೇಶಗಳಿಗಾಗಿ ಬಳಸಿಕೊಂಡು ಮೋಸ ಮಾಡಿದ್ದಳು ಎಂದು ದೂರಲಾಗಿದೆ.

ಉದ್ಯಮಿ ತನ್ನ ಕಚೇರಿಯನ್ನು ಮುಚ್ಚುವ ಸಂದರ್ಭದಲ್ಲಿ ಅಲ್ಲಿದ್ದ ಕೆಲವು ರಹಸ್ಯ ಕಡತಗಳು ಮತ್ತು ಪೆನ್ ಡ್ರೈವ್ ಸಿಕ್ಕಿದ್ದು, ಅದರಲ್ಲಿ ಹಲವಾರು ಪ್ರಭಾವಿ ಗಣ್ಯ ವ್ಯಕ್ತಿಗಳ ಖಾಸಗಿ ಮತ್ತು ಅಶ್ಲೀಲ ಛಾಯಾಚಿತ್ರಗಳು ಹಾಗೂ ವಿಡಿಯೋಗಳು ಇರುವುದು ಕಂಡುಬಂದಿದೆ ಎಂದು ದೂರಲಾಗಿದೆ.

ಉದ್ಯಮಿಯು 70 ಲಕ್ಷ ರೂ. ವಾಪಸ್ ನೀಡುವಂತೆ ಝೀನತ್‌ಳಲ್ಲಿ ಕೇಳಿದಾಗ, ಆಕೆ ಉದ್ಯಮಿಯ ಹೊಸ ಕಚೇರಿಗೆ ಬಂದು, ಮತ್ತಷ್ಟು ಹಣಕ್ಕೆ ಬೇಡಿಕೆ ಇಡಲು ಪ್ರಾರಂಭಿಸಿದಳು. ಹಣ ನೀಡದಿದ್ದರೆ ಉದ್ಯಮಿ ವಿರುದ್ದ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಳು. ಝೀನತ್ ತನ್ನ ಬಳಿ ಉದ್ಯಮಿಯ ಅಶ್ಲೀಲ ವಿಡಿಯೋಗಳಿವೆ ಎಂದು ಹೇಳಿ ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡತೊಡಗಿದ್ದಲ್ಲದೆ, ಅವರ ಪತ್ನಿ ಮಕ್ಕಳನ್ನು ಅಪಹರಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾಳೆ ಎಂದು ದೂರಲಾಗಿದೆ.

ಸಬೀನಾ ಇಲ್ಯಾಸ್ ಹಾಗೂ ಇತರರು ಝೀನತ್‌ಳೊಂದಿಗೆ ಸೇರಿ ಬ್ಲ್ಯಾಕ್ ಮೇಲ್ ಮಾಡಿ ಅಕ್ರಮವಾಗಿ ಹಣ ವಸೂಲಿ ಮಾಡಿ ವಂಚನೆಯ ಜಾಲವನ್ನು ನಡೆಸುತ್ತಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆಗಾಗಿ ನಗರ ಠಾಣೆಯ ಎಸ್ಸೈ ಭರತೇಶ್ ಕಂಕಣವಾಡಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಈ ತಂಡವು ಜು.2ರಂದು ಝೀನತ್‌ಳನ್ನು ಪಡುಬಿದ್ರೆಯ ಕಂಚಿನಡ್ಕ ಎಂಬಲ್ಲಿ ಬಂಧಿಸಿತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚುವರಿ ತನಿಖೆಗಾಗಿ ಆರೋಪಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.









error: Content is protected !!
Scroll to Top